ಮಾರತ್ತಹಳ್ಳಿಯಲ್ಲಿ ಯುವತಿಯೊಬ್ಬಳ ಮೇಲೆ ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ನಡೆದಿದೆ. ಯುವತಿ ದೂರು ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು (ಮೇ 2): ನಗರದಲ್ಲಿ ಪುನಃ ಬೀದಿ ಕಾಮುಕರ ಪುಂಡಾಟ ಹೆಚ್ಚಳವಾಗಿದೆ. ಈ ಬಾರಿ ಮಾರತ್ತಹಳ್ಳಿಯಲ್ಲಿ ಅಸಹ್ಯಕರ ಘಟನೆ ನಡೆದಿದೆ. ಬುಧವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಮಾರತ್ತಹಳ್ಳಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು ಬೆನ್ನು ಹಾಗೂ ಅದರ ಕೆಳಭಾಗದ ಹಿಂಬದಿಯ ಭಾಗದಲ್ಲಿ ಮುಟ್ಟು ಅನುಚಿತವಾಗಿ ನಡೆದುಕೊಂಡಿದ್ದಾನೆ.
ಸುದ್ದಗುಂಟೆಪಾಳ್ಯದಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ ಆಕೆಯ ಎದೆಭಾಗವನ್ನು ಮುಟ್ಟಿ ಕಿರುಕುಳ ನಿಡಿದ್ದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಸಹ್ಯಕರ ಘಟನೆ ಸಂಭವಿಸಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಮೂಡಿವೆ. ಈ ಘಟನೆ ನಡೆದ ನಂತರ ಯುವತಿಯು ತಕ್ಷಣವೇ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ.
ಇನ್ನು ಶಂಕಿತ ಆರೋಪಿಯನ್ನು ಗುರುತಿಸಲು ಪೊಲೀಸರು ವಿಶೇಷ ತಂಡವನ್ನು ನೇಮಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕೆಲವು ದೃಶ್ಯಾವಳಿ ಲಭ್ಯವಾಗಿದ್ದು, ಆರೋಪಿಯ ಕೆಲವು ಚಲನೆಗಳನ್ನು ಗಮಿಸಿದ್ದು ಶೀಘ್ರ ಪತ್ತೆಯಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆ ಅವರು, 'ಬುಧವಾರ ರಾತ್ರಿ ಮಹಿಳೆಯೊಂದಿಗೆ ನಡೆದ ಘಟನೆಯ ರಾತ್ರಿಯೇ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುತ್ತದೆ' ಎಂದು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಮಹಿಳೆಯರು ರಾತ್ರಿ ವೇಳೆ ಓಡಾಟಕ್ಕೆ ಭಯಪಡುವ ಪರಿಸ್ಥಿತಿ ಉಂಟಾಗಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆ ಸಹಕಾರದಿಂದ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಗಾಳಿ ಮಳೆ ಸಂಧರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಬಿಬಿಎಂಪಿ ಮನವಿ:
ಬೆಂಗಳೂರಿನಲ್ಲಿ ಮೇ 1 ಹಾಗೂ ಮೇ 2ರಂದು ಎರಡು ದಿನಗಳಲ್ಲಿಯೂ ಸಂಜೆ ನಂತರ ಭಾರೀ ಮಲೆಯಾಗಿದೆ. ಬಿರುಗಾಳಿ, ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂರಾರು ಮರಗಳು ಧರೆಗುಳಿದ ಘಟನೆ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳು ಬೀಳುವ ಹಾಗೂ ಮರದ ರೆಂಬೆ, ಕೊಂಬೆಗಳು ಮುರಿದು ಬೀಳುವ ಘಟನೆಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಳೆ ಬರುವ ವೇಳೆ ನೀರಿನಲ್ಲಿ ಹೋಗದಂತೆ ಹಾಗೂ ಮರಗಳ ಕೆಳಗೆ ನಿಲ್ಲದಂತೆ ಮನವಿ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಾದ್ಯಂತ ನಿನ್ನೆ ಮೇ 1ರಂದು ಸಂಜೆ ಸುರಿದ ಮಳೆಗೆ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಕತ್ರಿಗುಪ್ಪೆ ಗೋ-ಗ್ಯಾಸ್ ಬಂಕ್‌ನ ಸಮೀಪ ನಿಂತಿದ್ದ ಆಟೋ ಹಾಗೂ ಎರಡು ಕಾರುಗಳ ಮೇಲೆ ಒಂದು ಬೃಹತ್ ಮರವು ಮುರಿದು ಬಿದ್ದ ಪರಿಣಾಮ ಶ್ರೀ ಮಹೇಶ್ ಸುಮಾರು 40 ವರ್ಷ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮುಂದುವರಿದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರುತ್ತಾರೆ.
ಗಾಳಿ ಮಳೆಗೆ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 23 ಮರಗಳು ಹಾಗೂ 52 ಬೃಹತ್ ರೆಂಬೆಗಳು ಬಿದ್ದಿರುವುದು ವರದಿಯಾಗಿರುತ್ತದೆ. ಅರಣ್ಯ ಘಟಕವು ಆಯಾ ವಲಯಗಳ ಅಧಿಕಾರಿಗಳೊಂದಿಗೆ ಜೊತೆಗೂಡಿ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಲಾಗಿರುತ್ತದೆ. ಅರಣ್ಯ ವಿಭಾಗದ ವಿಷೇಶ ಆಯುಕ್ತರು, ಮತ್ತು ವಲಯ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಜೊತೆಗೂಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿರುತ್ತಾರೆ. ಮುಂಜಾಗ್ರತೆ ಕ್ರಮವಾಗಿ ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡುವುದು, ಬೃಹತ್ ಮರಗಳ ಕೆಳಗಡೆ ನಿಲ್ಲದಂತೆ ಸಾರ್ವಜನಿಕರಲ್ಲಿ ಮುಂಜಾಗ್ರತೆ ಕ್ರಮ ವಹಿಸುವಂತೆ ಮನವಿ ಮಾಡಿದೆ.


