ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಶಾಲಾ ಕಟ್ಟಡ ನಿರ್ಮಾಣಕ್ಕೆ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸುವ ಮೂಲಕ ಉದ್ದಟತನ ಪ್ರದರ್ಶಿಸಿದ್ದಾರೆ.
ಬೆಳಗಾವಿ (ನ.30) ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಶಾಲಾ ಕಟ್ಟಡ ನಿರ್ಮಾಣಕ್ಕೆ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸುವ ಮೂಲಕ ಉದ್ದಟತನ ಪ್ರದರ್ಶಿಸಿದ್ದಾರೆ. ಕಳೆದ 4 ವರ್ಷಗಳಿಂದ ಗಡಿ ಕನ್ನಡಿಗರು ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದ ಆರೋಪ ಕೇಳಿಬಂದಿತ್ತು. ಈಗ ಸರ್ಕಾರದಿಂದ ಅನುದಾನ ಬಂದರೂ ಶಾಲಾ ಕೊಠಡಿ ನಿರ್ಮಾಣಕ್ಕೆ ಮರಾಠಿಗರು ವಿರೋಧಿಸುತ್ತಿದ್ದು, ಬುಧವಾರ ಭೂಮಿಪೂಜೆ ವೇಳೆ ಮರಾಠಿ ಭಾಷಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಸರ್ವೇ ನಂ.462 ರಲ್ಲಿ ಕನ್ನಡ, ಉರ್ದು, ಮರಾಠಿ ಶಾಲೆಗೆ ಜಾಗ ಮೀಸಲಿಡಲಾಗಿತ್ತು. ಕಳೆದ ಹಲವು ವರ್ಷಗಳ ಹಿಂದೆ ಕನ್ನಡ ಶಾಲಾ ಮಕ್ಕಳ ಸಂಖ್ಯೆ 16 ರಿಂದ 18 ಇದ್ದ ಹಿನ್ನೆಲೆ ಗ್ರಾಮದಲ್ಲಿರುವ ಹಳೆಯ ಸರ್ಕಾರಿ ಮರಾಠಿ ಶಾಲಾ ಕಟ್ಟಡಕ್ಕೆ ಕನ್ನಡ ಶಾಲೆಯನ್ನು ಸ್ಥಳಾಂತರಿಸಲಾಗಿತ್ತು. ಆದರೆ, ಈಗ ಸರ್ಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 200ರ ಗಡಿ ದಾಟಿದೆ. ಹೀಗಾಗಿ ಸರ್ಕಾರಿ ಕನ್ನಡ ಶಾಲೆಗೆ ಮೀಸಲಿದ್ದ ಜಮೀನಿನಲ್ಲಿಯೇ ಶಾಲಾ ಕೊಠಡಿ ಕಟ್ಟಿಸಿಕೊಡುವಂತೆ ಕನ್ನಡ ಭಾಷಿಕರು ಮನವಿ ಮಾಡಿದ್ದರು.
ಯುವಕರಿಗೆ ವಿಜಯೇಂದ್ರ, ಹಿರಿಯರಿಗೆ ನಾನು ಸ್ಫೂರ್ತಿ - ಆರ್ ಅಶೋಕ್
50 ವರ್ಷಗಳ ಹಳೆಯದಾದ ಕನ್ನಡ ಶಾಲೆಯ ಕೊಠಡಿ ಕೆಡವಿ ಹೊಸ ಕೊಠಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಿ ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ 2022ರ ಡಿ.27 ರಂದು ಅನುಮತಿ ಪಡೆದಿದ್ದಾರೆ. ಇದಕ್ಕೂ ಮುನ್ನವೇ 2022ರ ನ.16 ರಂದು ಕೊಠಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹11.98 ಲಕ್ಷ ಅನುದಾನವೂ ಮಂಜೂರಾಗಿತ್ತು. ಬಳಿಕ ಕಾರದಗಾ ಗ್ರಾಪಂನಿಂದ ಎನ್‌ಒಸಿ ಪಡೆದಿದ್ದ ಗ್ರಾಮಸ್ಥರು ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆಗೆ ಮುಂದಾಗಿದ್ದರು.
ಶುರುವಾದ ಗಲಾಟೆ, ವಾಗ್ವಾದ:
ಸರ್ಕಾರಿ ಕನ್ನಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಭೂಮಿಪೂಜೆಗೆ ಆಗಮಿಸಿದಾಗ ಸರ್ಕಾರಿ ಮರಾಠಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ವಿರೋಧಿಸಿ ವಾಗ್ವಾದ ನಡೆಸಿದ್ದಾರೆ. ಈಗ ಇದೇ ಜಾಗದಲ್ಲಿ ಕನ್ನಡ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಜಮೀನು ನೀಡಬೇಕೆಂದು ಕನ್ನಡ ಭಾಷಿಕರು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್‌ಡಿಎಂಸಿ ಅಧ್ಯಕ್ಷ ಜಿನಪ್ಪ ಗಾವಡೆ, ಮರಾಠಿ ಶಾಲೆ ಇದೆ ಕನ್ನಡದವರು ಇಲ್ಲಿ ಬರಬೇಡಿ ಅಂತಾ ಹೇಳುತ್ತಿದ್ದಾರೆ. ಆದರೇ ಕನ್ನಡ, ಮರಾಠಿ, ಉರ್ದು ಶಾಲೆಗೆ ಅಂತಾ ಒಂದು ಎಕರೆ ಜಾಗ ಇರುವ ಬಗ್ಗೆ ಉತಾರ ಇದೆ. ಸರ್ಕಾರಿ ಕನ್ನಡ ಶಾಲೆಗೆ 13 ಗುಂಟೆ ಜಾಗ ಬರುತ್ತೆ. ಈ ಮೊದಲು ಹದಿನಾರು ವಿದ್ಯಾರ್ಥಿಗಳು ಇದ್ದ ಸಲುವಾಗಿ ನಮಗೆ ಊರಲ್ಲಿರುವ ಶಾಲೆ ನೀಡಿದ್ರು. ಅಲ್ಲಿಗೆ ಹೋಗಿದ್ದೆವು. ಆದ್ರೆ ಈಗ ನಮ್ಮ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಹೀಗಾಗಿ ನಾವು ನಮ್ಮ ಪಾಲಿನ ಜಾಗ ಕೇಳುತ್ತಿದ್ದೇವೆ ಎಂದರು.
ಈಗ ನಮ್ಮ ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 280 ಇದೆ. ಈಗ ಹಳೆಯ ಶಾಲೆಯಲ್ಲಿ ಮಕ್ಕಳಿಗೆ ಕೂರಲು ಜಾಗವಿಲ್ಲ, ಮೈದಾನ ಇಲ್ಲ. ಈ ಹಿಂದೆ ಶಾಲಾ ಮಕ್ಕಳ ಸಂಖ್ಯೆ ಕಡಿಮೆ ಇದೆ ಅಂತಾ ಮರಾಠಿ ಶಾಲೆಗೆ ಕಳಿಸಿದ್ರು. ಆದ್ರೆ ಈಗ ಶಾಲಾ ಕೊಠಡಿ ನಿರ್ಮಾಣಕ್ಕೆ ₹12 ಲಕ್ಷ ಮಂಜೂರು ಆಗಿದೆ. ಹೀಗಾಗಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಬಂದಾಗ ಗಲಾಟೆ ಮಾಡುತ್ತಿದ್ದಾರೆ. ಈಗ ಊರ ಹೊರಗೆ ಕೊಡುವ ಜಾಗ ಆರೋಗ್ಯ ಇಲಾಖೆಗೆ ಸೇರಿದ್ದಾಗಿದೆ. ನಮ್ಮ ಬಳಿ ಎಲ್ಲ ದಾಖಲೆ ಇವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದ್ರೆ ಅವರು ಬರಲಿಲ್ಲ. ಯಾರು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಎಸ್‌ಡಿಎಂಸಿ ಸದಸ್ಯೆ ವಿದ್ಯಾ ಗಾವಡೆ ಮಾತನಾಡಿ, ಮರಾಠಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ತಕರಾರು ತಗೆಯುತ್ತಿದ್ದಾರೆ. ಮರಾಠಿ ಶಾಲೆಯೊಳಗೆ ಕನ್ನಡದವರು ಬರಬೇಡಿ. ಊರಿನ ಹೊರಗೆ ನಿಮಗೆ ಜಾಗ ಕೊಡುತ್ತೇವೆ ಅಲ್ಲಿ ಹೋಗಿ ಎನ್ನುತ್ತಿದ್ದಾರೆ. ಊರು ಹೊರಗೆ ಹೋಗಲು ನಮಗೆ ಇಷ್ಟ ಇಲ್ಲ. ಇಷ್ಟು ದಿನಗಳಿಂದ ನಮ್ಮ ಊರಿನಲ್ಲಿ ಕನ್ನಡ ಬೆಳೆದಿರಲಿಲ್ಲ. ಈಗ ಬೆಳೆಯುತ್ತಿದೆ. ಕರ್ನಾಟಕದಲ್ಲಿ ಕನ್ನಡ ಬೆಳೆಯಬೇಕು. ಕನ್ನಡಕ್ಕೆ ಆಗುವ ಅನ್ಯಾಯ ಸರಿದೊಗಿಸಬೇಕು. ಮರಾಠಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಈಗಿರುವ ಶಾಲೆಯಲ್ಲಿ ಮೈದಾನ ಇಲ್ಲ, ವ್ಯವಸ್ಥೆ ಇಲ್ಲ. ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ರಾಜಕಾರಣದ ವಿದುರ, ಕಾಂಗ್ರೆಸ್‌ನ ಕಟ್ಟಪ್ಪ!
ಎಸ್‌ಡಿಎಂಸಿ ಸದಸ್ಯ ಮುರಾರಿ ಜತ್ರಾಟೆ ಮಾತನಾಡಿ, ನಮ್ಮ ಊರು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿದೆ. ಮರಾಠಿಗರ ಸಂಖ್ಯೆ ಹೆಚ್ಚಿದ್ದರೂ ಕನ್ನಡಿಗರ ಸಂಖ್ಯೆಯೂ ಹೆಚ್ಚಾಗಿದೆ. ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ವೇಳೆ ಊರಿನೊಳಗೆ ಒಂದು ಶಾಲೆ ನೀಡಿದ್ದರು. ಅಲ್ಲಿ ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಆದರೆ, ಈಗ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ 4 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
