ರಾ.ರಾ ಎನ್ನುವ ನಗರದ ರಕ್ಕಸ ರಸ್ತೆ ಗುಂಡಿಗಳು ಬೆಂಗಳೂರು ಪ್ರವೇಶಿಸುತ್ತಿದ್ದಂತೆ ರಸ್ತೆಯ ಗುಂಡಿಗಳ ಭವ್ಯ ಸ್ವಾಗತ ಬಿಡಿಎಯಿಂದ ಮುಚ್ಚುವ ಕೆಲಸವಾಗುತ್ತಿಲ್ಲ : ಬಿಬಿಎಂಪಿಯ ಅಧಿಕಾರಿಗಳ ಆರೋಪ ರಾ.ರಾ.ನಗರ ವಾರ್ಡ್‌ರಸ್ತೆ, ಮುಖ್ಯರಸ್ತೆಗಳಲ್ಲೂ ಬಾಯ್ತೆರೆದಿವೆ ರಕ್ಕಸ ಗುಂಡಿಗಳು ಪೀಣ್ಯಕೈಗಾರಿಕೆ ಪ್ರದೇಶ, ನಾಗರಭಾವಿ, ಗೊರಗುಂಟೆಪಾಳ್ಯದಲ್ಲೂ ಗುಂಡಿ-ಗಂಡಾಂತರ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ನ.3) : ರಾಜ್ಯದ ವಿವಿಧ ಜಿಲ್ಲೆಗಳಿದಿಂದ ಬೆಂಗಳೂರು ಪ್ರವೇಶಿಸುವವರಿಗೆ ರಾಜರಾಜೇಶ್ವರಿ ವಲಯದ ರಸ್ತೆಯ ಗುಂಡಿಗಳೇ ಭವ್ಯ ಸ್ವಾಗತ ಕೋರುತ್ತವೆ.

ಹೌದು, ರಸ್ತೆ ಗುಂಡಿಗಳ ಸಮಸ್ಯೆ ಬೆಂಗಳೂರಿನ ನಿವಾಸಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಭಾಗದಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವವರಿಗೆ ರಸ್ತೆ ಗುಂಡಿಗಳ ಸಮಸ್ಯೆ ತಪ್ಪಿಲ್ಲ. ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ವಾರ್ಡ್‌ ರಸ್ತೆ ಸೇರಿದಂತೆ ಬೆಂಗಳೂರಿನ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ರಾಜ ರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಹಾದು ಹೋಗುತ್ತವೆ. ಈ ಎಲ್ಲಾ ರಸ್ತೆಗಳಲ್ಲಿಯೂ ದೊಡ್ಡ ಸಂಖ್ಯೆಯ ರಸ್ತೆ ಗುಂಡಿಗಳಿವೆ. ಈ ಗುಂಡಿಗಳ ಗಂಡಾಂತರದಿಂದ ಪಾರಾಗಿಯೇ ಸುರಕ್ಷಿತವಾಗಿ ಸಾಗಬೇಕಾದ ಸ್ಥಿತಿ ವಾಹನ ಸವಾರರಿಗಿದೆ.

ಬೆಂಗ್ಳೂರಲ್ಲಿವೆ 25,000ಕ್ಕೂ ಅಧಿಕ ರಸ್ತೆ ಗುಂಡಿಗಳು..!

ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಯಶವಂತಪುರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿದ್ದು, ಬಿಬಿಎಂಪಿ ಹೊಸ ವಾರ್ಡ್‌ ಮರು ವಿಂಗಡಣೆಯಿಂದ ವಾರ್ಡ್‌ ಸಂಖ್ಯೆ 14 ರಿಂದ 22 ವಾರ್ಡ್‌ಕ್ಕೆ ಏರಿಕೆಯಾಗಿವೆ. ಈ ವ್ಯಾಪ್ತಿಯಲ್ಲಿ 67.15 ಕಿ.ಮೀ ಉದ್ದದ ಆರ್ಟೀರಿಯಲ್‌ ರಸ್ತೆ, 58.44 ಕಿ.ಮೀ ಉದ್ದದ ಸಬ್‌ ಆರ್ಟೀರಿಯಲ್‌ ರಸ್ತೆ ಹಾಗೂ 2,081.88 ಕಿ.ಮೀ ಉದ್ದದ ವಾರ್ಡ್‌ ರಸ್ತೆಯ ಜಾಲವಿದೆ. ವಾರ್ಡ್‌ರಸ್ತೆ, ಮುಖ್ಯರಸ್ತೆ ಎಂಬ ಭೇದವಿಲ್ಲದೇ ಎಲ್ಲ ಕಡೆಯೂ ರಸ್ತೆಗಳು ರಕ್ಕಸದಂತೆ ಬಾಯ್ದೆರೆದು ಕುಳಿತಿವೆ.

ಪೀಣ್ಯಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಿರುವ ಆಂಜನೇಯ ದೇವಸ್ಥಾನ ರಸ್ತೆಯಲ್ಲಿ ದೊಡ್ಡ ಹಳ್ಳಗಳು ಸೃಷ್ಟಿಯಾಗಿವೆ. ನಾಗರಭಾವಿ-2ನೇ ಹಂತದ ಹೊರ ವರ್ತು ರಸ್ತೆ ಸವೀರ್‍ಸ್‌ ರಸ್ತೆ, ತೆರಿಗೆ ಭವನ ಎದುರು, ಮಲೆ ಮಾದೇಶ್ವರ ದೇವಸ್ಥಾನದ ಹಳೇ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ರಸ್ತೆ, ಕೆ.ಕೆ.ಲೇಔಟ್‌ನ ಪಾಪರೆಡ್ಡಿ ಪಾಳ್ಯ, ಮಾಡ್ರನ್‌ಬ್ರೆಡ್‌ ಮುಂಭಾಗ, ಗೊರಗುಂಟೆಪಾಳ್ಯದ ಜಿಯೋ ಪೆಟ್ರೋಲ್‌ ಬಂಕ್‌ ಮುಂಭಾಗದ ರಿಂಗ್‌ ರಸ್ತೆ ಸೇರಿದಂತೆ ಹಲವು ಕಡೆ ಗುಂಡಿಗಳಿರುವುದು ಕಂಡು ಬಂದಿದೆ.

ಕಳೆದ ಆರು ತಿಂಗಳಿನಿಂದ ಈ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದ್ದು, ಸಂಚಾರ ಮಾಡುವುದೇ ದುಸ್ತರವಾಗಿದೆ. ಅದರಲ್ಲೂ ಬೈಕ್‌ ಮತ್ತು ಆಟೋದಲ್ಲಿ ಸಂಚರಿಸುವವರು ನರಕಯಾತನೆ ಅನುಭವಿಸುವಂತಾಗಿದೆ. ಇಲ್ಲಿ ಸಂಭವಿಸಿದ ಅಪಘಾತಕ್ಕೆ ಲೆಕ್ಕವೇ ಇಲ್ಲ. ದೊಡ್ಡ ದೊಡ್ಡ ಗುಂಡಿ ಇರುವುದರಿಂದ ವೇಗವಾಗಿ ಬರುವ ಬೈಕ್‌ ಸವಾರರು ಏಕಾಏಕಿ ಬ್ರೇಕ್‌ ಹಾಕಿ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಾರೆ. ಗುಂಡಿ ತಪ್ಪಿಸಲು ಬ್ರೇಕ್‌ ಹಾಕಿದ ವೇಳೆ ಹಿಂದೆಯಿಂದ ಬರುವ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಸ್ತೆ ನಿರ್ವಹಣೆ ಮಾಡದ ಬಿಡಿಎ

ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯ 180 ಕಿ.ಮೀ ಉದ್ದದ ರಸ್ತೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ) ನಿರ್ವಹಣೆ ಮಾಡುತ್ತಿದೆ. ಈ ಪೈಕಿ ಹೌಸಿಂಗ್‌ ಬೋರ್ಡ್‌, ವಿಶ್ವೇಶ್ವರಯ್ಯ ಒಂದನೇ ಬ್ಲಾಕ್‌ನಿಂದ 10ನೇ ಬ್ಲಾಕ್‌ ವ್ಯಾಪ್ತಿಯ ರಸ್ತೆಗಳು ಹಾಗೂ ಬನಶಂಕರಿ 6ನೇ ಹಂತ ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯ ಗುಂಡಿಗಳಿವೆ. ಬಿಡಿಎಯಿಂದ ಮುಚ್ಚುವಲ ಕೆಲಸ ಆಗಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಆರೋಪಿಸಿದ್ದಾರೆ

.ಬೆಂಗ್ಳೂರಿನ ಎಲ್ಲ ಗುಂಡಿ ಮುಚ್ಚಲು ನ.5 ಗಡುವು..!

110 ಹಳ್ಳಿ ವ್ಯಾಪ್ತಿಯ ರಸ್ತೆಗಳನ್ನು ಹೊರತು ಪಡಿಸಿ ಶೇ.75ರಿಂದ 80 ರಷ್ಟುರಸ್ತೆ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಮಳೆಯಿಂದ ರಸ್ತೆ ಮುಚ್ಚುವ ಕೆಲಸಕ್ಕೆ ಅಡ್ಡಿಯಾಗಿದ್ದು, ಮುಖ್ಯ ಆಯುಕ್ತರು ನೀಡಲಾದ ಗಡುವಿನ ಒಳಗಾಗಿ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳಿಸಲ್ಲಿದ್ದೇವೆ.

- ವಿಜಯ್‌ಕುಮಾರ್‌, ಮುಖ್ಯ ಎಂಜಿನಿಯರ್‌, ರಾಜರಾಜೇಶ್ವರಿನಗರ ವಲಯ

ವಿಧಾನಸಭಾ ಕ್ಷೇತ್ರವಾರು ರಸ್ತೆ ಗುಂಡಿ ವಿವರ

ವಿಧಾನಸಭಾ ಕ್ಷೇತ್ರ ಒಟ್ಟು ಗುಂಡಿ ಭರ್ತಿ ಬಾಕಿ

  • ಆರ್‌ಆರ್‌ನಗರ 2,161 1,807 354
  • ಯಶವಂತಪುರ 1,035 544 491
  • ಒಟ್ಟು 3,196 2,351 845

ಆರ್‌ಆರ್‌ನಗರ ವಲಯದ ರಸ್ತೆಯ ವಿವರ

  • ಒಟ್ಟು ರಸ್ತೆ ಸಂಖ್ಯೆ-11,135
  • ಮುಖ್ಯ ರಸ್ತೆ ಉದ್ದ (ಕಿ.ಮೀ)- 125.59
  • ವಾರ್ಡ್‌ ರಸ್ತೆ (ಕಿ.ಮೀ)-2,081.88
  • ರಸ್ತೆಯ ಉದ್ದ (ಕಿ.ಮೀ)-2,207.47

ಆರ್‌ಆರ್‌ನಗರ ವಲಯದ ಗುಂಡಿ ಮುಚ್ಚಲು ವೆಚ್ಚದ ವಿವರ (ಕೋಟಿ ರು.)

ವರ್ಷ ಗುಂಡಿ ಭರ್ತಿಗೆ ವೆಚ್ಚ

  • 2017-18 1.40
  • 2018-19 1.34
  • 2019-20 1.82
  • 2020-21 1.46
  • 2021-22 2.23
  • ಒಟ್ಟು 8.25