ಅರಣ್ಯ, ವನ್ಯಜೀವಿ ಉಳಿದರೆ ಮಾತ್ರ ಮನುಕುಲ ಉಳಿವು: ರಿಷಬ್ ಶೆಟ್ಟಿ
ಸಾಮಾಜಿಕ ಜವಾಬ್ದಾರಿ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮ ಸಂಸ್ಥೆಗಳಾದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ಆವೃತ್ತಿಯ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಸೋಮವಾರ ಬಂಡೀಪುರ ಅರಣ್ಯಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ನೀಡಿದರು.
ದೇವರಾಜು ಕಪ್ಪಸೋಗೆ
ಚಾಮರಾಜನಗರ (ಜ.31): ಸಾಮಾಜಿಕ ಜವಾಬ್ದಾರಿ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮ ಸಂಸ್ಥೆಗಳಾದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ಆವೃತ್ತಿಯ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಸೋಮವಾರ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ನಡೆಸಿದ ಸಂವಾದ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕಾಡಿನ ರಕ್ಷಣೆ ಬಗ್ಗೆ ನಿರಂತರವಾಗಿ ಕಾರ್ಯಕ್ರಮ ರೂಪಿಸಿರುವುದಕ್ಕೆ ನಟ ಹ್ಯಾಟ್ಸಾಪ್ ಎಂದರು. ನನ್ನ ಸಿನಿಮಾಗಳಲ್ಲೂ ಪರಿಸರ ಉಳಿಸುವ ವಿಚಾರ, ಕಾಡಿನ ಚೆಲುವನ್ನು ಅಳವಡಿಸಿಕೊಂಡಿದ್ದೇನೆ. ಕಾಡಿದ್ದರಷ್ಟೇ ನಾಡು, ಕಾಡಿದ್ದರಷ್ಟೇ ನಾವು-ನೀವು ಎಂಬ ಜಾಗೃತಿ ಈ ಅಭಿಯಾನದ ಮೂಲಕ ಸಾಕಾರಗೊಳ್ಳುತ್ತಿದೆ. ನಾನು ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿಯಾಗಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದರು.
ಕಾಡು ಉಳಿದರೆ ನಾಡು ಉಸಿರಾಡುತ್ತದೆ: ನಟ ರಿಷಬ್ ಶೆಟ್ಟಿ
ಕಾಡಿನ ಅಂದಕ್ಕೆ ಮನಸೋತ ಕಾಂತಾರ ಶಿವ: ಬಂಡೀಪುರದ ಬೋಳುಗುಡ್ಡೆ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ಕೊಟ್ಟ ರಿಷಬ್ ಶೆಟ್ಟಿಆ ಶಿಬಿರದಿಂದಲೇ ನಿಂತು ಅರಣ್ಯ ವೀಕ್ಷಣೆ ಮಾಡಿದರು. ಬಂಡೀಪುರ ಅರಣ್ಯ ಮತ್ತು ಅರಣ್ಯ ರಕ್ಷಣೆಗೆ ಯೋಧರಂತೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಜೊತೆ ಆತ್ಮೀಯವಾಗಿ ಬೆರೆತರು. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಘೋಷಣೆಯಾಗಿ 50 ವರ್ಷವಾದ ಸಂದರ್ಭದಲ್ಲಿ ನಾನು ಅಣ್ಣಾವ್ರ ಅಭಿಮಾನಿಯಾಗಿ ಅವರ ಅಭಿನಯದ ಗಂದಧಗುಡಿ ಚಿತ್ರೀಕರಣ ನಡೆದ ಬೋಳುಗುಡ್ಡದಲ್ಲಿ ಬಂಡೀಪುರ ಕಾಡಿನ ಸೌಂದರ್ಯ ಸವಿದಿರುವುದು ನಿಜಕ್ಕೂ ವಿಸ್ಮಯ ಎಂದರು.
ನಾವಲ್ಲ ಹೀರೋ ನೀವು: ಪರಿಸರ ಸಮತೋಲನ ನಿಟ್ಟಿನಲ್ಲಿ ಶೇ.33ರಷ್ಟುಅರಣ್ಯ ಇರಬೇಕು. ಈಗ ನಮ್ಮಲ್ಲಿ ಶೇ.24 ರಷ್ಟುಮಾತ್ರ ಅರಣ್ಯ ಇದ್ದು, ನಾವು ಅರಣ್ಯ ಉಳಿಸುವ ನಿಟ್ಟಿನಲ್ಲಿ ಇನ್ನೂ ಹೋರಾಟ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ನಿಜವಾದ ಹೀರೋಗಳು ಎಂದರೆ ಅರಣ್ಯ ವೀಕ್ಷಕರು ಮತ್ತು ರಕ್ಷಕರು. ಗಡಿಯಲ್ಲಿ ಯೋಧರಂತೆ ಇವರು ಅರಣ್ಯ ರಕ್ಷಣೆಯಲ್ಲಿ ತೊಡಗಿದ್ದಾರೆ. ನೀವೇ ನಿಜವಾದ ಹೀರೋಗಳು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಕೆಲಸಕ್ಕೆ ಸಲಾಂ ಮಾಡಿದರು.
ಪ್ರಕೃತಿ ಗೆಲ್ಲಲಿ: ಪ್ರಕೃತಿ ಹಾಗೂ ಮಾನವನ ನಡುವಿನ ಸಂಘರ್ಷದಲ್ಲಿ ಪ್ರಕೃತಿ ಗೆಲ್ಲಬೇಕು, ಮಾನವ ಸೋತು ಗೆಲ್ಲಬೇಕು. ಅಣ್ಣಾವ್ರ ಗಂಧದಗುಡಿ ಸಿನಿಮಾ ನಮಗೆ ಪ್ರೇರಣೆ. ಕಾಡು ಮತ್ತು ಕಾಡಿನಲ್ಲಿ ವಾಸಿಸುವ ಜನರನ್ನು ಉಳಿಸುವ ಮೂಲಕ ಅರಣ್ಯ ನಮಗೆ ಸೇರಿದ್ದು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ರಿಷಬ್ ಅಭಿಪ್ರಾಯಪಟ್ಟರು. ಈ ಅಭಿಯಾನದ ಮೂಲಕ ನಾನು ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಯಿಂದ ರೋಚಕ ಕಥೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ಇದರಿಂದ ನನ್ನ ಚಿತ್ರಗಳಲ್ಲಿ ಕೆಲ ಅಂಶ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಪ್ರತಿಯೊಂದು ಕಥೆಗಳು ರೋಚಕವಾಗಿವೆ, ಅರಣ್ಯ ಸಿಬ್ಬಂದಿ ಕೆಲಸ ನಿಜಕ್ಕೂ ಸುಲಭವಲ್ಲ ಎಂದರು. ಈ ಬಾರಿಯ ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿಯಾಗಿರುವುದು ನಮ್ಮ ಜವಾಬ್ದಾರಿ. ಇನ್ನಷ್ಟು ಪರಿಣಾಮಕಾರಿಯಾಗಿ ಜನ ಜಾಗೃತಿ ಮೂಡಿಸುವ ಮೂಲಕ ನಾಡಿನ ಎಲ್ಲ ಮೂಲೆಗಳ ಹುಲಿ ಅಭಯಾರಣ್ಯ, ವನ್ಯಜೀವಿ ಧಾಮಗಳ ಸುತ್ತಮುತ್ತಲ ಗ್ರಾಮಗಳುದ್ದಕ್ಕೂ ಅಭಿಯಾನ ನಡೆಸಿ ಅರಣ್ಯ, ವನ್ಯಜೀವಿಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ ಎಂಬ ಸತ್ಯವನ್ನು ಸಾರುವ ಕೆಲಸ ಮಾಡುತ್ತಿದ್ದೇವೆ. ಈ ಜಾಗೃತಿಯಲ್ಲಿ ನಾನು ಸಕ್ರಿಯನಾಗಿ ತೊಡಗಿಸಿಕೊಳ್ಳುವೆ ಎಂದರು.
ಪ್ರಕೃತಿ ಎದುರಿನ ಸಂಘರ್ಷದಲ್ಲಿ ಮನುಷ್ಯ ಸೋಲಬೇಕು: ರಿಷಬ್ ಶೆಟ್ಟಿ
ನಟನನ್ನು ಕಂಡ ಸಿಬ್ಬಂದಿ ಹರ್ಷ: ದೇಶದಲ್ಲೇ ಕಾಂತಾರ ಸಿನಿಮಾದ ಮೂಲಕ ಮೋಡಿ ಮಾಡಿರುವ ನಟ ರಿಷಬ್ ಶೆಟ್ಟಿ ಬಂಡೀಪುರ ಹಾಗೂ ಇನ್ನಿತರ ಕಡೆ ಭೇಟಿ ಕೊಟ್ಟವೇಳೆ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಖುಷಿಗೊಂಡರು. ನೆಚ್ಚಿನ ನಟನನ್ನು ಕಂಡ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸಂಭ್ರಮದಿಂದ ಸೆಲ್ಫೀ ತೆಗೆದುಕೊಂಡರು.