ಎಂಟು ತಿಂಗಳ ಗರ್ಭಿಣಿಯೊಬ್ಬಳ ವೈದ್ಯಕೀಯ ತಪಾಸಣೆ ವೇಳೆ ಬಾಲ್ಯ ವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಕನಕಪುರದ ಬಾಲಕಿ ಕೋಣನಹಳ್ಳಿ ತಿಟ್ಟಿನ ವ್ಯಕ್ತಿಯನ್ನು ಮದುವೆಯಾಗಿದ್ದಳು. ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಅನುಮಾನ ಬಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಂಡ್ಯ : ಎಂಟು ತಿಂಗಳ ಗರ್ಭಿಣಿಯೊಬ್ಬಳು ವೈದ್ಯಕೀಯ ತಪಾಸಣೆಗೆ ಹಾಜರಾದ ಸಮಯದಲ್ಲಿ ಆಕೆ ಬಾಲ್ಯ ವಿವಾಹವಾಗಿರುವ ಸಂಗತಿ ನಗರದಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಕನಕಪುರ ತಾಲೂಕಿನ ಬಾಲಕಿಯೊಬ್ಬಳು ನಗರದ ಹೊರವಲಯದಲ್ಲಿರುವ ಕೋಣನಹಳ್ಳಿ ತಿಟ್ಟು (ಎಂ.ಜಿ. ಬಡಾವಣೆ) ನಿವಾಸಿ ವ್ಯಕ್ತಿಯನ್ನು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು.
ಎಂಟು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದ ವೇಳೆ ವೈದ್ಯರಿಗೆ ಅನುಮಾನ ಬಂದು ತಾಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬಾಲಕಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಆಕೆ ಇನ್ನೂ ಪ್ರಾಪ್ತ ವಯಸ್ಸಿಗೆ ಬಾರದಿರುವುದು ಕಂಡುಬಂದಿತು. ಆ ಹಿನ್ನೆಲೆಯಲ್ಲಿ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕನಕಪುರ ತಾಲೂಕಿನ ಬಾಲಕಿಗೆ ತಂದೆ-ತಾಯಿ ಇಲ್ಲದ ಕಾರಣ ಚಿಕ್ಕಪ್ಪ-ಚಿಕ್ಕಮ್ಮನ ಆಶ್ರಯದಲ್ಲಿದ್ದಳು. ಕೋಣನಹಳ್ಳಿ ತಿಟ್ಟು ನಿವಾಸಿ ವ್ಯಕ್ತಿ ವ್ಯಾಪಾರಕ್ಕೆಂದು ಕನಕಪುರಕ್ಕೆ ತೆರಳಿದ್ದ ಸಮಯದಲ್ಲಿ ಬಾಲಕಿಯ ಪರಿಚಯವಾಗಿದೆ. ನಂತರದಲ್ಲಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಒಂದು ವರ್ಷ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ತಿಳಿದು ಎರಡೂ ಕುಟುಂಬದವರು ಒಪ್ಪಿ ಕನಕಪುರ ತಾಲೂಕಿನ ಸಮೀಪದ ಶ್ರೀಆಂಜನೇಯಸ್ವಾಮಿ ದೇಗುಲದಲ್ಲಿ ಮದುವೆಯಾಗಿದ್ದರು. ನಂತರ ಕೋಣನಹಳ್ಳಿ ತಿಟ್ಟಿಗೆ ಬಂದ ದಂಪತಿ ಸಂಸಾರ ನಡೆಸುತ್ತಿದ್ದರು.
ಇದೀಗ ಎಂಟು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿಯನ್ನು ಮಿಮ್ಸ್ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಾಗ ಆಕೆ ಪ್ರಾಪ್ತ ವಯಸ್ಕಳಾಗಿಲ್ಲದಿರುವ ಬಗ್ಗೆ ವೈದ್ಯರಿಗೆ ಅನುಮಾನ ಬಂದಿದೆ. ಕೂಡಲೇ ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಾ.ಜವರೇಗೌಡ ಅವರು ಬಾಲಕಿಯನ್ನು ವಿಚಾರಿಸಿದಾಗ ಆಕೆ ತಾಯಿ ಕಾರ್ಡ್ ಪಡೆದಿಲ್ಲದಿರುವುದು ಗೊತ್ತಾಯಿತು. ನಂತರ ಆಕೆಯ ಆದಾರ್ ಕಾರ್ಡ್ ಕೂಡ ಹಾಜರುಪಡಿಸಲಿಲ್ಲ. ತರುವಾಯ ಆಕೆಯ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿದಾಗ ಟಿ.ಸಿ.ಯಲ್ಲಿ ಆಕೆಯ ಹುಟ್ಟಿದ ವರ್ಷ 2009 ಎಂದು ನಮೂದಿಸಲಾಗಿತ್ತು. ಇದರಿಂದ ಆಕೆಗೆ 16 ವರ್ಷ ವಯಸ್ಸಿನವಳೆಂದು ತಿಳಿದುಬಂತು.
ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಅವರು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಗರ್ಭಿಣಿಯಾಗಿರುವ ಬಾಲಕಿಯನ್ನು ನೆಹರು ನಗರದಲ್ಲಿರುವ ಸಖಿ ಕೇಂದ್ರದಲ್ಲಿ ಆಶ್ರಯ ದೊರಕಿಸಿ ಪಾಲನೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಠಾಣೆ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಒಂದೇ ತಿಂಗಳು 28 ಬಾಲ್ಯವಿವಾಹ
2025-26ನೇ ಸಾಲಿನಲ್ಲಿ ಒಂದೇ ತಿಂಗಳು ಜಿಲ್ಲೆಯಲ್ಲಿ 28 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿರುವುದು ಅಚ್ಚರಿ ಮತ್ತು ಆತಂಕದ ಸಂಗತಿಯಾಗಿದೆ. ಕಳೆದ ವರ್ಷ 186 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವುದು ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಬಾಲ್ಯ ವಿವಾಹಗಳನ್ನು ತಡೆಯುವುದಕ್ಕೆ ಎಷ್ಟೇ ಕಠಿಣ ಕಾನೂನುಗಳನ್ನು ರೂಪಿಸಿದ್ದರೂ ಅವು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ. ದಾಖಲಾಗುತ್ತಿರುವ ಪ್ರಕರಣಗಳೆಲ್ಲಾ ಕೇವಲ ಎಫ್‌ಐಆರ್‌ಗೆ ಮಾತ್ರ ಸೀಮಿತವಾಗುತ್ತಿವೆ.
2025-26ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಮೇ 25ರವರೆಗೆ ಜಿಲ್ಲೆಯಲ್ಲಿ 28 ಪ್ರಕರಣಗಳು ದಾಖಲಾಗಿವೆ. ಮಂಡ್ಯದಲ್ಲಿ ದಾಖಲಾದ 5 ಪ್ರಕರಣಗಳಲ್ಲಿ, 4 ಬಾಲ್ಯ ವಿವಾಹ ತಡೆದಿದ್ದರೆ, 1 ಮದುವೆ ನಡೆದಿದೆ. ಮದ್ದೂರು ತಾಲೂಕಿನಲ್ಲಿ 4 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಮಳವಳ್ಳಿ ತಾಲೂಕಿನಲ್ಲಿ 1 ಬಾಲ್ಯ ವಿವಾಹ ನಡೆದಿದ್ದು, ಮತ್ತೊಂದನ್ನು ತಡೆಯಲಾಗಿದೆ. ಶ್ರೀರಂಗಪಟ್ಟಣದಲ್ಲೂ 1 ಬಾಲ್ಯ ವಿವಾಹವನ್ನು ತಡೆದು ಇನ್ನೊಂದು ಬಾಲ್ಯವಿವಾಹಕ್ಕೆ ತಡೆಯೊಡ್ಡಲಾಗಿದೆ. ಪಾಂಡವಪಪುರ ತಾಲೂಕಿನಲ್ಲಿ 6 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 7 ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಳೆದೊಂದು ತಿಂಗಳಲ್ಲಿ 28 ಬಾಲ್ಯ ವಿವಾಹ ಪ್ರಕರಣಗಳಲ್ಲಿ 25 ಬಾಲ್ಯವಿವಾಹಗಳನ್ನು ತಡೆದಿದ್ದು, 3 ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಕಂಡುಬರುತ್ತಿರುವ ಬಾಲ್ಯವಿವಾಹ ಪ್ರಕರಣಗಳು ಇಷ್ಟೊಂದು ಸಂಖ್ಯೆಯಲ್ಲಿದ್ದರೆ ಇನ್ನು ಬೆಳಕಿಗೆ ಬಾರದ ರೀತಿಯಲ್ಲಿ ಇನ್ನೆಷ್ಟು ಪ್ರಕರಣಗಳು ನಡೆಯುತ್ತಿವೆ ಎಂಬುದು ಲೆಕ್ಕಕ್ಕೇ ಸಿಗದಂತಾಗಿದೆ.