ಮಾತೃವಂದನ, ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
‘ಮಾತೃವಂದನ’ ಹಾಗೂ ‘ಮಾತೃಪೂರ್ಣ’ ಯೋಜನೆಗಳಿಗೆ ಬಜೆಟ್ ಅನುದಾನ ನೀಡಿಲ್ಲ ಎಂಬುದು ಸುಳ್ಳು. ಶಿಶು ಹಾಗೂ ಮಹಿಳೆಯರ ಪೌಷ್ಟಿಕತೆ ನಮ್ಮ ಇಲಾಖೆಯ ಪ್ರಮುಖ ಉದ್ದೇಶ.
ಬೆಂಗಳೂರು (ಜು.16): ‘ಮಾತೃವಂದನ’ ಹಾಗೂ ‘ಮಾತೃಪೂರ್ಣ’ ಯೋಜನೆಗಳಿಗೆ ಬಜೆಟ್ ಅನುದಾನ ನೀಡಿಲ್ಲ ಎಂಬುದು ಸುಳ್ಳು. ಶಿಶು ಹಾಗೂ ಮಹಿಳೆಯರ ಪೌಷ್ಟಿಕತೆ ನಮ್ಮ ಇಲಾಖೆಯ ಪ್ರಮುಖ ಉದ್ದೇಶ. ಇವು ಮುಂದುವರೆದ ಯೋಜನೆಗಳಾಗಿದ್ದು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಅವಶ್ಯಕತೆ ಇರುವುದಿಲ್ಲ. ಈ ಬಗ್ಗೆ ಅಪಪ್ರಚಾರ ಬೇಡ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ‘ಮಾತೃವಂದನ’ ಯೋಜನೆಯು (ಪಿಎಂಎಂವಿವೈ) ಕೇಂದ್ರ ಸರ್ಕಾರದ ಪ್ರಾಯೋಜಿತ ಡಿಬಿಟಿ ಯೋಜನೆ. ಇದರಡಿ ನೇರವಾಗಿ ನಗದು ಪ್ರೋತ್ಸಾಹವನ್ನು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ನೀಡಲಾಗುತ್ತದೆ. ಇನ್ನು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ‘ಮಾತೃಪೂರ್ಣ’ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯನ್ನೂ ಸುಧಾರಿಸಲು ಮುಂದಾಗಿದ್ದೇವೆಯೇ ಹೊರತು ಈ ಯೋಜನೆ ಸ್ಥಗಿತವಾಗಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು: ಎಡಿಆರ್ ವರದಿ
‘ಬಾಣಂತಿಯರು, ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಪೌಷ್ಟಿಕ ಆಹಾರ ಸೇವಿಸಿ ಬರಬೇಕು. ಬಿಸಿಲು, ಮಳೆ ಮತ್ತಿತರ ಕಾರಣಗಳಿಗೆ ಅವರು ಅಂಗನವಾಡಿಗೆ ಬರಲಾಗುವುದಿಲ್ಲ. ಇದರಿಂದ ಯೋಜನೆ ಎಲ್ಲರನ್ನೂ ಮುಟ್ಟುತ್ತಿಲ್ಲ. ಇದು ಶಿಶು ಅಭಿವೃದ್ಧಿ ಯೋಜನೆಯಡಿ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವಾಗಿದ್ದು, ಯೋಜನೆ ಎಲ್ಲರನ್ನೂ ಮುಟ್ಟಲು ಅಗತ್ಯ ಸುಧಾರಣೆಗಳನ್ನು ಮಾಡಲು ಉದ್ದೇಶಿಸಲಾಗಿದೆ. ಆದರೆ ಈ ಯೋಜನೆ ನಿಲ್ಲಿಸುತ್ತಾರೆ ಎಂಬುದು ಶುದ್ಧ ಸುಳ್ಳು. ಇದಕ್ಕೆ ಇಲಾಖೆಯೇ ಅನುದಾನ ಒದಗಿಸಲಿದೆ’ ಎಂದು ಸ್ಪಷ್ಟಪಡಿಸಿದರು.
ತನಿಖೆಗೆ ಆದೇಶ: ‘ಶಾಲಾ ಮಕ್ಕಳಿಗೆ ಕಳಪೆ ಮೊಟ್ಟೆಪೂರೈಸುತ್ತಿರುವ ಬಗ್ಗೆ ರಾಜ್ಯಾದ್ಯಂತ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕಳಪೆ ಮೊಟ್ಟೆ ವಿತರಿಸುತ್ತಿರುವ ಪ್ರಕರಣಗಳು ವರದಿಯಾದ ಜಿಲ್ಲೆಗಳಷ್ಟೇ ಅಲ್ಲ ರಾಜ್ಯಾದ್ಯಂತ ತನಿಖೆಗೆ ಸೂಚಿಸಿದ್ದೇನೆ. ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡವನ್ನೂ ರಚನೆ ಮಾಡಲಾಗಿದೆ. ತಂಡವು ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಲೋಕಸಭಾ ಚುನಾವಣೆ: ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಸೋಮಣ್ಣ
‘ಇನ್ನು ಈಗಾಗಲೇ ಕಳಪೆ ಮೊಟ್ಟೆಪೂರೈಕೆಯಾಗಿರುವ ಕಡೆಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆದು ಮೊಟ್ಟೆಪೂರೈಕೆ ಗುತ್ತಿಗೆ ನೀಡಿರುವ ಕಾರಣ ಆಯಾ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮವಹಿಸಲು ತಿಳಿಸಲಾಗಿದೆ. ಇನ್ನು ಮೊಟ್ಟೆಪೂರೈಸಿದ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು. ‘ಅಂಗನವಾಡಿಗೆ ವಿತರಣೆಯಾಗುವ ಪೌಷ್ಟಿಕ ಆಹಾರದ ಗುಣಮಟ್ಟದ ಬಗ್ಗೆಯೂ ಗಮನಕ್ಕೆ ಬಂದಿದೆ. ಹಲವೆಡೆ ತಿನ್ನಲು ಯೋಗ್ಯವಲ್ಲದ ಆಹಾರ ನೀಡಲಾಗುತ್ತಿದೆ. 3 ವರ್ಷದೊಳಗಿನ ಮಕ್ಕಳಿಗೆ ಅತಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಈಗಾಗಲೇ ಕ್ರಮಕ್ಕೆ ಸೂಚಿಸಿದ್ದೇನೆ’ ಎಂದರು.