ಲೋಕಸಭಾ ಚುನಾವಣೆ: ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಸೋಮಣ್ಣ
ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣ ಇದೀಗ ಮುಂದಿನ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಬೆಂಗಳೂರು (ಜು.16): ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣ ಇದೀಗ ಮುಂದಿನ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಮೂಲಕ ಪಕ್ಷಕ್ಕೆ ಮತ್ತೊಂದು ತಲೆಬಿಸಿಯನ್ನುಂಟು ಮಾಡಿದ್ದಾರೆ. ಕಳೆದ ಎರಡು ದಿನದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತ ಸಭೆ ನಡೆಸುತ್ತಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿ, ಪಕ್ಷವು ತಮಗೆ ಬೆಂಗಳೂರು ದಕ್ಷಿಣ ಕ್ಷೇತ್ರದ (ಈಗ ಬಿಜೆಪಿಯ ತೇಜಸ್ವಿ ಸೂರ್ಯ ಪ್ರತಿನಿಧಿಸುವ ಕ್ಷೇತ್ರ) ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
‘ನಾನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದೇನೆ. ನಾನು ಸಹ ಟಿಕೆಟ್ ಆಕಾಂಕ್ಷಿ. ಕಳೆದ 20 ವರ್ಷಗಳಿಂದ ಒಂದೇ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಬೇರೆ ಸಮುದಾಯಕ್ಕೆ ಟಿಕೆಟ್ ನೀಡಬೇಕು’ ಎಂದು ಹೇಳಿದರು. ‘ಪಕ್ಷದ ವರಿಷ್ಠರು ನನ್ನ ಅಭಿಪ್ರಾಯವನ್ನು ಗೌರವಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ಬದ್ಧವಾಗಿ ಚಿನ್ನದಂತಹ ಕ್ಷೇತ್ರ ಬಿಟ್ಟು ಹೋಗಿದ್ದೇನೆ. ನಾನು ವರಿಷ್ಠರು ನೀಡುವ ಯಾವುದೇ ಸವಾಲು ಸ್ವೀಕರಿಸಲು ಬದ್ಧವಾಗಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ.
ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಮಾಜಿ ಸಚಿವ ವಿ.ಸೋಮಣ್ಣ
ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಈ ಬಾರಿ ದೊಟ್ಟಮಟ್ಟದಲ್ಲಿ ಬೆಂಬಲ ನೀಡೋಣ’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ‘ನಮ್ಮ ಬೇಡಿಕೆ ಕುರಿತು ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ನೋಡಲಾಗುವುದು. ಮತ್ತೊಂದು ಬಾರಿ ನನ್ನ ಕಾರ್ಯಕರ್ತರನ್ನು ಕರೆದು ಚರ್ಚೆ ನಡೆಸುತ್ತೇನೆ. ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಕುಳಿತು ಚರ್ಚೆ ನಡೆಸಲಾಗುವುದು’ ಎಂದರು.
ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸುವೆ: ವಿ.ಸೋಮಣ್ಣ
ಶಿಸ್ತು ಸಮಿತಿ ಕಾರ್ಯವೈಖರಿಗೆ ಬೇಸರ: ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಚಾಮರಜನಗರದಲ್ಲಿ ತಮ್ಮ ಸೋಲಿಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಪಕ್ಷದ ಶಿಸ್ತು ಸಮಿತಿಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಭಾವುಕರಾದ ಸೋಮಣ್ಣ, ‘ನೊಟೀಸ್ ಕೊಟ್ಟು ಸುಮ್ಮನಾಗುವುದು ಸರಿಯಲ್ಲ. ಪಕ್ಷದ ವಿರೋಧಿಗಳ ಮೇಲೆ ಕ್ರಮ ಜರುಗಿಸಬೇಕು. ಕಾಟಾಚಾರಕ್ಕೆ ನೋಟಿಸ್ ನೀಡಿ ಸುಮ್ಮನಾದರೆ ನಾನು ಸಹಿಸುವ ಪ್ರಶ್ನೆಯೇ ಇಲ್ಲ. ಪಕ್ಷಕ್ಕೆ ಮೋಸ ಮಾಡುವವರನ್ನು ಸಹಿಸಿಕೊಳ್ಳುವುದು ತಾಯಿಗೆ ದ್ರೋಹ ಮಾಡಿದಂತಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ನನ ಸೋಲಿಗೆ ಕಾರಣರಾದವರ ಮೇಲೆ ಕ್ರಮ ಆಗಲೇಬೇಕು’ ಎಂದು ಒತ್ತಾಯಿಸಿದರು.