ಎಚ್ಚೆತ್ತ ಮಂಗಳೂರು ಪೊಲೀಸರು: ನಿಯಮ ಉಲ್ಲಂಘಿಸಿದ 123 ಬಸ್ಸುಗಳ ವಿರುದ್ದ ಕೇಸು!
ಖಾಸಗಿ ಬಸ್ಸಿನ ಫುಟ್ ಬೋರ್ಡ್‌ನಲ್ಲಿ ನಿಂತಿದ್ದ ನಿರ್ವಾಹಕ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇಂದು ಮಂಗಳೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದ 123 ಬಸ್ಸುಗಳ ವಿರುದ್ದ ಕೇಸು ಜಡಿದಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಸೆ.01): ಖಾಸಗಿ ಬಸ್ಸಿನ ಫುಟ್ ಬೋರ್ಡ್‌ನಲ್ಲಿ ನಿಂತಿದ್ದ ನಿರ್ವಾಹಕ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇಂದು ಮಂಗಳೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದ 123 ಬಸ್ಸುಗಳ ವಿರುದ್ದ ಕೇಸು ಜಡಿದಿದ್ದಾರೆ. ಖಾಸಗಿ ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪದ ಮೇರೆಗೆ ಮಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮೊನ್ನೆ ಮಧ್ಯಾಹ್ನ ನಗರದ ನಂತೂರು ಸರ್ಕಲ್ ಬಳಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಕಂಡೆಕ್ಟರ್ ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಬಸ್ ಮಾಲಕರ ಜೊತೆ ಮಾತುಕತೆ ನಡೆಸಿ ಕೆಲವೊಂದು ಸೂಚನೆಗಳನ್ನು ನೀಡಿ ಅವುಗಳ ಪಾಲನೆಗೆ ನಿರ್ದೇಶನ ನೀಡಿದ್ದಾರೆ. ಅದರ ಜೊತೆಗೆ ನಗರದ ಹಲವು ಭಾಗಗಳಲ್ಲಿ ಬಸ್ ಗಳ ಫುಡ್ ಬೋರ್ಡ್ ಗಳಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರು ನಿಂತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಸ್ ಗಳನ್ನು ತಡೆದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್: ದಲಿತ ಮುಖಂಡನಿಂದ ಹಿಂದೂ ದೇವರ ವಿರುದ್ಧ ಸೊಂಟದ ಕೆಳಗಿನ ಭಾಷಾ ಪ್ರಯೋಗ!
ಸದ್ಯ ಕೇಸುಗಳನ್ನು ದಾಖಲಿಸಿ ಎಚ್ಚರಿಕೆ ನೀಡಲಾಗಿದ್ದು, ನಿಯಮ ಮತ್ತೆ ಉಲ್ಲಂಘಿಸಿದರೆ ಪರ್ಮಿಟ್ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಇನ್ನು ಬಸ್ಸು ಮಾಲೀಕರ ಜೊತೆ ಪೊಲೀಸ್ ಕಮಿಷನರ್ ನಡೆಸಿದ ಸಭೆಯಲ್ಲಿ ಬಸ್ ಮಾಲೀಕರು ಬಾಗಿಲುಗಳನ್ನು ಅಳವಡಿಸುವ ಬಗ್ಗೆ ಒಪ್ಪಿದ್ದಾರೆ. ಅಲ್ಲದೇ ಬಸ್ ನಿರ್ವಾಹಕರು ಹಾಗೂ ಪ್ರಯಾಣಿಕರು ಬಸ್ ನ ಫುಟ್‌ಬೋರ್ಡ್‌ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಚಲಿಸುವುದಿಲ್ಲ ಎಂದು ಮಾಲೀಕರು ಭರವಸೆ ನೀಡಿದ್ದಾರೆ. ಈಗಾಗಲೇ ಬಾಗಿಲು ಹೊಂದಿರುವ ಬಸ್‌ಗಳು ಇನ್ನೂ ಕಟ್ಟುನಿಟ್ಟಾಗಿ ನಿಯಮ ಅನುಸರಿಸುತ್ತವೆ ಮತ್ತು ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್‌ಗಳಲ್ಲಿ ಬಾಗಿಲು ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಮಾಲೀಕರು ತಿಳಿಸಿದ್ದಾರೆ.