ಬಾಣಂತಿ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯ ದಂತೆ ಬಾಣಂತಿಯರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಸಕಾಲಕ್ಕೆ ಚಿಕಿತ್ಸೆ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ತಾಯಂದಿರ ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು: ಸಚಿವ ದಿನೇಶ ಗುಂಡೂರಾವ್‌

ರಾಯಚೂರು(ಜ.23):  ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಮಾಣವನ್ನು ತಗ್ಗಿಸಲು, ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಂಡಿರುವ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರು ಜಿಲ್ಲೆಯಿಂದಲೆಯೇ ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್‌ ಅವರು ಬುಧವಾರ ಚಾಲನೆ ನೀಡಿದರು.

ಸ್ಥಳೀಯ ತಾಯಿ ಮತ್ತು ಮಕ್ಕಳ ಸರ್ಕಾರಿ (ಹಳೆಯ ಜಿಲ್ಲಾಸ್ಪತ್ರೆ ಆವರಣ) ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾತೃತ್ವ ಸುರಕ್ಷಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಬಾಣಂತಿ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯದಂತೆ ಬಾಣಂತಿಯರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಸಕಾಲಕ್ಕೆ ಚಿಕಿತ್ಸೆ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ತಾಯಂದಿರ ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ರಾಯಚೂರು ಜಿಲ್ಲೆಯಿಂದಲೇ ಮಾತೃತ್ವ ಸುರಕ್ಷಾ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗುವುದು. ಈ ಅಭಿಯಾನದಡಿ ಪ್ರತಿ ತಿಂಗಳು ಎರಡು ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ಅಗತ್ಯವಾದ ಪೌಷ್ಠಿಕಾಂಶದ ಆಹಾರ, ಆರೋಗ್ಯ ಸೇವೆಯನ್ನು ಒದಗಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಆಯುರ್ವೇದ, ಪಾರಂಪರಿಕ ಔಷಧ ದುರ್ಬಳಕೆ ತಡೆಗೆ ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದ ವಿವಿಧೆಡೆ ಬಾಣಂತಿಯರ ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.1 ಲಕ್ಷಕ್ಕೆ 64 ಬಾಣಂತಿಯರ ಸಾವು ಸಂಭವಿಸಿದ್ದು, ಇದನ್ನು ಶೂನ್ಯಕ್ಕೆ ಅಲ್ಲದಿದ್ದರೂ ಕನಿಷ್ಠ ಸಂಖ್ಯೆಗೆ ತರಲು ಪ್ರಯತ್ನಿಸಲಾಗುವುದು. ಗರ್ಭಿಣಿಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿರುವಂತೆ ಎಲ್ಲಾ ಕಡೆಗೆ ಕಡ್ಡಾಯವಾಗಿ ಅವರಿಗೆ ಗುಣಮಟ್ಟದ ಚಿಕಿತ್ಸೆ ದೊರೆತು, ತಾಯಂದಿರ ಅನಾರೋಗ್ಯ ಪ್ರಕರಣಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದು ಶೂನ್ಯಕ್ಕೆ ತರುವ ರೀತಿಯಲ್ಲಿ ಜಾಗೃತಿ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಸೇರಿದಂತೆ ಎಲ್ಲಾ ಕಡೆಗೆ ಆದ್ಯತೆಯ ಮೇರೆಗೆ ಈ ಅಭಿಯಾನ ಜರುಗಿಸಲಾಗುವುದು ಎಂದು ತಿಳಿಸಿದರು.

ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ ಓಬಿಜಿವೈ ತಜ್ಞ ವೈದ್ಯರಿಂದ ಗರ್ಭಿಣಿಯರಿಗೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕನಿಷ್ಠ ಒಂದು ಪ್ರಸವಪೂರ್ವ ತಪಾಸಣೆ ನಡೆಯಬೇಕು. ಪ್ರಸವ ಪೂರ್ವ ಸಮಯದಲ್ಲಿ ಆರೈಕೆಯ ಗುಣಮಟ್ಟ ಸುಧಾರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಮಿನಿ ಜಿಲ್ಲಾಸ್ಪತ್ರೆ: 

ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಸೌಕರ್ಯ ಸಿಗುವ ರೀತಿಯಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳನ್ನು ಮಿನಿ ಜಿಲ್ಲಾಸ್ಪತ್ರೆಗಳನ್ನಾಗಿಸಲು ಕ್ರಮ ವಹಿಸಲಾಗುವುದು. ತಾಲೂಕು ಆಸ್ಪತ್ರೆಗಳು ಸಹ ದಿನದ 24 ಗಂಟೆ ಕಾರ್ಯ ನಿರ್ವಹಿಸಿ ಜನತೆಗೆ ಉತ್ತಮ ಸೇವೆ ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದು, ಗ್ರಾಮೀಣ ಭಾಗದ ಜನತೆಗೆ ಸಹ ಉತ್ತಮ ವೈದ್ಯಕೀಯ ಸೌಕರ್ಯ ಸಿಗುವ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸಲಿದ್ದು ಅಗತ್ಯ ತಕ್ಕಂತೆ ಸವಲತ್ತುಗಳನ್ನು ಒದಗಿಸಿ ಮಿನಿ ಜಿಲ್ಲಾಸ್ಪತ್ರೆಗಳ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ ಎಂದರು.

ಆಶಾಗೆ 10 ಸಾವಿರ ಗ್ಯಾರಂಟಿ:

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಪ್ರಯತ್ನದ ಭಾಗವಾಗಿ ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು.ಆರೋಗ್ಯ ಇಲಾಖೆಯ ಕಾರ್ಯಗಳಿಗೆ ಕೈಜೋಡಿಸಿ ಕಾರ್ಯಪ್ರವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ಬರುವ ಏಪ್ರಿಲ್ ನಿಂದ ಕನಿಷ್ಠ 10 ಸಾವಿರ ರು.ಗೌರವಧವನ್ನು ಗ್ಯಾರಂಟಿಯಾಗಿ ಒದಗಿಸಲಾಗುವುದು ಎಂದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ರಾಯಚೂರ ಜಿಲ್ಲೆಗೆ ಸುಸಜ್ಜಿತ ಜಿಲ್ಲಾಸ್ಪತ್ರೆ ಅವಶ್ಯಕವಾಗಿದ್ದು, ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನು ಸುಧಾರಣೆಯಾಗಬೇಕಿದೆ. ಈ ಭಾಗದ ವೈದ್ಯರು ಮತ್ತು ಸಿಬ್ಬಂದಿಯು ಜನತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಬಡ ಕುಟುಂಬಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಜೀದ್ ಸಮೀರ, ಹಿರಿಯ ಸದಸ್ಯ ಜಯಣ್ಣ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಸೇರಿ ಇಲಾಖೆಯ ವಿವಿಧ ವಿಭಾಗದ ಅಧಿಕಾರಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ಮಹಿಳೆಯರು, ಗರ್ಭೀಣಿಯರು ಇದ್ದರು.

ಹೊಸ ಪಿಎಚ್‌ಸಿ, ಸಿಎಚ್‌ಸಿ ಪ್ರಾರಂಭ

ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರಲಾಗುತ್ತದೆ. ಆ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಿಂದ ಸುಮಾರು 900 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಇದರನ್ವಯ ರಾಯಚೂರು ಜಿಲ್ಲೆಗೆ 8 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿಯಲ್ಲಿ ನಗರ ಆರೋಗ್ಯ ಕೇಂದ್ರ, ರಾಯಚೂರು ನಗರದಲ್ಲಿ ಸಮುದಾ ಯ ಆರೋಗ್ಯ ಕೇಂದ್ರ ಅಲ್ಲದೇ ಜಿಲ್ಲೆಯ ಯಾವುದಾದರು ತಾಲೂಕಿನಲ್ಲಿ ಉಪವಿಭಾಗದ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭಿಸಲು ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.

ಮಾನ್ವಿ ಪಟ್ಟಣದ ತಾಯಿ- ಮಕ್ಕಳ ಆಸ್ಪತ್ರೆಗೆ ಉಭಯ ಸಚಿವರ ಭೇಟಿ

ಮಾನ್ವಿ: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಬುಧವಾರ ಭೇಟಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಸಚಿವರು, ಆಸ್ಪತ್ರೆಯ ವಾರ್ಡ್‌ಗಳಿಗೆ ಸಂಚರಿಸಿ ಬಾಣಂತಿಯರ ಆರೋಗ್ಯ ವಿಚಾರಿಸಿದರು. ಪ್ರತಿ ದಿನ ನಿಮಗೆ ಸರಿಯಾದ ರೀತಿಯಲ್ಲಿ ಊಟ ನೀಡುತ್ತಾರೆಯೆ? ಚಿಕಿತ್ಸೆ ಮತ್ತು ಔಷಧಿಯನ್ನು ಸರಿಯಾಗಿ ಕೊಡುತ್ತಾರಾ? ಎಂದು ಕೇಳಿ ಬಾಣಂತಿಯರ ಯೋಗಕ್ಷೇಮ ವಿಚಾರಿಸಿದರು.

ಆಸ್ಪತ್ರೆಯಲ್ಲಿ ನಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ. ಎಲ್ಲ ವೈದ್ಯರು ನಮಗೆ ಉತ್ತಮ ಚಿಕಿತ್ಸೆ ಕೊಡುತ್ತಾರೆ. ರೋಗಿಗಳಿಗೆ ಸ್ಪಂದಿಸುತ್ತಾರೆ ಎಂದು ಇದೆ ವೇಳೆ ಬಾಣಂತಿಯರು ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಆಸ್ಪತ್ರೆಯಲ್ಲಿನ ಅಲ್ಟ್ರಾ ಸೌಂಡ್ ಸೇರಿದಂತೆ ಇತರೆ ಉಪಕರಣಗಳನ್ನು ಪರಿಶೀಲಿಸಿದ ನಂತರ ಸಚಿವರು ಆಪರೇಷನ್ ಕೇರ್ ವಾರ್ಡ್ ನಲ್ಲಿರುವ ರೋಗಿಗಳಿಗೆ ಹಣ್ಣು ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ, ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಹಾಗೂ ವೈದ್ಯರ ಲಭ್ಯತೆ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯ ಬಗ್ಗೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.

ರಾತ್ರಿ ವೇಳೆಯಲ್ಲೂ ಚಿಕಿತ್ಸೆ ನೀಡಿ:

ಯಾವುದೇ ಗ್ರಾಮದಿಂದ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು. ಯಾವುದೇ ನೆಪ ಹೇಳದೇ ಬೇರೆಡೆ ಕಳುಹಿಸಬಾರದು. ಪ್ರಥಮ ಹಂತದ ಚಿಕಿತ್ಸೆಗೆ ಕ್ರಮವಹಿಸಿ, ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದರೆ ಮಾತ್ರ ಬೇರೆಡೆ ಕಳುಹಿಸಲು ಕ್ರಮವಹಿಸಬೇಕು ಎಂದು ಸಚಿವರು ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಚಿವರಿಗೆ ಮನವಿ: 

ಇದೇ ವೇಳೆ ನರ್ಸ್ ಸಿಬ್ಬಂದಿ ವೇತನ ಹೆಚ್ಚಳ ಮಾಡುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ವೇತನ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಡಿಸಿ ನಿತೀಶ್ ಕೆ., ಸಿಇಒ ಪಾಂಡ್ವೆ ರಾಹುಲ್ ತುಕಾರಾಮ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ , ಡಿಎಚ್ಒ ಡಾ. ಸುರೇಂದ್ರಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ್, ಉಪ ಆರೋಗ್ಯಾಧಿಕಾರಿ ಅರವಿಂದ್ ಮತ್ತು ಸಹಾಯಕ ಆರೋಗ್ಯ ಅಧಿಕಾರಿ ಶರಣಪ್ಪ ಸೇರಿ ಅನೇಕರು ಇದ್ದರು.

ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ

ಮಾನ್ವಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶ್ರೀಘದಲ್ಲಿ ಭರ್ತಿಗೆ ಕ್ರಮ ವಹಿಸಲಾಗುವುದು. ಆಸ್ಪತ್ರೆಯಲ್ಲಿ ತುರ್ತ ಚಿಕಿತ್ಸೆಗೆ ಅನುಕೂಲವಾಗುವಂತೆ ಅವಶ್ಯಕತೆ ಇರುವ ಕಡೆಗಳಲ್ಲಿ ನಿಯಮಾನುಸಾರ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಕೈ ನಾಯಕರ ಕಲರವ

ರಾಯಚೂರು: ಸರ್ಕಾರಿ ಕಾರ್ಯಕ್ರಮದ ವೇದಿಕೆಯ ಮೇಲೆ ಕಾಂಗ್ರೆಸ್ (ಕೈ) ಪಕ್ಷದ ನಾಯಕರ ಕಲರವಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ , 1:30 ತಾಸು ತಡವಾಗಿ ಕಾರ್ಯಕ್ರಮ ಆರಂಭಗೊಂಡಿದ್ದಕ್ಕೆ ದೂರದಿಂದ ಮಕ್ಕಳು-ಮರಿಯನ್ನು ಕಟ್ಟಿಕೊಂಡು ಬಂದಿದ್ದ ಮಹಿಳೆಯರು,ಗರ್ಭೀಣಿಯರು, ಬಾಣಂತಿಯರು ಕಾದು ಸುಸ್ತುಕೊಂಡು ಆಯೋಜಕರ ಮೇಲೆ ಹಿಡಿಶಾಪ, ಗುತ್ತಿಗೆ ನೌಕರರ ಸಮಸ್ಯೆ ಆಲಿಸದೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಓಡಿದ ಸಚಿವ ನಡೆಯಿಂದ ಬೇಸರ, ಎದ್ದು ಕಂಡಿತು ಉಸ್ತುವಾರಿ ಸಚಿವ, ಕೈ ಪಕ್ಷ ಒಂದು ಬಣದ ಶಾಸಕರ ಗೈರು.

ಇದು ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಹಳೆ ಜಿಲ್ಲಾಸ್ಪತ್ರೆ ಆವರಣ)ಯಲ್ಲಿ ಹಮ್ಮಿಕೊಂಡಿದ್ದ ಮಾತೃತ್ವ ಸುರಕ್ಷಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ಹೈಲೆಟ್ಸ್ ! ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಯಚೂರು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾತೃತ್ವ ಸುರಕ್ಷಾ ಅಭಿಯಾನವನ್ನು ಮಹತ್ವಾಕಾಂಕ್ಷೆಯ ಜಿಲ್ಲೆ ರಾಯಚೂರಿನಿಂದಲೇ ಅಭಿಯಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಚಾಲನೆ ನೀಡಿದ್ದು, ವಿಶೇಷವಾಗಿದ್ದರೆ. ಕಾರ್ಯಕ್ರಮದಲ್ಲಿ ನಡೆದಂತಹ ಹಲವಾರು ಎಡವಟ್ಟುಗಳು ಮತ್ತೊಂದು ಮುಖವನ್ನು ಪರಿಚಯಿಸಿತು.

ಶಿಷ್ಠಾಚಾರ ಗಾಳಿಗೆ: 

ಆರೋಗ್ಯ ಇಲಾಖೆ ರೂಪಿಸಿರುವ ರಾಜ್ಯ ಮಟ್ಟದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಜಿಲ್ಲೆಯಿಂದಲೆಯೇ ಚಾಲನೆ ನೀಡಿದಂತಹ ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಅವರ ಪತಿ ನರಸಿಂಹಲು ಮಾಡಗಿರಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಥಿಸಿ ಅಪಾರಭವಗೊಂಡಿದ್ದ ಮಹಮ್ಮದ್‌ ಶಾಲಂ ಹಾಗೂ ಸಮಾರಂಭಕ್ಕೆ ಯಾವುದೇ ಸಂಬಂಧವಿಲ್ಲದ ಕಾಂಗ್ರೆಸ್‌ ಹಿರಿಯ ಮುಖಂಡ, ಆರ್‌ಎಪಿಎಂಸಿಯ ಅಧ್ಯಕ್ಷ ಜಯವಂತರಾವ್‌ ಪತಂಗೆ ಅವರು ಕಾಣಿಸಿಕೊಂಡರು. ಶಿಷ್ಠಾಚಾರವನ್ನು ಗಾಳಿಗೆ ತೂರಿ ವೇದಿಕೆ ಹಂಚಿಕೊಂಡಿದ್ದಕ್ಕೆ ಆಯೋಜಕರಿಗೆ ಸಂಕಟವಾಗಿತ್ತು.

ಕಾದು ಕಾದು ಸುಸ್ತು:

ಬೆಳಗ್ಗೆ 10:30 ಕ್ಕೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ 12ಕ್ಕೆ ಶುರುವಾಯ್ತು, ಸುಮಾರು 1:30 ತಾಸು ತಡವಾಗಿದ್ದಕ್ಕೆ ಮಕ್ಕಳು-ಮರಿಯನ್ನು ಕಟ್ಟಿಕೊಂಡು ದೂರದಿಂದ ಬಂದಿದ್ದ ಮಹಿಳೆಯರು, ಗರ್ಭೀಣಿಯರು, ಬಾಣಂತಿಯರು ಕಾದು ಸುಸ್ತಾದರು. ಹೆಚ್ಚಿನ ಬಿಸಿಲಿನಿಂದಾಗಿ ಕುಡಿಯುವ ನೀರು, ಶಕೆಯಿಂದ ಸಮಸ್ಯೆ ಅನುಭವಿಸಿದರು.

ಗೃಹ ಆರೋಗ್ಯ ಯೋಜನೆ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

ಸಮಾರಂಭದ ಬಳಿಕ ಇಲಾಖೆಯ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರು, ಸಿಬ್ಬಂದಿ ಹಲವಾರು ಸಮಸ್ಯೆಗಳನ್ನು ಸಚಿವರ ಬಳಿಗೆ ಹೇಳಿಕೊಳ್ಳಲು ಬಂದರು ಈ ವೇಳೆ ಕೆಲವರ ಮನವಿ ಸ್ವೀಕರಿಸಿದ ಸಚಿವರು ಅವರ ಸಮಸ್ಯೆಗಳನ್ನು ಆಲಿಸದೇ ಖಾಸಗಿ (ಹೊಸ ಆಸ್ಪತ್ರೆ ಉದ್ಘಾಟನೆ) ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಸರ ಮಾಡಿದ್ದರಿಂದ ಸಚಿವರ ಮುಂದೆ ಅಳಲು ತೋಡಿಕೊಳ್ಳಲು ಬಂದಿದ್ದ ಅಧಿಕಾರಿ, ಸಿಬ್ಬಂದಿ ನಿರಾಸೆ ಅನುಭವಿಸಿದರು.

ಒಂದು ಬಣದ ಶಾಸಕರ ಗೈರು

ಸರ್ಕಾರದ ರಾಜ್ಯ ಮಟ್ಟದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹಾಗೂ ಜಿಲ್ಲಾ ಕಾಂಗ್ರೆಸ್‌ ನ ಒಂದು ಬಣದ ಶಾಸಕರು ಗೈರು ಎದ್ದು ಕಂಡಿತು. ಆರೋಗ್ಯ ಇಲಾಖೆ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆ (ರಿಮ್ಸ್‌) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಉಸ್ತುವಾರಿ ಸಚಿವರು ಗೈರುಗೊಂಡಿದ್ದರೇ, ಸಚಿವ ಎನ್‌.ಎಸ್‌.ಬೋಸರಾಜು ಬಣವು ನೇತೃತ್ವ ವಹಿಸಿದ್ದರಿಂದ ಎಂಎಲ್ಸಿ ಎ.ವಸಂತ ಕುಮಾರ ಅವರ ಬಣದಲ್ಲಿ ಗುರುತಿಸಿ ಕೊಂಡಿರುವ ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸೇರಿ ಇತರೆ ಕ್ಷೇತ್ರಗಳ ಶಾಸಕರು, ಎಂಎಲ್ಸಿ, ನಿಗಮ ಮಂಡಳಿ, ಎಪಿಎಂಸಿ ಅಧ್ಯಕ್ಷರು ಸಮಾರಂಭಕ್ಕೆ ಬಂದಿರಲಿಲ್ಲ.