ಬೆಂಗಳೂರಲ್ಲಿ ಬಾಯ್ತೆರೆದ ರಸ್ತೆಗಳು! ಸಾಲು ಸಾಲು ಅಪಘಾತವಾದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ 10 ಸಾವಿರ ಗುಂಡಿ ಮುಚ್ಚಿದ್ದೇವೆ ಎಂಬ ಪಾಲಿಕೆ ಬಣ್ಣ ಬಯಲು ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್‌ನಿಂದ ಬಿದ್ದವಳಮೇಲೆ ಹರಿದ ಬಸ್!
ಬೆಂಗಳೂರು (ಅ.18): ರಸ್ತೆ ಗುಂಡಿ ತಪ್ಪಿಸಲು ಏಕಾಏಕಿ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯತ್ರಿ ನಗರ ನಿವಾಸಿ ಉಮಾ(46) ಗಂಭೀರವಾಗಿ ಗಾಯಗೊಂಡಿದ್ದು, ಈಕೆಯ ಪುತ್ರಿ ವನಿತಾ(22ಅವರಿಗೆ ಸಣ್ಣ ಗಾಯಗಳಾಗಿದೆ. ಬಸ್ ಚಾಲಕನನ್ನು ಬಂಧಿಸಲಾಗಿದೆ.
Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!
‘ಸಿಲಿಕಾನ್ ಸಿಟಿ’ ಎಂಬ ಹೆಗ್ಗಳಿಕೆಯ ಬೆಂಗಳೂರಿನ ಗೌರವಕ್ಕೆ ಚ್ಯುತಿ ತರಲೆಂದೇ ರಸ್ತೆ ಗುಂಡಿಗಳು ನಗರದಾದ್ಯಂತ ಬಾಯಿ ತೆರೆದುಕೊಂಡಿವೆ. ನಗರದಲ್ಲಿ 10 ಸಾವಿರ ರಸ್ತೆ ಗುಂಡಿ ಮುಚ್ಚಿದ್ದೇವೆ ಎಂಬ ಬಿಬಿಎಂಪಿಯ ಪೊಳ್ಳು ಘೋಷಣೆಯನ್ನು ಕನ್ನಡಿ ಹಿಡಿದು ಸಾಬೀತು ಮಾಡುತ್ತಿವೆ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯು ಬೆಂಗಳೂರು ನಗರದ ರಸ್ತೆ ಡಾಂಬರೀಕರಣದ ಗುಣಮಟ್ಟವನ್ನು ತಾನಾಗೇ ತೆರೆದಿಟ್ಟಿದೆ. ನಗರದಲ್ಲಿ ಸ್ವಲ್ಪ ಜಾಸ್ತಿ ಮಳೆ ಸುರಿದರೆ ಸಾಕು ರಸ್ತೆ ಅಭಿವೃದ್ಧಿ, ಡಾಂಬರೀಕರಣ, ದುರಸ್ತಿಯ ಕಳಪೆ ಕಾಮಗಾರಿಯ ಬಣ್ಣ ಬಟಾಬಯಲಾಗಿದೆ. ಮಳೆ ಸುರಿದಾಗ ರಸ್ತೆ ಯಾವುದು, ಗುಂಡಿ ಯಾವುದು? ಎಂಬುದು ಗೊತ್ತಾಗದೆ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ರಸ್ತೆ ಗುಂಡಿ ಮುಚ್ಚುವ ಅವೈಜ್ಞಾನಿಕ ವಿಧಾನದಿಂದಾಗಿ ದುರಸ್ತಿಪಡಿಸಿದಷ್ಟೇ ವೇಗದಲ್ಲಿ ಮತ್ತೆ ಡಾಂಬರು ಕಿತ್ತು ಬರುತ್ತಿದೆ. ಮುಖ್ಯ ರಸ್ತೆಗಳು, ವಾರ್ಡ್ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು ಆಗಿದೆ.
ಅವೈಜ್ಞಾನಿಕ ಪದ್ಧತಿ:
ರಸ್ತೆ ಗುಂಡಿ ದುರಸ್ತಿ, ಅಭಿವೃದ್ಧಿ ಹೆಸರಿನಲ್ಲಿ ವಾರ್ಷಿಕ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಉದ್ದೇಶಕ್ಕಾಗಿಯೇ ಪ್ರತಿ ವಾರ್ಡ್‌ಗೆ ತಲಾ .40 ಲಕ್ಷ ಮೀಸಲು ಇಡಲಾಗಿದ್ದು, ಆದರೂ ರಸ್ತೆ ಗುಂಡಿಗಳಿಂದ ಮುಕ್ತಿ ಮಾತ್ರ ಸಿಗುತ್ತಿಲ್ಲ. ಮೇ ತಿಂಗಳಿನಿಂದ ಈವರೆಗೆ 21 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಸುರಿದಂತೆಲ್ಲ ಗುಂಡಿಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಕಳೆದೆರಡು ವಾರಗಳ ಹಿಂದೆ ಮುಚ್ಚಿದ್ದ ರಸ್ತೆ ಗುಂಡಿಗಳು ಈಗ ಮತ್ತೆ ಬಾಯ್ತೆರೆದಿವೆ. ವಾಹನಗಳ ಓಡಾಟ ಹೆಚ್ಚಿದಂತೆಲ್ಲ ಗುಂಡಿಗಳಿಗೆ ಹಾಕಿದ್ದ ಜೆಲ್ಲಿ ಕಲ್ಲುಗಳು ರಸ್ತೆ ತುಂಬ ಹರಡಿಕೊಂಡು, ವಾಹನಗಳು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿವೆ. ಮಳೆಗೆ ಡಾಂಬರೀಕರಣ ಮಾಡಿದರೂ ಪ್ರಯೋಜನವಿಲ್ಲ ಎಂಬುದರ ಅರಿವಿದ್ದರೂ ಕೂಡ ಅಧಿಕಾರಿಗಳು ಅನೇಕ ರಸ್ತೆಗಳಿಗೆ ಡಾಂಬರು ಹಾಕಿ ಗುಂಡಿ ಮುಚ್ಚುವ ಅವೈಜ್ಞಾನಿಕ ಪದ್ಧತಿ ಅನುಸರಿಸುತ್ತಿರುವುದು ಹೊಳೆಯಲ್ಲಿ ಹುಣಸೆ ಹಣ್ಣು ತೇಯ್ದದಂತಾಗುತ್ತಿದೆ.
ಎಲ್ಲೆಲ್ಲಿ ರಸ್ತೆ ಗುಂಡಿಗಳು?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮುಂಭಾಗದ ರಸ್ತೆ, ಚಾಮರಾಜಪೇಟೆಯ ಉಮಾ ಟಾಕೀಸ್ ರಸ್ತೆಯಿಂದ ಕತ್ರಿಗುಪ್ಪೆವರೆಗೆ, ಉಲ್ಲಾಳ ಉಪನಗರದ ರಸ್ತೆಗಳು, ಶ್ರೀನಿವಾಸನಗರ ಮುಖ್ಯರಸ್ತೆ, ಹೊರವರ್ತುಲ ರಸ್ತೆ, ವಿಜಯ ನಗರದ ಮನು ವನ ರಸ್ತೆ, ಮಾಗಡಿ ರಸ್ತೆ, ಡಾ
ರಾಜಕುಮಾರ್ ರಸ್ತೆ, ಶಾಂತಿನಗರ ಡಬಲ್ ರೋಡ್, ಕಾರ್ಪೊರೇಷನ್- ಮಿಷನ್ ರಸ್ತೆ, ಸಂಜಯನಗರ ಮುಖ್ಯ ರಸ್ತೆ, ಕಾರ್ಡ್ ರಸ್ತೆಯ ಸವೀರ್‍ಸ್ ರಸ್ತೆ, ಎಂ.ಜಿ.ರಸ್ತೆ- ಕೋರಮಂಗಲ ಫೋರಂ ರಸ್ತೆ, ಇನ್ನು ಮಲ್ಲೇಶ್ವರಂ ಗಾಯತ್ರಿನಗರದಲ್ಲಿ ಅಗೆದಿರುವ ರಸ್ತೆಯ ದುರಸ್ತಿಯೇ ಆಗಿಲ್ಲ. ಬಿವಿಕೆ ಅಯ್ಯಂಗಾರ್ ರಸ್ತೆ, ಕೆ.ಆರ್.ಮಾರುಕಟ್ಟೆ- ಮೈಸೂರು ರಸ್ತೆ ನಡುವಿನ ಸಿಸಿಬಿ ಜಂಕ್ಷನ್, ಕೆಂಪೇಗೌಡ ನಗರ ಈಜುಕೊಳದ ಸಮೀಪದ ರಸ್ತೆ, ಯಶವಂತಪುರ ರಸ್ತೆ, ಹೆಬ್ಬಾಳ ರಿಂಗ್ ರಸ್ತೆ, ಭದ್ರಪ್ಪ ಲೇಔಟ್‌ನಿಂದ ಕೊಡಿಗೆಹಳ್ಳಿ ಮುಖ್ಯರಸ್ತೆ, ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಬಿಇಎಲ್ ವೃತ್ತದವರೆಗಿನ ರಸ್ತೆ, ಬನ್ನೇರುಘಟ್ಟಮುಖ್ಯರಸ್ತೆ, ಎಂ.ಎಸ್.ಪಾಳ್ಯ- ಬ್ಯಾಲಕೆರೆ ರಸ್ತೆ, ಯಲಹಂಕ- ಬೆಟ್ಟಹಳ್ಳಿ ಲೇಔಟ್, ಜಾರಕಬಂಡೆ ಲೇಔಟ್, ಅಟ್ಟೂರು ಲೇಔಟ್ ಸೇರಿದಂತೆ ಹಲವು ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ರಸ್ತೆ ಗುಂಡಿಗಳಿಂದಾಗಿ ಸಂಚಾರಕ್ಕೂ ತತ್ವಾರವಾಗಿದೆ.
ಬೆಂಗ್ಳೂರಿನ ವಿಧಾನಸೌಧದ ಮುಂದೆಯೇ ರಸ್ತೆ ಗುಂಡಿ..!
ಮಳೆ ನಿಲ್ಲದೆ ಗುಂಡಿ ಮುಚ್ಚೋದು ಕಷ್ಟ
ಐಟಿಪಿಎಲ್ ರಸ್ತೆಯಲ್ಲಿರುವ ಜ್ಯೂರಿ ವೈಟ್‌ಫೀಲ್ಡ್ ಹೋಟೆಲ್ ಮುಂಭಾಗ ನಿರ್ಮಾಣಗೊಂಡಿರುವ ರಸ್ತೆ ಗುಂಡಿ ಅಪಘಾತ ಸಂಭವಿಸಲು ಹೇಳಿ ಮಾಡಿಸಿದಂತಿದೆ. ಬಿಬಿಎಂಪಿಯ ಮಾಹಿತಿ ಪ್ರಕಾರ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಸಂಚಾರ ಪೊಲೀಸ್ ಇಲಾಖೆಯಿಂದ 4,545 ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಈ ಪೈಕಿ 1,051 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ. ಬೆಂಗಳೂರು ನಗರವನ್ನು ರಸ್ತೆ ಗುಂಡಿ ಮುಕ್ತವಾಗಿ ಮಾಡುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಮಳೆಯಿಂದ ರಸ್ತೆ ಗುಂಡಿಗಳಾಗುತ್ತಿವೆ. ಜೊತೆಗೆ ವಾಹನಗಳ ನಿರಂತರ ಸಂಚಾರದಿಂದ ಈಗಾಗಲೇ ಮುಚ್ಚಿರುವ ರಸ್ತೆ ಗುಂಡಿಗಳು ಪುನಃ ಬಾಯ್ತೆರೆದಿವೆ. ಸದ್ಯ ಮಳೆ ಸುರಿಯುವುದು ನಿಲ್ಲದೇ ರಸ್ತೆ ಗುಂಡಿಗಳು ಮುಚ್ಚುವುದು ಕಷ್ಟಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಅವಲತ್ತು ಕೊಂಡಿದ್ದಾರೆ.
