ಮಂಡ್ಯದ ಆಲಕೆರೆ ಗ್ರಾಮದಲ್ಲಿ ಯುವ ರೈತರ ನೇತೃತ್ವದಲ್ಲಿ ದೇಶದ ಮೊದಲ ರೈತ ಶಾಲೆ ಆರಂಭವಾಗಿದೆ. ಈ ಶಾಲೆಯು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಫಸಲು ಸಂರಕ್ಷಣೆ, ಹವಾಮಾನಕ್ಕೆ ತಕ್ಕ ಬೀಜ ಬಳಕೆ ಮುಂತಾದವುಗಳ ಬಗ್ಗೆ ತರಬೇತಿ ನೀಡಲಿದೆ.

ಮಂಡ್ಯ (ಜೂ.16): ಕೃಷಿ ವಿಶ್ವವಿದ್ಯಾಲಯ ಆರಂಭಕ್ಕೂ ಮುನ್ನವೇ ಮಂಡ್ಯ ಜಿಲ್ಲೆಯ ಯುವ ರೈತರು ದೇಶದ ಮೊದಲ ರೈತ ಶಾಲೆಯನ್ನು ಆರಂಭಿಸಿ ಸಂಚಲನ ಸೃಷ್ಟಿಸಿದ್ದಾರೆ. ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಒಡನಾಟದಲ್ಲಿ, ಯುವ ರೈತ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಈ ಅಪೂರ್ವ ರೈತ ಶಾಲೆ ಉದ್ಘಾಟನೆಗೊಂಡಿದೆ.

ಈ ಶಾಲೆಯು ರೈತರಿಗೆ ಕೃಷಿ ಶಿಕ್ಷಣ, ಆರ್ಥಿಕ ಸ್ವಾವಲಂಬನೆ, ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ, ಹವಾಮಾನಕ್ಕೆ ತಕ್ಕ ಬೀಜ ಬಳಕೆ, ಫಸಲು ಸಂರಕ್ಷಣೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಿದೆ.

ಈ ಕಾರ್ಯಕ್ರಮವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನವನ್ನು ತಿಳಿಯಲು ಮತ್ತು ಆರ್ಥಿಕವಾಗಿ ಸದೃಢರಾಗಲು ದಾರಿ ಮಾಡಿಕೊಡಲಿದೆ. ರೈತ ಶಾಲೆಯ ಉದ್ಘಾಟನೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಕೆಂಗೇರಿಯ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಜಂಟಿಯಾಗಿ ನೆರವೇರಿಸಿದರು. ಈ ಐತಿಹಾಸಿಕ ಕಾರ್ಯಕ್ರಮವು ದೇಶದ ಕೃಷಿ ಕ್ಷೇತ್ರದಲ್ಲಿ ಹೊಸ ದಿಗಂತವನ್ನು ತೆರೆಯಲಿದೆ ರೈತ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನ್ನದಾತರಿಗೆ ಜ್ಞಾನದ ದೀಪವನ್ನು ಹೊತ್ತಿಸುವ ಈ ರೈತ ಶಾಲೆಯು ಮಂಡ್ಯದಿಂದ ದೇಶಕ್ಕೆ ಮಾದರಿಯಾಗಲಿದೆ. ಈ ಕ್ರಾಂತಿಕಾರಿ ಹೆಜ್ಜೆ ಕೃಷಿಕರ ಭವಿಷ್ಯವನ್ನು ಬೆಳಗಲಿದೆ ಎಂಬ ನಂಬಿಕೆಯನ್ನು ಎಲ್ಲರೂ ವ್ಯಕ್ತಪಡಿಸಿದ್ದಾರೆ.