ಬೆಂಗಳೂರು(ಜೂ.14): ರಾಜ್ಯದಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ 5 ಗಂಟೆವರೆಗಿನ 24 ಗಂಟೆಗಳಲ್ಲೇ ಬರೋಬ್ಬರಿ ಹತ್ತು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲೇ ಒಂಬತ್ತು ಮಂದಿ ಮೃತಪಟ್ಟಿದ್ದು, 23 ವರ್ಷದ ಯುವಕ ಸಹ ಸೋಂಕಿಗೆ ಸಾವನ್ನಪ್ಪಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಈ ಮೂಲಕ ಒಟ್ಟು ಸೋಂಕಿತರ ಸಾವಿನ ಸಂಖ್ಯೆ 91ಕ್ಕೆ (2 ಆತ್ಮಹತ್ಯೆ ಸೇರಿ) ಏರಿಕೆಯಾಗಿದ್ದರೆ, ಶನಿವಾರ ರಾಜ್ಯದಲ್ಲಿ 308 ಮಂದಿಗೆ ಹೊಸದಾಗಿ ಸೋಂಕು ತಗಲುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6824 ಮುಟ್ಟಿದೆ. ಏತನ್ಮಧ್ಯೆ, ದೇಶದಲ್ಲಿ ಶನಿವಾರ ದಾಖಲೆಯ 394 ಸಾವು ಹಾಗೂ 12576 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದಲ್ಲಿ ಅನೇಕರಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ, ತನ್ನಿಂತಾನೇ ಗುಣಮುಖ!

ರಾಜ್ಯದಲ್ಲಿ ಶನಿವಾರ ವರದಿಯಾಗಿರುವ ಹತ್ತು ಸಾವಿನ ಪೈಕಿ ಆರೋಗ್ಯ ಇಲಾಖೆಯ ಅಧಿಕೃತ ಬುಲೆಟಿನ್‌ನಲ್ಲಿ 3 ಮಾತ್ರ ವರದಿಯಾಗಿದ್ದು, ಉಳಿದ ಏಳು ಪ್ರಕರಣಗಳು ಮುಂದಿನ ಬುಲೆಟಿನ್‌ನಲ್ಲಿ ವರದಿಯಾಗುವ ಸಾಧ್ಯತೆ ಇದೆ.

ಬುಲೆಟಿನ್‌ ಪ್ರಕಾರ ಧಾರವಾಡದಲ್ಲಿ ಮಹಾರಾಷ್ಟ್ರದಿಂದ ವಾಪಸಾಗಿದ್ದ 70 ವರ್ಷದ ವೃದ್ಧ ಜೂ.12ರಂದು ನಿಧನ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿ ಮಧುಮೇಹ, ಐಎಲ್‌ಐ ಹಿನ್ನೆಲೆ ಹೊಂದಿದ್ದ 23 ವರ್ಷದ ಯುವಕ, ಅಸ್ತಮಾ ಇದ್ದ 62 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಇದಲ್ಲದೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಜೂ.11ರಂದು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಸ್ಥಳಾಂತರ ಮಾಡಿದ್ದ 61 ವರ್ಷದ ವ್ಯಕ್ತಿ, ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆಯಿಂದ ರೆಫರ್‌ ಆಗಿದ್ದ 57 ವರ್ಷದ ಮಹಿಳೆ, ಜೂ.5ರಂದು ಆಸ್ಪತ್ರೆಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿ, ಜೂ.12ರಂದು ದಾಖಲಾಗಿದ್ದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ಮೂಲಗಳು ತಿಳಿಸಿವೆ.

ಉಳಿದಂತೆ ಜೂ.11ರಂದು ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ವ್ಯಕ್ತಿಯೊಬ್ಬರು ಕೊರೋನಾದಿಂದ ಮೃತಪಟ್ಟಿರುವುದು ಶನಿವಾರ ಸಂಜೆ ದೃಢಪಟ್ಟಿದೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಜೂ.12ರಂದು ಮುಂಜಾನೆ 4 ಗಂಟೆಗೆ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತರಿಗೆ ಸೋಂಕು ಇದ್ದದ್ದು ಜೂ.13ರ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಬುಲೆಟಿನ್‌ನಲ್ಲಿ ಪ್ರಕಟವಾಗಿಲ್ಲ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು, ಬೆಂಗಳೂರಿನ ಮೂಲೆ-ಮೂಲೆಗೂ ಕೊರೋನಾ!

ಇನ್ನು ಜಯದೇವ ಎದೆರೋಗಗಳ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಿಗೂ ಸಹ ಸೋಂಕು ದೃಢಪಟ್ಟಿದೆ ಎಂದು ಜಯದೇವ ಆಸ್ಪತ್ರೆ ಮೂಲಗಳು ತಿಳಿಸಿವೆ.

308 ಹೊಸ ಕೇಸ್‌:

ಶನಿವಾರ ರಾಜ್ಯದಲ್ಲಿ 308 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದೆ. ಶನಿವಾರದ ಪ್ರಕರಣಗಳ ಪೈಕಿ 208 ಮಂದಿ ಅಂತರ್‌ರಾಜ್ಯ, 25 ಮಂದಿ ವಿದೇಶಿ ಪ್ರಯಾಣಿಕರಿಗೆ ಸೋಂಕು ವರದಿಯಾಗಿದೆ. ಅಂತರ್‌ರಾಜ್ಯ ಪ್ರಯಾಣದಲ್ಲಿ ಬಹುತೇಕರು ಮಹಾರಾಷ್ಟ್ರದಿಂದಲೇ ವಾಪಸಾಗಿದ್ದಾರೆ.

ಕಲಬುರಗಿ 67, ಯಾದಗಿರಿ 52, ಬೀದರ್‌ 42, ಬೆಂಗಳೂರು ನಗರ 31, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಹಾಸನ 11, ಬಳ್ಳಾರಿ 11, ವಿಜಯಪುರ 6, ರಾಯಚೂರು 5, ಉತ್ತರ ಕನ್ನಡ 5, ಕೋಲಾರ 4, ದಾವಣಗೆರೆ 3, ಮಂಡ್ಯ, ಹಾವೇರಿ ತಲಾ 2, ಮೈಸೂರು, ಬಾಗಲಕೋಟೆ, ರಾಮನಗರದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.