ಬಾಗಲಕೋಟೆ ಬಸ್‌ಗೆ ಮರಾಠಿ ಪುಂಡರು ಮಸಿ ಬಳಿದ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದಾರೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಾಗಲಕೋಟೆ (ಫೆ.24): ಬೆಳಗಾವಿಯಲ್ಲಿ ಮರಾಠಿ ಮಾತನಾಡದ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಘಟನೆಯ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಮರಾಠಿ ಸಂಘಟನೆಗಳ ನಡುವೆ ಭಾರೀ ಸಮರ ಶುರುವಾಗಿದೆ. ಇದರ ನಡುವೆ ಸಾರಿಗೆ ಸಂಪರ್ಕ ಸೇವೆ ಒದಗಿಸುವ ಬಸ್‌ಗಳು, ಡ್ರೈವರ್ ಹಾಗೂ ಕಂಡಕ್ಟರ್‌ಗಳ ಮೇಲೆ ಮಸಿ ಬಳಿದು ಅವಮಾನ ಮಾಡಿ ಕಳುಹಿಸುವ ಘಟನೆಗಳು ವರದಿ ಆಗುತ್ತಿವೆ. ಇದರ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಸಾರಿಗೆ ಸಚಿಬ ರಾಮಲಿಂಗಾರೆಡ್ಡಿ ಅವರು ಮುಖ್ಯ ಕಾರ್ಯದರ್ಶಿ ಮೂಲಕ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ಮಾಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಮಹರಾಷ್ಟ್ರದ ಸೊಲ್ಲಾಪುರದಲ್ಲಿ ಬಾಗಲಕೋಟೆ ಬಸ್‌ಗೆ ಕೆಲವರು ಮರಾಠಿ ಪುಂಡರು ಮಸಿ ಬಳಿದಿದ್ದಾರೆ. ಹೀಗಾಗಿ, ರಾಜ್ಯದ ಮುಖ್ಯ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ಮೂಲಕ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ಮಾಡುವಂತೆ ಸೂಚಿಸಲಾಗಿದೆ. ನಾಳೆ ಸೊಲ್ಲಾಪುರ ಜಿಲ್ಲೆಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ಮಾಡಲಾಗುವುದು. ಈ ಸಭೆಯಲ್ಲಿ ಸಮಸ್ಯೆ ಸರಿ ಹೋಗದಿದ್ದರೆ ಮಹಾರಾಷ್ಟ್ರ ಸರ್ಕಾರದ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ನಮ್ಮ ಬಸ್ಸಿಗೆ ಅವರು ಮಸಿ ಬಳಿಯೋದು, ಅವರ ಬಸ್ಸಿಗೆ ನಾವು ಮಸಿ ಬಳಿಯುವುದರಲ್ಲಿ ಅರ್ಥವಿಲ್ಲ. ಇದರಿಂದ ಎರಡೂ ಸಂಸ್ಥೆಗಳಿಗೆ ನಷ್ಟ ಆಗಲಿದೆ. ಮಹಾರಾಷ್ಟ್ರದವರು ಇಲ್ಲಿ ಬರಬೇಕು, ನಮ್ಮವರು ಅಲ್ಲಿಗೆ ಹೋಗಬೇಕು. ಮಹಾರಾಷ್ಟ್ರ ಸರ್ಕಾರ, ಶಿವಸೇನೆ ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡೋದು ತಪ್ಪು ಆಗುತ್ತದೆ. ಅಲ್ಲಿಯವರು ಹಾಗೆ ಮಾಡಿದರೆ ನಮ್ಮವರು ಸುಮ್ಮನೆ ಇರ್ತಾರಾ? ಇವರು ಅದನ್ನೆ ಮಾಡ್ತಾರೆ. ನಮ್ಮ ಪ್ರಿನ್ಸಿಪಲ್ ಸೆಕ್ರೆಟರಿ ಮೂಲಕ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತನಾಡಲಾಗಿದೆ. ಹೀಗಾಗಿ, ಸೊಲ್ಲಾಪುರ ಜಿಲ್ಲೆಯ ಅಧಿಕಾರಿಗಳ ಮಟ್ಟದಲ್ಲಿ ನಾಳೆ ಸಭೆ ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಕನ್ನಡಪರ ಹೋರಾಟಗಾರರು ನಾಲಾಯಕ್; ನಾಲಿಗೆ ಹರಿಬಿಟ್ಟ ಎಂಇಎಸ್ ಮುಖಂಡ ಶುಂಭ ಶಳಕೆ!
ಒಂದು ವೇಳೆ ಸೊಲ್ಲಾಪುರ ಜಿಲ್ಲಾಧಿಕಾರಿ ಸಭೆಯಲ್ಲಿ ಸಮಸ್ಯೆ ಪರಿಹಾರವಾಗಲಿಲ್ಲ ಎಂದಾದರೆ ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ಮುಖ್ಯ ಕಾರ್ಯದರ್ಶಿ ಮೂಲಕ ಮಾತನಾಡಿಸ್ತೇನೆ. ಇಲ್ಲವೆಂದರೆ ಅಲ್ಲಿನ ಸರ್ಕಾರದ ಜೊತೆಗೆ ನಾನು ಮಾತನಾಡುತ್ತೇನೆ. ನಮ್ಮ ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಬಸ್‌ಗಳಿಗೆ ಹಾಗೂ ನಮ್ಮ ರಾಜ್ಯದಿಂದ ಮಹರಾಷ್ಟ್ರಕ್ಕೆ ಹೋಗುವ ಬಸ್ಸುಗಳು ಇದೀಗ ಸ್ಥಗಿತಗೊಂಡಿವೆ. ಅವುಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
