ಮಾರತ್ತಹಳ್ಳಿಯಲ್ಲಿ ಶೇ.99 ರಷ್ಟು ಆಂಧ್ರದವರೇ ಇದ್ದೇವೆ, ಇದು 'ಮಿನಿ ಆಂಧ್ರ' ಎಂದು ಯುವತಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.
ಬೆಂಗಳೂರು (ಜ.29): ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ, ಇಲ್ಲಿಗೆ ವಲಸೆ ಬರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ಆಂಧ್ರದ ಮೂಲದ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋವೊಂದು ಕನ್ನಡಿಗರ ಅಸ್ಮಿತೆಯ ವಿಷಯವಾಗಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಮಾರತ್ತಹಳ್ಳಿಯನ್ನು (Marathahalli) ಆಕೆ 'ಮಿನಿ ಆಂಧ್ರ' (Mini Andhra) ಎಂದು ಕರೆದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಏನಿದೆ?
ಯುವತಿಯೊಬ್ಬರು ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ 'ಮಾರತ್ತಹಳ್ಳಿಯಲ್ಲಿ ಶೇ. 99.9 ರಷ್ಟು ಜನ ಆಂಧ್ರಪ್ರದೇಶದವರೇ ಇದ್ದೀವಿ. ವಿಶೇಷವಾಗಿ ರಾಯಲಸೀಮಾ ಪ್ರದೇಶದ, ಅದರಲ್ಲೂ ಅನಂತಪುರ ಜಿಲ್ಲೆಯ ಜನರೇ ಇಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿ ಇದು ಬೆಂಗಳೂರಿನ ಪ್ರದೇಶ ಎನ್ನುವುದಕ್ಕಿಂತ 'ಮಿನಿ ಆಂಧ್ರ' ಎನ್ನುವುದೇ ಸೂಕ್ತ' ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಯೇ ಈಗ ವಿವಾದದ ಕಿಡಿ ಹೊತ್ತಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, 'ಕನ್ನಡ್ವಿರಾಟ' (@kohlificationn) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಇದನ್ನು ಹಂಚಿಕೊಂಡು ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. 'ವಲಸಿಗರ ವಶವಾಗುತ್ತಿದೆ ಬೆಂಗಳೂರು, ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು" ಎಂಬ ಶೀರ್ಷಿಕೆಯಡಿ ಈ ಪೋಸ್ಟ್ ಮಾಡಲಾಗಿದ್ದು, ಕನ್ನಡಿಗರ ಅಸ್ತಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ. 'ಮಾರತ್ತಹಳ್ಳಿಯನ್ನು ಈಗಾಗಲೇ 'ಮಿನಿ ಆಂಧ್ರ' ಎಂದು ಕರೆಯಲಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಬೆಂಗಳೂರಿನಲ್ಲಿ 'ಮಿನಿ ತಮಿಳುನಾಡು', 'ಮಿನಿ ಕೇರಳ', 'ಮಿನಿ ಬಿಹಾರ', 'ಮಿನಿ ಮಹಾರಾಷ್ಟ್ರ'ಗಳು ಸೃಷ್ಟಿಯಾಗಲಿವೆ. ನಮ್ಮ ನಾಡಿನ ಜಾಗದಲ್ಲಿ ನಿಂತುಕೊಂಡು, ಈ ಜಾಗ ಅವರ ನಾಡಿನ ಜನರಿಂದ ತುಂಬಿದೆ ಎಂದು ಹೇಳುವ ಧೈರ್ಯ ಇವರಿಗೆ ಬಂದಿದೆ ಎಂದರೆ, ದಶಕಗಳಿಂದ ನಮ್ಮೂರಿಗೆ ಎಷ್ಟು ಪ್ರಮಾಣದ ವಲಸಿಗರು ಬಂದು ಸೇರಿದ್ದಾರೆ ಎಂಬುದನ್ನು ಲೆಕ್ಕ ಹಾಕಿ' ಎಂದು ಪೋಸ್ಟ್‌ನಲ್ಲಿ ಕಿಡಿಕಾರಲಾಗಿದೆ.
ವಲಸೆ ನಿಯಂತ್ರಣ ಕಾಯ್ದೆಗೆ ಆಗ್ರಹ:
ಪೋಸ್ಟ್‌ನಲ್ಲಿ ಮುಂದುವರಿದು, 'ಆಂಧ್ರದವರು ಯಾಕೆ ನಮ್ಮ ನಾಡಿಗೆ ಬಂದರು? ಅಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗದೆ ಇಲ್ಲಿಗೆ ಬಂದು, ಈಗ ನಮ್ಮ ಅಸ್ತಿತ್ವಕ್ಕೇ ಕುತ್ತು ತರುತ್ತಿದ್ದಾರೆ. ನಾವು ಕನ್ನಡಿಗರು ಯಾವತ್ತೂ ಬೇರೆ ರಾಜ್ಯಕ್ಕೆ ಹೋಗಿ ಇದು 'ಮಿನಿ ಕರ್ನಾಟಕ' ಎಂದು ಹೇಳುವುದಿಲ್ಲ. ಏಕೆಂದರೆ ನಮ್ಮ ನಾಡು ನಮಗೆ ಬದುಕುವಷ್ಟು ಸಮೃದ್ಧಿಯನ್ನು ನೀಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ವಲಸೆಯನ್ನು ತಡೆಗಟ್ಟಲು 'ವಲಸೆ ನಿಯಂತ್ರಣ ಕಾಯ್ದೆ'ಯನ್ನು ಜಾರಿಗೆ ತರಬೇಕು' ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಮಿಶ್ರ ಪ್ರತಿಕ್ರಿಯೆಗಳು:
ಈ ಪೋಸ್ಟ್‌ಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಪರ-ವಿರೋಧದ ಚರ್ಚೆ ಜೋರಾಗಿದೆ. ಒಬ್ಬ ಬಳಕೆದಾರರು, 'ಇದು ನೂರಕ್ಕೆ ನೂರರಷ್ಟು ಸತ್ಯ. ಮಾರತ್ತಹಳ್ಳಿಯಲ್ಲಿ ನನಗೆ ಒಬ್ಬ ವ್ಯಕ್ತಿ ಸಣ್ಣ ವ್ಯವಹಾರಕ್ಕಾಗಿ ತೆಲುಗಿನಲ್ಲಿ ಮಾತನಾಡುವಂತೆ ಒತ್ತಾಯಿಸಿದರು. ನನಗೆ ತೆಲುಗು ಬರುವುದಿಲ್ಲ, ಕನ್ನಡ ಮಾತನಾಡಿ ಎಂದಿದ್ದಕ್ಕೆ, 'ಇದು ಮಿನಿ ಆಂಧ್ರ, ಇಲ್ಲಿ ಕನ್ನಡ ಯಾರಿಗೂ ಬರುವುದಿಲ್ಲ' ಎಂದು ಉದ್ಧಟತನದ ಉತ್ತರ ನೀಡಿದ್ದರು. ಇದಕ್ಕೆಲ್ಲಾ ಅರವಿಂದ್ ಲಿಂಬಾವಳಿ ಅವರಂತಹ ರಾಜಕಾರಣಿಗಳೇ ಕಾರಣ' ಎಂದು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, ಡಾ. ಬಿ.ಪಿ. ಸುಬ್ರಹ್ಮಣ್ಯ ಎಂಬುವವರು ಪ್ರತಿಕ್ರಿಯಿಸಿ, 'ಆ ಯುವತಿಗೆ ವಿಷಯ ತಿಳಿದಿಲ್ಲ. ಅಲ್ಲಿರುವವರೆಲ್ಲರೂ ವಲಸಿಗರಲ್ಲ. ಯಲಹಂಕ, ಹೊಸಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಸಾವಿರಾರು ವರ್ಷಗಳಿಂದ ತೆಲುಗು ಮತ್ತು ಕನ್ನಡ ಎರಡನ್ನೂ ಮಾತನಾಡುವ ಅಚ್ಚ ಕನ್ನಡಿಗರಿದ್ದಾರೆ. ಅವರನ್ನು ಪರಬಾಷಿಕರೆಂದು ಕರೆಯುವುದು ಸರಿಯಲ್ಲ' ಎಂದು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಈ 'ಮಿನಿ ಆಂಧ್ರ' ವಿಡಿಯೋ ಬೆಂಗಳೂರಿನ ಜನಸಂಖ್ಯಾ ಸ್ಫೋಟ, ವಲಸಿಗರ ಪ್ರಭಾವ ಮತ್ತು ಸ್ಥಳೀಯ ಭಾಷೆ-ಸಂಸ್ಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.


