- Home
- Karnataka Districts
- ನಿಧಿಗಾಗಿ 8 ತಿಂಗಳ ಮಗು ಬಲಿ ಕೊಡಲು ಯತ್ನ ಆರೋಪ: ಇಮ್ರಾನ್ ಕುಟುಂಬದಿಂದ ದತ್ತು ಪಡೆದ ಕಂದಮ್ಮನ ರಕ್ಷಣೆ!
ನಿಧಿಗಾಗಿ 8 ತಿಂಗಳ ಮಗು ಬಲಿ ಕೊಡಲು ಯತ್ನ ಆರೋಪ: ಇಮ್ರಾನ್ ಕುಟುಂಬದಿಂದ ದತ್ತು ಪಡೆದ ಕಂದಮ್ಮನ ರಕ್ಷಣೆ!
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ, ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಯತ್ನಿಸಿದ ಘಟನೆ ವರದಿಯಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ (ಜ.04): ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಮುಂದಾಗಿದ್ದ ಎನ್ನಲಾದ ಭೀಕರ ಘಟನೆಯೊಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಬೆಳಕಿಗೆ ಬಂದಿದೆ. ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೂಲಿಬೆಲೆಯ ಜನತಾ ಕಾಲೋನಿಯ ನಿವಾಸಿ ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ಈ ಭೀಕರ ಕೃತ್ಯಕ್ಕೆ ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಸೈಯದ್ ಇಮ್ರಾನ್ ದಂಪತಿ ಕೋಲಾರ ಮೂಲದ ದಂಪತಿಯಿಂದ ಒಂದು ಲಕ್ಷ ರೂಪಾಯಿ ನೀಡಿ ಈ ಗಂಡು ಮಗುವನ್ನು ದತ್ತು ಪಡೆದಿದ್ದರು.
'ನಮಗೆ ಗಂಡು ಮಕ್ಕಳಿಲ್ಲ, ಮಗುವನ್ನು ಸ್ವಂತ ಮಗನಂತೆ ಸಾಕಿ ಸಲಹುತ್ತೇವೆ' ಎಂದು ನಂಬಿಸಿ, ಕಾನೂನುಬಾಹಿರವಾಗಿ ಹಣದ ವ್ಯವಹಾರ ನಡೆಸಿ ಮಗುವನ್ನು ಮನೆಗೆ ತಂದಿದ್ದರು. ಹಣ ನೀಡುವ ದೃಶ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಹುಣ್ಣಿಮೆಯ ವಿಶೇಷ ದಿನವಾಗಿದ್ದರಿಂದ, ನಿಧಿಯ ಆಸೆಗಾಗಿ ಮಗುವನ್ನು ಬಲಿ ಕೊಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮಕ್ಕಳ ಸಹಾಯವಾಣಿಗೆ (1098) ತಲುಪಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸರ ತಂಡ ಇಮ್ರಾನ್ ಮನೆಗೆ ಲಗ್ಗೆ ಇಟ್ಟಿತು.
ಅಧಿಕಾರಿಗಳು ಮನೆ ಪರಿಶೀಲಿಸಿದಾಗ ಕೋಣೆಯೊಂದರಲ್ಲಿ ಆಳವಾದ ಗುಂಡಿ ತೆಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ. ನಿಧಿಗಾಗಿ ನಡೆಸುವ ಮಾಟ-ಮಂತ್ರದ ಮಾದರಿಯಲ್ಲೇ ಈ ಪೂಜೆ ಇತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆಯಲು ಮುಂದಾದಾಗ ಇಮ್ರಾನ್ ಕುಟುಂಬಸ್ಥರು ಭಾರಿ ಹೈಡ್ರಾಮಾ ಸೃಷ್ಟಿಸಿದರು. 'ಮನೆಯಲ್ಲಿ ಹಳೆಯ ಹುತ್ತವಿತ್ತು, ಅದನ್ನು ತೆಗೆಸಲು ಪೂಜೆ ಮಾಡಿದ್ದೇವೆ ಹೊರತು ಬಲಿ ಕೊಡಲು ಅಲ್ಲ. ನಮಗೆ ಆಗದವರು ಸುಳ್ಳು ದೂರು ನೀಡಿದ್ದಾರೆ' ಎಂದು ಕಣ್ಣೀರು ಹಾಕುತ್ತಾ ಅಧಿಕಾರಿಗಳನ್ನು ತಡೆಯಲು ಯತ್ನಿಸಿದರು.
'ನಮ್ಮ ತಂದೆಗೆ ಏನಾದರೂ ಆದರೆ ಪೊಲೀಸರೇ ಹೊಣೆ' ಎಂದು ಬೆದರಿಕೆ ಹಾಕುವ ಮೂಲಕ ಭಾವನಾತ್ಮಕವಾಗಿ ದಾರಿ ತಪ್ಪಿಸಲು ಯತ್ನಿಸಿದರು.
ಆದರೆ, ಮನೆಯೊಳಗೆ ಅನುಮಾನಾಸ್ಪದವಾಗಿ ಗುಂಡಿ ತೆಗೆದಿರುವುದು ಮತ್ತು ದತ್ತು ಪ್ರಕ್ರಿಯೆಯಲ್ಲಿನ ಕಾನೂನು ಬಾಹಿರ ಅಂಶಗಳನ್ನು ಗಮನಿಸಿದ ಅಧಿಕಾರಿಗಳು, 8 ತಿಂಗಳ ಮಗುವನ್ನು ವಶಕ್ಕೆ ಪಡೆದು ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯು ಈ 'ಬಲಿ ಪೂಜೆ'ಯ ಆರೋಪದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.
ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಮಾರಾಟ ಮಾಡಿದವರು ಮತ್ತು ಬಲಿ ಕೊಡಲು ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

