ಬೆಂಗಳೂರು(ಜೂ.14): ರಾಜ್ಯದಲ್ಲಿ ಈಗಾಗಲೇ ಹಲವಾರು ಮಂದಿಗೆ ಕೊರೋನಾ ಸೋಂಕು ಉಂಟಾಗಿ ಯಾವುದೇ ಚಿಕಿತ್ಸೆಯಿಲ್ಲದೆ ತಾನಾಗೇ ವಾಸಿಯಾಗಿದೆ ಎಂಬ ಅಚ್ಚರಿಯ ವಿಷಯ ಆರೋಗ್ಯ ಇಲಾಖೆ ಅಧ್ಯಯನಗಳಿಂದ ಹೊರಬಿದ್ದಿದೆ.

ಹೌದು, ರಾಜ್ಯದಲ್ಲಿ ಕೆಲ ನಾಗರಿಕರಿಗೆ ಸೋಂಕು ಬಂದು ಹೋಗಿದೆ. ಆದರೆ, ಅದು ಅವರ ಅರಿವಿಗೆ ಬಂದಿಲ್ಲ. ಸೋಂಕು ಬಂದಾಗ ಈ ವ್ಯಕ್ತಿಗಳಲ್ಲಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಎಂಬುದು ಖಚಿತಪಟ್ಟಿದೆ.

ಐಸಿಎಂಆರ್‌ ಹಾಗೂ ಕೇಂದ್ರ ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿಗೆ ಒಳಪಡದ ವ್ಯಕ್ತಿಗಳ ಮೇಲೆ ನಡೆದ ಸೆರೊ ಸರ್ವೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಸಿಬ್ಬಂದಿ ಮೇಲೆ ನಡೆದ ಪರೀಕ್ಷೆಯಿಂದ ಈ ಅಂಶ ಪತ್ತೆಯಾಗಿದೆ.

ಕೊರೋನಾ ಮರಣ ಮೃದಂಗ: ದೇಶದಲ್ಲಿ 394 ಬಲಿ, ರಾಜ್ಯದಲ್ಲಿ 10 ಸಾವು!

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿನ 1 ಸಾವಿರ ಸಿಬ್ಬಂದಿಗೆ ಐಸಿಎಂಆರ್‌ ಮಾರ್ಗಸೂಚಿ ಪ್ರಕಾರ ನಡೆಸಿರುವ ಆ್ಯಂಟಿಬಾಡಿ ರಾರ‍ಯಪಿಡ್‌ ಟೆಸ್ಟ್‌ನಲ್ಲಿ ಹತ್ತು ಮಂದಿಯಲ್ಲಿ ಕೊರೋನಾ ಸೋಂಕಿನ (ಕೋವಿಡ್‌-19) ಆ್ಯಂಟಿಬಾಡೀಸ್‌ (ಪ್ರತಿಕಾಯ) ಪತ್ತೆಯಾಗಿವೆ. ಈ ಮೂಲಕ ಹತ್ತು ಮಂದಿಗೆ ಈಗಾಗಲೇ ಸೋಂಕು ಬಂದು ವಾಸಿಯಾಗಿರುವುದು ಖಚಿತಪಟ್ಟಿದೆ.

ಸೆರೊ ಸರ್ವೆಯಲ್ಲಿ ಇಬ್ಬರಲ್ಲಿ ಆ್ಯಂಟಿಬಾಡೀಸ್‌ ಪತ್ತೆ:

ಜಯದೇವದಲ್ಲಿ ನಡೆದ ಅಧ್ಯಯನವಲ್ಲದೆ, ಐಸಿಎಂಆರ್‌ ಮಾರ್ಗದರ್ಶನದಲ್ಲಿ ಮೇ ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಚಿತ್ರದುರ್ಗ, ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಸೆರೊ ಸರ್ವೆ ನಡೆಸಿತ್ತು. ಅದರಲ್ಲೂ ಇದೇ ಮಾದರಿಯ ಅಂಶ ಬೆಳಕಿಗೆ ಬಂದಿದೆ.

ಈ ಸರ್ವೆ ವೇಳೆ ಬೆಂಗಳೂರಿನ 400 ಮಂದಿಯಲ್ಲಿ ಶೇ.0.25 (ಒಬ್ಬರು), ಕಲಬುರಗಿಯ 399 ಮಂದಿಯ ಪೈಕಿ ಶೇ.0.25 (ಒಬ್ಬರು) ಜನರಲ್ಲಿ ಕೊರೋನಾ ವೈರಸ್‌ನ ಆ್ಯಂಟಿಬಾಡೀಸ್‌ ಪತ್ತೆಯಾಗಿದೆ. ಚಿತ್ರದುರ್ಗದಲ್ಲಿ 400 ಮಂದಿಗೆ ನಡೆಸಿದ ಪರೀಕ್ಷೆಯಲ್ಲಿ ಒಬ್ಬರಲ್ಲೂ ಸೋಂಕು ಪತ್ತೆಯಾಗಲಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಇದೇ ವೇಳೆ, ಸಮೀಕ್ಷೆ ಮುಂದುವರಿಸುವ ಮೂಲಕ ಮೂಲಕ ಸೋಂಕು ಸಮುದಾಯಕ್ಕೆ ಹರಡಿದೆಯೇ ಹಾಗೂ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿದೆಯೇ ಎಂಬುದನ್ನು ತಿಳಿದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು, ಬೆಂಗಳೂರಿನ ಮೂಲೆ-ಮೂಲೆಗೂ ಕೊರೋನಾ!

ಇತರೆ ಆಸ್ಪತ್ರೆಗಳಲ್ಲೂ ಪರೀಕ್ಷೆ

ಜಯದೇವದಲ್ಲಿ 1 ಸಾವಿರ ಮಂದಿಗೆ ನಡೆಸಿದ ಆ್ಯಂಟಿಬಾಡಿ ರಾರ‍ಯಪಿಡ್‌ ಟೆಸ್ಟ್‌ ಪರೀಕ್ಷೆಯಲ್ಲಿ 10 ಮಂದಿಯಲ್ಲಿ ಆ್ಯಂಟಿಬಾಡೀಸ್‌ ಪತ್ತೆಯಾಗಿದೆ. ಬಳಿಕ ಈ ಹತ್ತು ಮಂದಿಯನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಹೀಗಾಗಿ ಈ ಹತ್ತು ಮಂದಿಗೆ ಕೊರೋನಾ ಸೋಂಕು ಬಂದು ವಾಸಿಯಾಗಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸಿರುವ ಬಗ್ಗೆ ಅರಿಯಲು ರಾಜ್ಯದ ವಿವಿಧೆಡೆ ಇಂತಹ ಪರೀಕ್ಷೆಗಳನ್ನು ಮಾಡುವ ಅಗತ್ಯವಿದೆ. ಕಲಬುರಗಿ ಹಾಗೂ ಮೈಸೂರಿನ ಜಯದೇವ ಆಸ್ಪತ್ರೆಗಳಲ್ಲಿನ ಸಿಬ್ಬಂದಿಯ ಮೇಲೂ ಈ ರೀತಿಯ ಪರೀಕ್ಷೆ ಮಾಡಲಾಗುವುದು.

- ಡಾ.ಸಿ.ಎನ್‌. ಮಂಜುನಾಥ್‌, ನಿರ್ದೇಶಕ, ಜಯದೇವ ಆಸ್ಪತ್ರೆ