ಮಂಗಳೂರು[ಜ.27]: ಕರಾವಳಿಯಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿದ್ದ ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಸಚಿವ  ಕೆ. ಅಮರನಾಥ ಶೆಟ್ಟಿ(80) ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಅಮರನಾಥ ಶೆಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಮೂಲತಃ ಮೂಡಬಿದರೆಯವರಾದ ಅಮರನಾಥ ಶೆಟ್ಟಿ ಗುತ್ತಿನ ಮನೆತನದವರು. ಹೀಗಿದ್ದರೂ ತೀರಾ ಸರಳಜೀವಿಯಾಗಿದ್ದ ವರು ಶೆಟ್ಟರು ಮೂಡುಬಿದಿರೆಯಲ್ಲಿ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

1965ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಅಮರನಾಥ ಶೆಟ್ಟಿ , ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಬಳಿಕ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1983ರಲ್ಲಿ ಮೊದಲ ಬಾರಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದ ಅಮರನಾಥ ಶೆಟ್ಟಿ, ಬಳಿಕ 1987 ಮತ್ತು 1994ರಲ್ಲೂ ಶಾಸಕರಾಗಿ ಆಯ್ಕೆಯಾದರು.

1983ರಲ್ಲಿ ಶಾಸಕರಾಗಿ ಆಯ್ಕೆಯಾದ ಶೆಟ್ಟಿಯವರು ರಾಮಕೃಷ್ಣ ಹೆಗಡೆ ಆಡಳಿತಾವಧಿಯಲ್ಲಿ ಮುಜರಾಯಿ ಸಚಿವರಾಗಿದ್ದರೆ, 1985ರಲ್ಲಿ ಯುವಜನ ಸೇವೆ, ಕ್ರೀಡಾ ಖಾತೆ ಸಚಿವರಾಗಿದರು. ಆದರೆ 1989ರ ಚುನಾವಣೆಯಲ್ಲಿ ಸೋಲನುಭವಿಸಿದರು. ಇದಾದ ಬಳಿಕ 1994ರಲ್ಲಿ ಮತ್ತೆ ಗೆದ್ದು ಜೆ. ಎಚ್ ಪಟೇಲ್ ಆಡಳಿತಾವಧಿಯಲ್ಲಿ ಮುಜರಾಯಿ ಸಚಿವರಾಗಿದರು. 

ಸೋಲು, ಗೆಲುವು ಕಂಡರೂ ಅಮರನಾಥ ಶೆಟ್ಟಿ ಪಕ್ಷ ನಿಷ್ಠೆ ಬಿಟ್ಟಿರಲಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಆಫರ್ ಬಂದರೂ, ಪಕ್ಷ ಬಿಡಲ್ಲ. ಸತ್ತರೆ ಜನತಾ ಪಕ್ಷದಲ್ಲೇ ಸಾಯುವೆ ಎನ್ನುತ್ತಿದ್ದ ಮರನಾಥ ಶೆಟ್ಟಿ, ಇದೇ ಕಾರಣದಿಂದ ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ನಿಕಟವರ್ತಿಗಳಲ್ಲಿ ಒಬ್ಬರಾಗಿ ಉಳಿದಿದ್ದರು. 

ಪಕ್ಷ ನಿಷ್ಠ ರಾಜಕಾರಣೆ ಅಮರನಾಥ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇ ಗೌಡ, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.