ವಿಧಾನಸಭೆ[ಅ.13]: ಸದನದ ಕಲಾಪಗಳನ್ನು ವರದಿ ಮಾಡಲು ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳಿಗೆ ಮತ್ತು ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ಹೇರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

2019-20ನೇ ಸಾಲಿನ ಕೆಳಕಂಡ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಬಹಳ ಮುಖ್ಯವಾದುದು. ಸದನದಲ್ಲಿ ನಡೆಯುವ ಕಾರ್ಯಕಲಾಪಗಳ ವರದಿ ಮಾಡುವುದು ಮಾಧ್ಯಮಗಳ ಹಕ್ಕು. ನಿರ್ಬಂಧ ಹೇರುವ ಮೂಲಕ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಚ್ಯುತಿ ತರಲಾಗಿದೆ. ಹೀಗಾಗಿ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳಿಗೆ ಮತ್ತು ಪತ್ರಿಕಾ ಛಾಯಾಗ್ರಾಹರಿಗೆ ನಿಷೇಧ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಪೆಟ್ಟು ನೀಡಿದಂತಾಗಿದೆ ಎಂದು ಹೇಳಿದರು.

ಮಾಧ್ಯಮಗಳಿದ್ದರೆ ಸದನದ ಕೆಲವು ಸದಸ್ಯರಿಗೆ ಮಾತನಾಡಲು ಹುಮ್ಮಸ್ಸು ಬರುತ್ತಿತ್ತು. ಇನ್ನು ಕೆಲವರು ಎಚ್ಚರಿಕೆಯಿಂದ ಇರುತ್ತಿದ್ದರು. ಚರ್ಚೆಗಳು ಪಾರದರ್ಶಕತೆಯಿಂದ ನಡೆಯಲು ಸಹಕಾರಿಯಾಗುತ್ತದೆ. ಚರ್ಚೆಗಳು ಯಾವ ರೀತಿಯಲ್ಲಿ ನಡೆಯುತ್ತಿವೆ ಎಂಬುದು ರಾಜ್ಯದ ಜನರಿಗೂ ಗೊತ್ತಾಗಬೇಕು. ರಾಜ್ಯದಲ್ಲಿ ಎಲ್ಲರೂ ಪತ್ರಿಕೆ ಓದುವುದಿಲ್ಲ. ಸಾಕಷ್ಟುಮಂದಿ ಇನ್ನೂ ಅವಿದ್ಯಾವಂತರಿದ್ದು, ಅವರಿಗೆ ಸುಲಭವಾಗಿ ದೃಶ್ಯ ಮಾಧ್ಯಮಗಳ ಮೂಲಕ ಅರ್ಥವಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾಧ್ಯಮಗಳ ನಿರ್ಬಂಧ ಬಗ್ಗೆ ಟ್ವೀಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ಅದನ್ನು ಅಳಿಸಿ ಹಾಕಲಾಯಿತು. ಯಾವ ಕಾರಣಕ್ಕಾಗಿ ಅಳಿಸಿದರು ಎಂಬುದು ಗೊತ್ತಿಲ್ಲ. ಮಾಧ್ಯಮಗಳ ಕ್ಯಾಮೆರಾಗಳ ಮತ್ತು ಛಾಯಾಗ್ರಾಹಕರ ನಿರ್ಬಂಧ ತೆರವು ಮಾಡುವ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳು ಮತ್ತು ಸಭಾಧ್ಯಕ್ಷರು ಚರ್ಚಿಸಬೇಕು ಎಂದರು.