ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ 'muslim__leader' ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ನೈತಿಕ ಪೊಲೀಸ್‌ಗಿರಿ ಘಟನೆಯನ್ನು ಮುಂದಿಟ್ಟುಕೊಂಡು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಜಪೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ (ಜ.04): ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಂಗಳೂರಿನ ಬಜಪೆ ಪೊಲೀಸ್ ಠಾಣೆಯಲ್ಲಿ 'ಸುಮೋಟೊ' ಪ್ರಕರಣ ದಾಖಲಾಗಿದೆ. 'muslim__leader' ಎಂಬ ಇನ್‌ಸ್ಟಾಗ್ರಾಮ್ ಪುಟದ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಘಟನೆಯ ಹಿನ್ನೆಲೆ

ಕೆಲ ದಿನಗಳ ಹಿಂದೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ಸತ್ತಾರ್ ಎಂಬಾತನ ಮೇಲೆ ಸುಮೀತ್ ಮತ್ತು ರಜತ್ ನಾಯಕ್ ಎಂಬುವವರು ಹಲ್ಲೆ ನಡೆಸಿದ್ದರು. ಈ ಸಂಬಂಧ 'ನೈತಿಕ ಪೊಲೀಸ್ ಗಿರಿ' ನಡೆಸಿದ ಆರೋಪದಡಿ ಬಜಪೆ ಪೊಲೀಸರು ಸುಮೀತ್ ಮತ್ತು ರಜತ್‌ನನ್ನು ಬಂಧಿಸಿದ್ದರು. ಆದರೆ, ಈ ಘಟನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವ ಕೆಲಸ ನಡೆಯುತ್ತಿದೆ.

ಏನಿದು ಬೆದರಿಕೆ ಸಂದೇಶ?

'muslim__leader' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ನಾರ್ಲಪದವಿನ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಪ್ರದೀಪ್, ರಜಿತ್, ಸಂತೋಷ್ ಹಾಗೂ ಜನಾರ್ಧನ ಎಂಬುವವರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. 'ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲವಾಯಿತೆ? ಸಂಘಪರಿವಾರದ ಭಯೋತ್ಪಾದಕರ ದಾಳಿ ಹೆಚ್ಚುತ್ತಿದೆ, ಅವರಿಗೆ ಕಾನೂನಿನ ಭಯವಿಲ್ಲ' ಎಂದು ಪ್ರಚೋದನಾಕಾರಿ ಬರಹಗಳನ್ನು ಪೋಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, 'ಇವರಿಗೆ ಸದ್ಯದಲ್ಲಿ ಸುಹಾಸ್ ಶೆಟ್ಟಿ ಟ್ರೀಟ್ ಮೆಂಟ್ ಕೊಡಬೇಕು' ಎಂಬ ಗಂಭೀರ ಕೊಲೆ ಬೆದರಿಕೆಯನ್ನು ಹಾಕಲಾಗಿದೆ.

ಪೊಲೀಸರ ಕ್ರಮ

ಸಮಾಜದಲ್ಲಿ ಶಾಂತಿ ಕದಡುವ ಮತ್ತು ನಿರ್ದಿಷ್ಟ ವ್ಯಕ್ತಿಗಳಿಗೆ ಜೀವ ಬೆದರಿಕೆ ಒಡ್ಡಿರುವ ಈ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಬಜಪೆ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 351(2), 351(3), 352, 353(2) ಹಾಗೂ 192 ರ ಅಡಿಯಲ್ಲಿ ಸ್ವಯಂ ಪ್ರೇರಿತ (Suo Moto) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಇನ್‌ಸ್ಟಾಗ್ರಾಮ್ ಪೇಜ್ ನಿರ್ವಹಿಸುತ್ತಿರುವವರು ಯಾರು ಎಂಬ ಬಗ್ಗೆ ಸೈಬರ್ ಕ್ರೈಂ ಪೊಲೀಸರ ನೆರವಿನೊಂದಿಗೆ ತನಿಖೆ ತೀವ್ರಗೊಂಡಿದೆ.