Asianet Suvarna News Asianet Suvarna News

ಬೆಂಗ್ಳೂರಲ್ಲಿವೆ 25,000ಕ್ಕೂ ಅಧಿಕ ರಸ್ತೆ ಗುಂಡಿಗಳು..!

ಕಳೆದ ನಾಲ್ಕೈದು ತಿಂಗಳಿನಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. 

More than 25000 Road Potholes in Bengaluru grg
Author
First Published Oct 29, 2022, 9:30 AM IST

ಬೆಂಗಳೂರು(ಅ.29):  ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಂಖ್ಯೆ ಹನುಮಂತನ ಬಾಲದಂತೆ ದೊಡ್ಡದಾಗುತ್ತಲೇ ಸಾಗುತ್ತಿದ್ದು, ರಸ್ತೆ ಗುಂಡಿ ಪತ್ತೆ ಸಂಖ್ಯೆ ಬರೋಬ್ಬರಿ 25 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಮೇ 1ರಿಂದ ಈವರೆಗೆ ನಗರದಲ್ಲಿ 24,967 ರಸ್ತೆ ಗುಂಡಿ ಗುರುತಿಸಲಾಗಿದೆ. ಈ ಪೈಕಿ 17,322 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 7,645 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ. ಆಗಸ್ಟ್‌ ತಿಂಗಳ ಆರಂಭದವರೆಗೆ ನಗರದಲ್ಲಿ 17,595 ಸಾವಿರ ರಸ್ತೆ ಗುಂಡಿಗಳಿದ್ದವು. ಆದರೆ, ಆಗಸ್ಟ್‌ ನಂತರದಿಂದ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ 27ನೇ ತಾರೀಖಿನವರೆಗೆ 25 ಸಾವಿರಕ್ಕೂ ಹೆಚ್ಚಾಗಿವೆ.

ಇವು ಕೇವಲ ಬಿಬಿಎಂಪಿ ಅಧಿಕಾರಿಗಳು ಗುರುತಿಸಿರುವ ರಸ್ತೆ ಗುಂಡಿಗಳ ಮಾಹಿತಿ ಆಗಿದ್ದು, ಅಧಿಕಾರಿಗಳ ಗಮನಕ್ಕೆ ಬಾರದ ಸಾವಿರಾರು ರಸ್ತೆ ಗುಂಡಿಗಳು ನಗರದಲ್ಲಿ ಇವೆ. ಈ ಎಲ್ಲ ಗುಂಡಿಗಳನ್ನು ಲೆಕ್ಕ ಹಾಕಿದರೆ ರಸ್ತೆ ಗುಂಡಿಗಳ ಪತ್ತೆ ಸಂಖ್ಯೆ ದ್ವಿಗುಣಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿ ನಡೆಗೆ ಹೈಕೋರ್ಟ್‌ ಬೇಸರ

ಶೇ.50 ಗುಂಡಿ ಮುಚ್ಚಿಲ್ಲ:

ಬಿಬಿಎಂಪಿ ವ್ಯಾಪ್ತಿಯಲ್ಲಿ 1,242 ಕಿ.ಮೀ. ಉದ್ದದ ಆರ್ಟಿರಿಯಲ್‌/ಸಬ್‌ ಆರ್ಟಿರಿಯಲ್‌ ರಸ್ತೆ ಹಾಗೂ 192 ಕಿ.ಮೀ ಉದ್ದದ ಹೈಡೆನ್ಸಿಟಿ ಕಾರಿಡಾರ್‌ ರಸ್ತೆ ಇವೆ. ಈ ರಸ್ತೆಯಲ್ಲಿ ಈವರೆಗೆ 3,233 ರಸ್ತೆ ಗುಂಡಿ ಪತ್ತೆ ಆಗಿದ್ದು, ಈ ಪೈಕಿ 1,556 ರಸ್ತೆ ಗುಂಡಿ ಮುಚ್ಚಲಾಗಿದೆ. ಇನ್ನೂ 1,677 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದ್ದು, ಪತ್ತೆಯಾದ ಗುಂಡಿಗಳಲ್ಲಿ ಶೇಕಡಾ ಅರ್ಧದಷ್ಟು ಗುಂಡಿ ಮುಚ್ಚುವ ಕಾಳಜಿಯಲ್ಲಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ತೋರಿಲ್ಲ.

4 ವಲಯದಲ್ಲಿ ಹೆಚ್ಚು ಗುಂಡಿ

ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಉಳಿದಂತೆ ಪಶ್ಚಿಮ, ದಕ್ಷಿಣ ಹಾಗೂ ಆರ್‌ಆರ್‌ನಗರ ವಲಯದಲ್ಲಿ 3 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಪತ್ತೆಯಾಗಿವೆ. ಉಳಿದಂತೆ ದಾಸರಹಳ್ಳಿಯಲ್ಲಿ 2 ಸಾವಿರದಷ್ಟುಗುಂಡಿ ಪತ್ತೆಯಾದರೂ ಕೇವಲ 600 ರಸ್ತೆ ಗುಂಡಿ ಮುಚ್ಚಿದ್ದಾರೆ.

ವಲಯವಾರು ರಸ್ತೆ ಗುಂಡಿ ವಿವರ (ಮೇ 1-ಅ.27): ವಲಯ ಒಟ್ಟು ಗುಂಡಿ ಸಂಖ್ಯೆ ಮುಚ್ಚಿದ ಗುಂಡಿ ಬಾಕಿ ಇರುವ ಗುಂಡಿ

ಪೂರ್ವ 5,776 4,130 1,646
ದಕ್ಷಿಣ 1,915 1,514 401
ಪಶ್ಚಿಮ 4,501 4,079 422
ಬೊಮ್ಮನಹಳ್ಳಿ 1,409 1,090 319
ದಾಸರಹಳ್ಳಿ 1918 601 1317
ಮಹದೇವಪುರ 2,004 1,409 595
ಆರ್‌ಆರ್‌ ನಗರ 3,196 2,351 845
ಯಲಹಂಕ 1015 592 423
ಮುಖ್ಯ ರಸ್ತೆ 3233 1556 1677
ಒಟ್ಟು 24,967 17,322 7,645
 

Follow Us:
Download App:
  • android
  • ios