Asianet Suvarna News Asianet Suvarna News

ಕಾಡು ಉಳಿದರೆ ನಾಡು ಉಸಿರಾಡುತ್ತದೆ: ನಟ ರಿಷಬ್‌ ಶೆಟ್ಟಿ

ಕಾಡು ಉಳಿದರೆ, ಪ್ರಾಣಿ-ಪಕ್ಷಿಗಳ ಸಂಕುಲ ರಕ್ಷಣೆಯಾಗುತ್ತದೆ. ನಾಡು ಉಸಿರಾಡುತ್ತದೆ. ಆಗ ಮಾನವ ಕುಲ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವನ್ಯಜೀವಿಯ ಸಂರಕ್ಷಣಾ ಅಭಿಯಾನ ರಾಯಭಾರಿ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಭಿಪ್ರಾಯಪಟ್ಟರು. 

If The Forest Remains The Country Breathes Says Wildlife Conservation Campaign Ambassador Rishab Shetty gvd
Author
First Published Jan 7, 2023, 6:42 AM IST

ಧರ್ಮಾಪುರ ನಾರಾಯಣ್‌

ಹುಣಸೂರು (ಜ.07): ಕಾಡು ಉಳಿದರೆ, ಪ್ರಾಣಿ-ಪಕ್ಷಿಗಳ ಸಂಕುಲ ರಕ್ಷಣೆಯಾಗುತ್ತದೆ. ನಾಡು ಉಸಿರಾಡುತ್ತದೆ. ಆಗ ಮಾನವ ಕುಲ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವನ್ಯಜೀವಿಯ ಸಂರಕ್ಷಣಾ ಅಭಿಯಾನ ರಾಯಭಾರಿ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ, ‘ಇಂದು ಸಾಧ್ಯ, ಮುಂದೆ ಅಸಾಧ್ಯ’ ಘೋಷವಾಕ್ಯದೊಂದಿಗೆ ಮಾತನಾಡಿದ ಅವರು, ಪ್ರಕೃತಿಯ ಜೊತೆ ಮನುಷ್ಯ ಪೈಪೋಟಿ ನಡೆಸಿದರೆ ಮುಂದೆ ಮಾನವ ಸಂಕುಲಕ್ಕೆ ಭಾರಿ ಸಂಕಷ್ಟಎದುರಾಗಲಿದೆ ಎಂದರು.

ಉದಾಹರಣೆಗೆ ಪ್ರವಾಹ ಉಂಟಾದಾಗ ಕೆರೆ, ಕಟ್ಟೆಗಳ ಒತ್ತುವರಿ ತೆರವು ಜಾಗವನ್ನು ಪತ್ತೆ ಹಚ್ಚುವುದನ್ನು ನಾವು ಗಮನಿಸಿದ್ದೇವೆ. ಹಾಗೆಯೇ ಕಾಡಿನ ವಿಸ್ತೀರ್ಣ ಕೂಡ ದಿನಗಳು ಕಳೆದಂತೆ ಕಡಿಮೆಯಾಗುತ್ತಿದೆ. ಹಾಗೆಯೇ ಪ್ರಾಣಿಗಳು ನಾಡಿನತ್ತ ಲಗ್ಗೆ ಹಾಕುತ್ತಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ಕಾಡು ಉಳಿಸುವ ನಿಟ್ಟಿನಲ್ಲಿ ನಾವು ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಕನ್ನಡಪ್ರಭ ದಿನಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ದೇಶ ವಿದೇಶ ಮತ್ತು ರಾಜ್ಯಗಳಿಂದ ಅತಿ ಹೆಚ್ಚು ಪ್ರವಾಸಿಗರು ಬರುವ ಈ ಸ್ಥಳವನ್ನು ಕಾಪಾಡುವುದು ನಮ್ಮಲ್ಲರ ಹೊಣೆಗಾರಿಕೆಯಾಗಿದೆ. ಕಾಡು ಉಳಿಸಿ ಪ್ರಾಣಿಗಳನ್ನು ಸಂರಕ್ಷಣೆ ಮಾಡುವುದು ಮುಂದಿನ ಯುವ ಪೀಳಿಗೆಗೆ ಸಂಪತ್ತನ್ನು ಉಳಿಸುವುದು ನಮ್ಮಲ್ಲರ ಕರ್ತವ್ಯ. 

ಪ್ರಕೃತಿ ಎದುರಿನ ಸಂಘರ್ಷದಲ್ಲಿ ಮನುಷ್ಯ ಸೋಲಬೇಕು: ರಿಷಬ್‌ ಶೆಟ್ಟಿ

ಈ ನಿಟ್ಟಿನಲ್ಲಿ ನಮ್ಮ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಳೆದ 10 ವರ್ಷಗಳಿಂದ ಅಭಿಯಾನ ಆರಂಭಿಸಿ ಕಾಡಂಚಿನ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು. ವನ್ಯಜೀವಿ ಉಸ್ತುವಾರಿ ವಿನೋದ್‌ಕುಮಾರ್‌ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಡು ಉಳಿಸಿ, ಪ್ರಾಣಿ ರಕ್ಷಣೆ ಬಗ್ಗೆ ನಾವು ಅಭಿಯಾನ ಮಾಡಿದರೆ ಸಾಲದು. ಈ ಭಾಗದ ಜನ ಈ ಅಭಿಯಾನದ ಅರಿವನ್ನು ಪಡೆದುಕೊಂಡು ಕಾಡು ಮತ್ತು ಪ್ರಾಣಿಗಳ ಸಂಕುಲ ಮುಂದಿನ ಪೀಳಿಗೆಗೆ ಉಳಿಯುವಂತೆ ನೋಡಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.

ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ, ಉಪಾಧ್ಯಕ್ಷ ಅನಿಲ್‌ ಸುರೇಂದ್ರ, ಸಸ್ಯಶಾಸ್ತ್ರಜ್ಞ ಡಾ. ರಿಷೇಕೇಶ್‌ ದಾಂಬ್ಲೆ, ತಾಪಂ ಇಒ ಮನು, ಬಿಇಒ ರೇವಣ್ಣ, ಎಸಿಎಫ್‌ ದಯಾನಂದ್‌, ಆರ್‌ಎಫ್‌ಒ ಘಣರಾಜ್‌ ಪಾಟಕ್‌, ಗ್ರಾಪಂ ಅಧ್ಯಕ್ಷ ಮುದಗನೂರು ಸುಭಾಷ್‌, ಗ್ರಾಪಂ ಉಪಾಧ್ಯಕ್ಷೆ ಯಶೋಧಾ ಮಂಜುನಾಥ್‌, ಶಾಲೆಯ ಮುಖ್ಯಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಇದ್ದರು.

ಆನೆ ದಾಳಿಯಿಂದ ತಂದೆ ಕಳೆದುಕೊಂಡ ವಿದ್ಯಾರ್ಥಿ ಮಾತು ಕೇಳಿ ಕಣ್ಣೀರಿಟ್ಟ ನಟ: ಅಭಿಯಾನದಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ನಡೆಸುತ್ತಾ ಭಾವುಕರಾಗಿ ಒಂದು ಕ್ಷಣ ಕಣ್ಣೀರಿಟ್ಟರು. ಸಂವಾದದಲ್ಲಿ ಪ್ರಶ್ನೆ ಕೇಳಿದ ದೊಡ್ಡಹೆಜ್ಜೂರು ವಿದ್ಯಾರ್ಥಿ ಋುಷಿ ಎಂಬಾತ ಕಾಡಾನೆ ಹಾವಳಿಯಿಂದ ತನ್ನ ತಂದೆಯನ್ನು ಕಳೆದುಕೊಂಡೆ ಎಂಬ ದುಃಖದ ಮಾತು ಕೇಳಿ ರಿಷಬ್‌ ಶೆಟ್ಟಿಕೂಡ ವೇದಿಕೆಯ ಹಿಂಭಾಗ ತಿರುಗಿ ಭಾವುಕರಾದರು. ಕಾಡಾನೆ ದಾಳಿಯಿಂದ ಮೃತಪಟ್ಟವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಮತ್ತು ನಾವು ಏನೇ ಮಾಡಿದರೂ ಪ್ರಯೋಜನವಿಲ್ಲ, ಆದರೆ ಮಾನವೀಯತೆ ನಾವು ಅವರಿಗೆ ನೈತಿಕ ಸ್ಥೈರ್ಯ ತುಂಬುಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಅವರ ಪುತ್ರ, ವಿದ್ಯಾರ್ಥಿ ಋುಷಿಯನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಧನ ಸಹಾಯ ಮಾಡುವ ಭರವಸೆ ನೀಡಿದರು.

ರಿಷಬ್‌ ಶೆಟ್ಟಿ ಅವರಿಗೆ ಗ್ರಾಮಸ್ಥರಿಂದ ಮತ್ತು ಅಭಿಮಾನಿಗಳು ಅಭಿನಂದನೆಯ ಸುರಿಮಳೆಯನ್ನೇ ಸುರಿಸಿದರು. ಶಾಲೆ ದತ್ತು ತೆಗೆದುಕೊಳ್ಳಲು ನಿಮ್ಮ ಸಹಕಾರ ಬೇಕು. ಏಕೆಂದರೆ ನಾನು ಎಲ್ಲೆಲ್ಲಿ ಏನೇನು ಮಾಡಿದ್ದೇನೆ ಎಂಬುದು ಬೇಡ, ಆದರೆ ನಿಮ್ಮ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರೆ ನಾನು ಕೈ ಜೋಡಿಸುವೆ ಎಂದು ರಿಷಬ್‌ ಭರವಸೆ ನೀಡಿದರು. ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪುತ್ಥಳಿ ಮಾಡಲು ಸಹಕಾರ ಕೋರಿರುವುದಕ್ಕೆ ನಾನು ನಿಲ್ಲುವೆ. ಅದಕ್ಕಿಂತ ಪುನೀತ್‌ ಅವರ ಸೇವೆಯನ್ನು ಮುಂದುವರೆಸಿಕೊಂಡರೆ ಹೋದರೆ ಉತ್ತಮ ಬೆಳವಣಿಗೆ ಎಂದರು.

ರಾಯಭಾರಿ ರಿಷಬ್‌ ಶೆಟ್ಟಿಮೂಲಕ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪತ್ರಿಕೆ ಮತ್ತು ಇಲಾಖೆ ಕಾಡಂಚಿನ ಪ್ರದೇಶದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ನಡವಳಿ ಮಾಡಿ ನನಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ. ನಾನೂ ಕೂಡ ಈ ಬಗ್ಗೆ ಒತ್ತು ನೀಡುವೆ.
-ಎಚ್‌.ಪಿ.ಮಂಜುನಾಥ್‌, ಸ್ಥಳೀಯ ಶಾಸಕ.

ಸುದ್ದಿ ನೀಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯೂ ಮಾಧ್ಯಮಗಳ ಹೊಣೆ: ರವಿ ಹೆಗಡೆ

ಕಾಡಿನ ಪ್ರಾಣಿಗಳು ನಾಡಿಗೆ ಲಗ್ಗೆ ಹಾಕುತ್ತಿರುವುದಕ್ಕೆ ಅಧಿಕಾರಿಗಳು ಅಥವಾ ಸರ್ಕಾರ ಕಾರಣವಲ್ಲ. ಜನಸಂಖ್ಯೆ ಹೆಚ್ಚಾದಂತೆ ಕಾಡು ಕಡಿಮೆಯಾಗಿ ಪ್ರಾಣಿ ಸಂಕುಲಕ್ಕೆ ಧಕ್ಕೆಯಾದಂತೆ ನಾಡಿಗೆ ಲಗ್ಗೆ ಹಾಕುತ್ತಿವೆ. ಇದಕ್ಕೆ ಪರ್ಯಾಯವಾಗಿ ನಾವೇನು ಮಾಡಬೇಕು ಎಂಬುದನ್ನು ಅರಿತು ಇಂತಹ ಅಭಿಯಾನಗಳು ನಡೆಯಬೇಕಿದೆ.
-ಜಿ.ಡಿ.ಹರೀಶ್‌ಗೌಡ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ

Follow Us:
Download App:
  • android
  • ios