ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹವು 100ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ರಾಜ್ಯದ ಪ್ರಮುಖ ಮಠಾಧೀಶರು ಮತ್ತು ಸಾಹಿತಿಗಳು ಭಾಗವಹಿಸುತ್ತಿದ್ದಾರೆ.

ಕೊಪ್ಪಳ (ಫೆ.7): ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಇಂದು ಮಹತ್ವದ ಮೈಲಿಗಲ್ಲು ತಲುಪಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಮ್ಮಿಕೊಂಡಿರುವ ನಿರಂತರ ಧರಣಿ ಸತ್ಯಾಗ್ರಹವು ಯಶಸ್ವಿಯಾಗಿ 100ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಕಳೆದ ವರ್ಷ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿದ್ದ ಬೃಹತ್ ಹೋರಾಟದ ಕಿಚ್ಚು, ಈಗ ಸಮಿತಿಯ ನಿರಂತರ ಸತ್ಯಾಗ್ರಹದ ಮೂಲಕ ಮತ್ತಷ್ಟು ತೀವ್ರಗೊಂಡಿದೆ.

Add Asianetnews Kannada as a Preferred SourcegooglePreferred

ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭ: ಎಲ್ಲಿ?

ನಗರದ ಹಳೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಈ ಬೃಹತ್ ಸಮಾವೇಶ ಜರುಗಲಿದೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಜಿಲ್ಲೆಯ ಪರಿಸರ ಕಾಪಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಸಮಾವೇಶಕ್ಕೆ ಈಗಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಗೈರಾಗಲಿರುವ ಅಭಿನವ ಗವಿಸಿದ್ದೇಶ್ವರ ಶ್ರೀ

ಈ ಸಮಾವೇಶಕ್ಕೆ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಗೈರಾಗಲಿದ್ದಾರೆ. ಆದರೆ, ರಾಜ್ಯದ ವಿವಿಧ ಭಾಗಗಳ ಪ್ರಮುಖ ಮಠಾಧೀಶರು ಮತ್ತು ಸಾಹಿತಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಆಗಮಿಸುತ್ತಿದ್ದಾರೆ. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದ ಸಿದ್ದರಾಮ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಸೇರಿದಂತೆ ಸ್ಥಳೀಯ ಹೋರಾಟಗಾರರು ಭಾಗವಹಿಸಲಿದ್ದಾರೆ.

ಬಾಧಿತ ಹಳ್ಳಿಗಳಿಗೆ ಭೇಟಿ

ಸಮಾವೇಶ ಆರಂಭವಾಗುವ ಮುನ್ನ ಗಣ್ಯರು ಕಾರ್ಖಾನೆಯಿಂದ ಬಾಧಿತವಾಗಲಿರುವ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಭೇಟಿಯ ನಂತರ ಸಮಾವೇಶದ ವೇದಿಕೆಗೆ ಗಣ್ಯರು ಆಗಮಿಸಲಿದ್ದಾರೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಜನರು ಈ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದ್ದು, ಹೋರಾಟದ ತೀವ್ರತೆ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿವೆ.