ಮಂಗಳೂರು(ಮೇ.21): ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯ 3ನೇ ಏರ್‌ ಇಂಡಿಯಾ ವಿಮಾನ ಬುಧವಾರ ಮಸ್ಕತ್‌ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.10ಕ್ಕೆ ಬಂದಿಳಿಯಿತು. ಮಸ್ಕತ್‌ನಿಂದ ಸಂಜೆ 3 ಗಂಟೆ ಸುಮಾರಿಗೆ ಹೊರಟ ಈ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ 817 ವಿಮಾನ, ಸಂಜೆ 6.30ಕ್ಕೆ ಬೆಂಗಳೂರು ತಲುಪಿತು. ಅಲ್ಲಿಂದ ರಾತ್ರಿ 7.15ಕ್ಕೆ ಹೊರಟು 63 ಪ್ರಯಾಣಿಕರೊಂದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು.

ವಿಮಾನದ ಕ್ಯಾಪ್ಟನ್‌ ಆಗಿದ್ದ ಮಂಗಳೂರಿನವರೇ ಆದ ಮೈಕಲ್‌ ಸಲ್ದಾನಾ ಅವರು 35 ಸಾವಿರ ಅಡಿ ಎತ್ತರದಲ್ಲಿ ಕಾಕ್‌ಪಿಟ್‌ನಲ್ಲೇ ಮಾತನಾಡಿ, ಮಸ್ಕತ್‌ನಿಂದ ಕರ್ನಾಟಕಕ್ಕೆ ಇದು ಪ್ರಥಮ ವಿಮಾನವಾಗಿದ್ದು, ಕೊರೋನಾದ ತಂದಿಟ್ಟಿರುವ ಈ ಸಂದಿಗ್ಧ ಸಮಯದಲ್ಲಿ ಎಲ್ಲ ಕಡೆಗಳಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು. ಜತೆಗೆ, ಕಾರ್ಯಾಚರಣೆಯ ಔಚಿತ್ಯವನ್ನೂ ವಿವರಿಸಿದರು.

ಆಪರೇಷನ್‌ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್‌: ಭಾರತೀಯರ ಕರೆತಂದ ತುಳುನಾಡ ಕುವರ!

ಇದು 2ನೇ ಏರ್‌ಲಿಫ್ಟ್‌: ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಮಂಗಳೂರಿನ ಕುವರ ಮೈಕಲ್‌ ಸಲ್ದಾನಾ ಅವರು ಮೇ 6ರಂದು ದುಬೈನಿಂದ ಕೋಯಿಕ್ಕೋಡ್‌ಗೆ ಮೊದಲ ಬಾರಿಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಕ್ಯಾಪ್ಟನ್‌ ಆಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಮಸ್ಕತ್‌ನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ಆಗಮಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಕ್ಯಾಪ್ಟನ್‌ ಆಗಿ 2ನೇ ಬಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯಶಸ್ಸು ಪಡೆದಿದ್ದಾರೆ.