ಆಪರೇಷನ್ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್: ಭಾರತೀಯರ ಕರೆತಂದ ತುಳುನಾಡ ಕುವರ!
ಆಪರೇಷನ್ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್!| ದುಬೈನಿಂದ ಕಲ್ಲಿಕೋಟೆಗೆ ಭಾರತೀಯರನ್ನು ಕರೆತಂದ ಮಂಗಳೂರಿನ ಕ್ಯಾಪ್ಟನ್ ಸಲ್ದಾನಾ| ದುಬೈನಲ್ಲಿ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು| ಇಲ್ಲಿಗೆ ಬಂದಾಗ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು
ಸಂದೀಪ್ ವಾಗ್ಲೆ
ಮಂಗಳೂರು(ಮೇ.09): ‘ಕೊರೋನಾದಿಂದಾಗಿ ಸಾಕಷ್ಟುಭಾರತೀಯರು ವಿದೇಶಗಳಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದರು. ಅವರೆಲ್ಲರು ತಾಯ್ನಾಡಿಗೆ ಮರಳಬೇಕೆಂಬುದು ನನ್ನ ಆಕಾಂಕ್ಷೆಯಾಗಿತ್ತು. ಅದಕ್ಕಾಗಿಯೇ ಏರ್‌ಲಿಫ್ಟ್ ಮಾಡಲು ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡೆ. 177 ಮಂದಿಯನ್ನು ಸುರಕ್ಷಿತವಾಗಿ ಕರೆತಂದು ಕೇರಳದ ಕಲ್ಲಿಕೋಟೆಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವವರೆಗಿನ ಇಡೀ ಪ್ರಕ್ರಿಯೆ ಮುಗಿಸುವ ಹೊತ್ತಿಗೆ ನಾನು ದೇಶಭಕ್ತಿಯಿಂದ ಭಾವಪರವಶನಾಗಿದ್ದೆ. ಮುಂದೆಯೂ ಈ ರೀತಿಯ ಕಾರ್ಯಾಚರಣೆಗೆ ಸಿದ್ಧನೂ, ಉತ್ಸುಕನೂ ಆಗಿದ್ದೇನೆ’
ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಮರಳಿ ಕರೆತರುವ ‘ವಂದೇ ಭಾರತ್ ಮಿಷನ್’ ಬೃಹತ್ ಏರ್ ಲಿಫ್ಟ್‌ನ ಮೊದಲ ದಿನದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್- ಫ್ಲೈಟ್ ಕಮಾಂಡರ್ ಮಂಗಳೂರಿನ ಮೈಕೆಲ್ ಸಲ್ದಾನಾರ ಮನದಾಳದ ಮಾತುಗಳಿವು. 177 ಪ್ರಯಾಣಿಕರನ್ನೊಳಗೊಂಡ ಏರ್ ಇಂಡಿಯಾದ 2ನೇ ವಿಮಾನ ಗುರುವಾರ ಸಂಜೆ 5.30ಕ್ಕೆ ದುಬೈನಿಂದ ಹೊರಟು ರಾತ್ರಿ 10.30ರ ವೇಳೆಗೆ ಕಲ್ಲಿಕೋಟೆಯಲ್ಲಿ ಬಂದಿಳಿದಿತ್ತು. ಇದರ ಕ್ಯಾಪ್ಟನ್ ಆಗ್ದಿದವರು ಹೆಮ್ಮೆಯ ಕನ್ನಡಿಗ ಸಲ್ದಾನಾ.
ಐತಿಹಾಸಿಕ ಏರ್‌ಲಿಫ್ಟ್ ಆರಂಭ; ಕೇರಳಕ್ಕೆ ಬಂದಿಳಿದ 2 ವಿಮಾನಗಳು
ದುಬೈನಲ್ಲಿ ತ್ರಿವರ್ಣ ರಂಗು: ಮೇ 6ರಂದು ಮಧ್ಯಾಹ್ನ ಮಂಗಳೂರಿನಿಂದ ಕಲ್ಲಿಕೋಟೆಗೆ ತೆರಳಿದ್ದೆ. ಅಲ್ಲಿಯ ವಿಮಾನ ನಿಲ್ದಾಣದಿಂದ ಸ್ಯಾನಿಟೈಸ್ ಮಾಡಲಾಗಿದ್ದ ಖಾಲಿ ವಿಮಾನದೊಂದಿಗೆ ದುಬೈಗೆ ಹೋಗಿದ್ದೆ. ಅಲ್ಲಿಳಿದು ನೋಡುವಾಗ ಎಲ್ಲೆಡೆಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಭಾರತಕ್ಕೆ ಮರಳಲು ಜನ ಅತೀವ ಕಾತರರಾಗಿದ್ದರು. 177 ಪ್ರಯಾಣಿಕರಲ್ಲಿ 5 ಪುಟ್ಟಮಕ್ಕಳು, 8 ಗರ್ಭಿಣಿಯರು, 9 ಮಂದಿ ವೀಲ್‌ಚೇರ್ ಪ್ರಯಾಣಿಕರೂ ಇದ್ದರು. ಅವರನ್ನು ಮರಳಿ ದೇಶದ ನೆಲದಲ್ಲಿ ಇಳಿಸುವಾಗ ನನಗಾದ ಖುಷಿ ಪದಗಳಿಗೆ ನಿಲುಕುವುದಿಲ್ಲ. ನನ್ನ ಸೇವೆ ಸಾರ್ಥಕವಾದಂತ ಅನುಭವ ಎಂದು ಸ್ಮರಿಸಿಕೊಂಡರು ಮೈಕೆಲ್.
ಪಿಪಿಇ ಪ್ರೊಟೆಕ್ಷನ್:
ರ್‌ಲಿಫ್ಟ್ ಮಾಡಲು ಒತ್ತಾಯ ಇರಲಿಲ್ಲ. ಈ ಕೆಲಸ ಬಹಳ ರಿಸ್ಕ್‌ನದ್ದಾಗಿರುವುದರಿಂದ, ಹೆಚ್ಚಿನವರಿಗೆ ಆತಂಕವಿತ್ತು. ಇಂಥ ಸಂದರ್ಭದಲ್ಲಿ ನಾನು ದೇಶದ ಜನರಿಗಾಗಿ ಈ ಕೆಲಸ ಮಾಡಬೇಕೆಂದೆನಿಸಿತು. ಹಾಗಾಗಿ ಸ್ವಪ್ರೇರಣೆಯಿಂದಲೇ ಈ ಕಾರ್ಯ ಒಪ್ಪಿಕೊಂಡೆ. ನನ್ನ ಕೋ ಪೈಲೆಟ್, ವಿಮಾನ ಸಿಬ್ಬಂದಿಗೆ ತಜ್ಞ ವೈದ್ಯರು ಪರಿಸ್ಥಿತಿ ಹೇಗೆ ನಿಭಾಯಿಸಬೇಕೆನ್ನುವ ತರಬೇತಿ ನೀಡಿದ್ದರು. ನಾನೂ ಸೇರಿ ಎಲ್ಲ ಸಿಬ್ಬಂದಿಯೂ ಪಿಪಿಇ ಧರಿಸಿಕೊಂಡಿದ್ದೆವು. ವಿಮಾನ ಸೇಫಾಗಿ ಲ್ಯಾಂಡ್ ಆಗಿ ತಾಯ್ನೆಲಕ್ಕೆ ಆಗಮಿಸಿದ ಬಳಿಕ ಪ್ರತಿಯೊಬ್ಬ ಪ್ರಯಾಣಿಕರೂ ನನ್ನನ್ನು ಅಭಿನಂದಿಸಿ ಕೃತಜ್ಞತೆ ಅರ್ಪಿಸಿದ್ದು ಮರೆಯಲಾಗದ ಕ್ಷಣ ಎಂದರು.
ಐತಿಹಾಸಿಕ ಏರ್‌ಲಿಫ್ಟ್ ಆರಂಭ; ಕೇರಳಕ್ಕೆ ಬಂದಿಳಿದ 2 ವಿಮಾನಗಳು
ಮತ್ತೆ ಹೋಗಲು ಟೆಸ್ಟ್ ಆಗಬೇಕು: ಏರ್‌ಲಿಫ್ಟ್‌ಗೆ ಹೋಗುವ ಮೊದಲು ನಾವು ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕಿತ್ತು. ಕಲ್ಲಿಕೋಟೆಯಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಮತ್ತೊಮ್ಮೆ ಸ್ಯಾಂಪಲ್ ನೀಡಿದ್ದೇನೆ. ರಿಪೋರ್ಟ್ ನೆಗೆಟಿವ್ ಬಂದರೆ ಮಂಗಳೂರಿಗೆ ಶನಿವಾರವೇ ಹಿಂತಿರುಗುತ್ತೇನೆ. ಮತ್ತೊಮ್ಮೆ ಏರ್‌ಲಿಫ್ಟ್ ಮಾಡಬೇಕಾದರೆ 5 ದಿನ ಬಳಿಕ ಮತ್ತೊಮ್ಮೆ ಪರೀಕ್ಷೆಗೊಳಪಡಬೇಕು. ನಾನಂತು ಮತ್ತೊಂದು ಏರ್‌ಲಿಫ್ಟ್‌ಗೆ ಸದಾ ಸಿದ್ಧ. ಹಿಂಜರಿಕೆ ಮಾತೇ ಇಲ್ಲ ಎಂದು ‘ಕನ್ನಡಪ್ರಭ’ದೊಂದಿಗೆ ದೃಢ ವಿಶ್ವಾಸದಿಂದ ನುಡಿದರು ಮೈಕೆಲ್ ಸಲ್ದಾನಾ.
ಮೈಕೆಲ್ ತುಂಬ ಧೈರ್ಯವಂತ. ಸದಾ ಧನಾತ್ಮಕ ಮನೋಭಾವವನ್ನೇ ಹೊಂದಿರುವವನು. ಆತನ ಕೆಲಸದಿಂದ ನನಗೆ ಅತೀವ ಹೆಮ್ಮೆಯೆನಿಸುತ್ತಿದೆ. ಇದು ದೇಶದ ಜನರಿಗಾಗಿ ಮಾಡಿದ ಅಪರೂಪದ ಸೇವೆ ಮತ್ತು ಅನುಭವ.
- ಫ್ರೀಡಾ ಸಲ್ದಾನಾ, ಮೈಕೆಲ್ ತಾಯಿ
ಮೊದಲ ರಾರಯಂಕ್ ವಿದ್ಯಾರ್ಥಿ
ಮೈಕೆಲ್ ಸಲ್ದಾನಾ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮೊದಲ ರಾರಯಂಕ್ ಪಡೆದ ಪ್ರತಿಭಾನ್ವಿತರು. ಎಂಜಿನಿಯರಿಂಗ್ ಮುಗಿದ ಬಳಿಕ ಏರ್ ಇಂಡಿಯಾ ಸೇವೆಗೆ ಸೇರಿದ್ದರು. ತುಂಬ ಕ್ಲಿಷ್ಟಕರವಾದ ಮಂಗಳೂರಿನಂಥ ಟೇಬಲ್‌ಟಾಪ್ ಏರ್‌ಪೋರ್ಟ್‌ಗಳಲ್ಲಿ ವಿಮಾನ ನಿಭಾಯಿಸುವ ಚಾಣಾಕ್ಷತೆ ಇವರದ್ದು. ಪ್ರಸ್ತುತ ಮಂಗಳೂರಿನಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡುವ ಬೇಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅಧೀನದಲ್ಲಿ 30 ಪೈಲಟ್‌ಗಳಿದ್ದಾರೆ. ಇವರ ಅಜ್ಜ ಕರ್ನಲ್ ಜೆ.ಡಬ್ಲ್ಯೂ ಸೊರೆಸ್ ಅವರು ದ್ವಿತೀಯ ವಿಶ್ವ ಯುದ್ಧದಲ್ಲಿ ಹೋರಾಟ ಮಾಡಿದವರು. 1962ರ ಚೀನಾ ಯುದ್ಧದಲ್ಲೂ ಪಾಲ್ಗೊಂಡಿದ್ದರು. ಈ ಕುಟುಂಬದ ಹೆಮ್ಮೆಯ ಕುಡಿ ಮೈಕೆಲ್ ಸಲ್ದಾನಾ.
ತವರಿಗೆ ಬರಲು 58000 ಕನ್ನಡಿಗರು ರೆಡಿ, ಕ್ವಾರಂಟೈನ್ ಮಾಡುವುದೇ ಸವಾಲು!
ಮತ್ತೆ ದೇಶಸೇವೆ ಮಾಡಲು ಸಿದ್ಧ
ವಿದೇಶದಲ್ಲಿದ್ದ ನನ್ನ ದೇಶದ ಜನರನ್ನು ವಾಪಸ್ ಕರೆತಂದಾಗ ಅತೀವ ಖುಷಿಯಾಗಿತ್ತು. ಇದು ದೇಶಪ್ರೇಮದ ಕೆಲಸ. ಇನ್ನು ಮುಂದೆಯೂ ನಾನು ಈ ಸೇವೆಗೆ ಸದಾ ಸಿದ್ಧನಾಗಿದ್ದೇನೆ.
- ಮೈಕೆಲ್ ಸಲ್ದಾನಾ, ಫ್ಲೈಟ್ ಕಮಾಂಡರ್
ಅವರ ಕೃತಜ್ಞತೆಯಿಂದ ಸೇವೆ ಸಾರ್ಥಕವಾಯಿತು
- ಏರ್‌ಲಿಫ್ಟ್‌ಗೆ ಒತ್ತಾಯ ಇರಲಿಲ್ಲ. ಆದರೆ, ದೇಶದ ಜನರಿಗಾಗಿ ಕೆಲಸ ಮಾಡಲು ನನಗೆ ಪ್ರೇರಣೆ ಆಯಿತು
- ಈ ಕೆಲಸ ಭಾರೀ ರಿಸ್ಕ್‌ನಿಂದ ಕೂಡಿದ್ದ ಕಾರಣ ವಿಮಾನದ ಎಲ್ಲ ಸಿಬ್ಬಂದಿ ಪಿಪಿಇ ಕಿಟ್ ಧರಿಸಿಯೇ ಇದ್ದೆವು
- ಮೇ 6ಕ್ಕೆ ಕಲ್ಲಿಕೋಟೆಯಿಂದ ದುಬೈಗೆ ತೆರಳಿದ್ದೆ. ಅಲ್ಲಿಳಿದಾಗ ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿತ್ತು
- 5 ಮಕ್ಕಳು, 8 ಗರ್ಭಿಣಿಯರು, 9 ವ್ಹೀಲ್‌ಚೇರ್ ಪ್ರಯಾಣಿಕರು ಸೇರಿ 177 ಜನರು ಕಾತರದಿಂದಿದ್ದರು
- ಅವರನ್ನು ತವರಿಗೆ ಕರೆತಂದಾಗ ಪ್ರತಿಯೊಬ್ಬರು ಕೃತಜ್ಞತೆ ಸಲ್ಲಿಸಿದರು. ನನ್ನ ಸೇವೆ ಸಾರ್ಥಕವಾದ ಭಾವ
- ‘ವಂದೇ ಭಾರತ್ ಮಿಷನ್’ನಡಿ ಏರ್‌ಲಿಫ್ಟ್ ಮಾಡಿದ 2ನೇ ವಿಮಾನದ ಪೈಲಟ್ ಆಗಿದ್ದ ಸಲ್ದಾನಾ ನುಡಿ