ಮಂಗಳೂರು[ಜ.21]: ಇದುವರೆಗೆ ಉಗ್ರರ ಸ್ಲೀಪರ್‌ಸೆಲ್‌ ಆಗಿದ್ದ ಕರಾವಳಿಯಲ್ಲಿ ಈಗ ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಿಲೋಗಟ್ಟಲೆ ಸಜೀವ ಬಾಂಬ್‌ ಪತ್ತೆಯಾಗುವುದರೊಂದಿಗೆ ಮಂಗಳೂರಿಗೆ ಉಗ್ರರ ಕರಿನೆರಳು ಬಿದ್ದಂತಾಗಿದೆ.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್‌ ನಾಶಗೊಳಿಸಿದ ಗಂಗಯ್ಯ!

2008ರಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಡಿಯನ್‌ ಮುಜಾಹಿದೀನ್‌ ಉಗ್ರರ ಬಾಂಬ್‌ ಫ್ಯಾಕ್ಟರಿ ಪತ್ತೆಯಾಗಿತ್ತು. ಮಂಗಳೂರು ಹೊರವಲಯದ ಉಳ್ಳಾಲದ ಚೆಂಬುಗುಡ್ಡೆ ಮತ್ತು ಸುಭಾಷ್‌ ನಗರದಲ್ಲಿ ಬಾಂಬ್‌ ತಯಾರಿ ಪತ್ತೆಯಾಗಿತ್ತು. ಇದನ್ನು ಮುಂಬೈ ಪೊಲೀಸರು ಮಂಗಳೂರು ಪೊಲೀಸರ ಜೊತೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭೇದಿಸಿದ್ದರು. ಈ ಸಂಬಂಧ ಇಂಡಿಯನ್‌ ಮುಜಾಹಿದೀನ್‌(ಐಎಂ) ಉಗ್ರ ಸಂಘಟನೆ ಮುಖ್ಯಸ್ಥರಾದ ರಿಯಾಜ್‌ ಭಟ್ಕಳ್‌, ಇಕ್ಬಾಲ್‌ ಭಟ್ಕಳ್‌ ಹಾಗೂ ಯಾಸಿನ್‌ ಭಟ್ಕಳ್‌ ಯಾನೆ ಮೊಹಮ್ಮದ್‌ ಸಿದ್ದಿಬಾಪ ಈ ಸಹೋದರರ ಕೈವಾಡ ಸ್ಪಷ್ಟಗೊಂಡಿತ್ತು. ಆದರೆ ಪೊಲೀಸ್‌ ಕಾರ್ಯಾಚರಣೆಗೂ ಮೊದಲೇ ಇವರೆಲ್ಲ ಮಂಗಳೂರು ಬಿಟ್ಟು ತೆರಳಿದ್ದರು.

ಈ ಘಟನೆಗೆ ಸಂಬಂಧಿಸಿ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ದಾಳಿ ಕಾರ್ಯಾಚರಣೆ ವೇಳೆ ಚೆಂಬುಗುಡ್ಡೆ ಮತ್ತು ಸುಭಾಷ್‌ನಗರದ ಮನೆಯಲ್ಲಿ ಬಾಂಬ್‌ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿದ್ದರು. ಬಂಧಿತರು ನೀಡಿದ ಮಾಹಿತಿಯಂತೆ ಉಗ್ರರು ಬಾಂಬ್‌ ತಯಾರಿಕೆಗೆ ಬಳಸುತ್ತಿದ್ದ ಮೂಲ್ಕಿ ಸಮೀಪ ಹಳೆಯಂಗಡಿಯ ಮನೆಗೆ ಹಾಗೂ ಚಿಕ್ಕಮಗಳೂರಿನ ಕೊಪ್ಪದಲ್ಲಿ ಉಗ್ರ ತರಬೇತಿ ಶಿಬಿರಕ್ಕೆ ಪೊಲೀಸರು ದಾಳಿ ನಡೆಸಿದ್ದರು.

ಮಂಗಳೂರಿನಿಂದಲೇ ಬಾಂಬ್‌ ಪೂರೈಕೆ:

ಆ ಸಂದರ್ಭ ದೇಶದ ದೆಹಲಿ, ಮುಂಬೈ ಹಾಗೂ ಅಹಮದಾಬಾದ್‌ಗಳಲ್ಲಿ ನಡೆದಿದ್ದ ಬಾಂಬ್‌ ಸ್ಫೋಟಕ್ಕೆ ಮಂಗಳೂರಿನಿಂದಲೇ ಬಾಂಬ್‌ ಪೂರೈಕೆಯಾಗಿರುವುದು ಪೊಲೀಸ್‌ ತನಿಖೆಯಲ್ಲಿ ದೃಢಪಟ್ಟಿತ್ತು. ಬಾಂಬ್‌ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೇರಳದಿಂದ ಮಂಗಳೂರಿಗೆ ಮಾತ್ರವಲ್ಲ ಉಡುಪಿಗೂ ರೈಲಿನಲ್ಲಿ ತರಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಇದಲ್ಲದೆ 2010ರಲ್ಲಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, 2012 ಪೂಣೆ ಸ್ಫೋಟಗಳ ಹಿಂದೆ ರಿಯಾಜ್‌ ಭಟ್ಕಳ್‌ ಸಹೋದರರ ಕೈವಾಡ ಪೊಲೀಸರಿಗೆ ಸ್ಪಷ್ಟಗೊಂಡಿತ್ತು.

ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್‌ ಕೊಟ್ಟಿರಲೇ ಇಲ್ಲ!

ಮಂಗಳೂರಲ್ಲಿದ್ದ ಯಾಸಿನ್‌ ಭಟ್ಕಳ್‌:

ದೇಶದ ವಿವಿಧ ಕಡೆಗಳ ಬಾಂಬ್‌ ಸ್ಫೋಟದ ರೂವಾರಿಗಳಲ್ಲೊಬ್ಬನಾದ ಯಾಸಿನ್‌ ಭಟ್ಕಳ್‌ 2013ರಲ್ಲಿ ಮಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಅದರಂತೆ ಮಂಗಳೂರಿನ ಅತ್ತಾವರದ ಅಪಾರ್ಟ್‌ಮೆಂಟ್‌ಗೆ ದೆಹಲಿ ಪೊಲೀಸರ ನೆರವಿನಲ್ಲಿ ದಾಳಿ ನಡೆಸಲಾಯಿತು. ಆದರೆ, ಅದಕ್ಕೂ ಒಂದೆರಡು ದಿನ ಮೊದಲು ಯಾಸಿನ್‌ ಭಟ್ಕಳ್‌ ಮಂಗಳೂರು ಬಿಟ್ಟು ಪರಾರಿಯಾಗಿದ್ದನು.

ಉಗ್ರ ನಂಟು:

ಮಂಗಳೂರು ಉಗ್ರರ ಸ್ಲೀಪರ್‌ ಸೆಲ್‌ ಎಂಬ ಕುಖ್ಯಾತಿಗೆ ಒಳಗಾದ ಬಳಿಕ 2013ರಲ್ಲಿ ಪಟನಾದಲ್ಲಿ ಸಂಭವಿಸಿದ ಸ್ಫೋಟಕ್ಕೆ ಮಂಗಳೂರು ಲಿಂಕ್‌ ಇರುವುದು ಪತ್ತೆಯಾಯಿತು. ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ ಆರೋಪದಲ್ಲಿ ಬಜಪೆ ಬಳಿಯ ಪಂಜಿಮೊಗರಿನ ಜುಬೈರ್‌ ಹುಸೇನ್‌ ಎಂಬಾತನನ್ನು ಮಂಗಳೂರು ಪೊಲೀಸರ ನೆರವಿನಲ್ಲಿ ಬಿಹಾರ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಶಕ್ಕೆ ತೆಗೆದುಕೊಂಡಿತ್ತು. ಜುಬೈರ್‌ ಹುಸೇನ್‌ ಹಾಗೂ ಆತನ ಪತ್ನಿ ಆಯಿಷಾ ಬಾನು ಸೇರಿ ಪಾಕಿಸ್ತಾನ ಉಗ್ರರಿಗೆ ಹವಾಲ ಹಣ ರವಾನೆ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದರು.

ಆಟೋದಲ್ಲಿ ಬಂದಿದ್ದ ಟೋಪಿ ಬಾಂಬರ್‌ ಯಾರು?