Asianet Suvarna News Asianet Suvarna News

ನಾನು ಸುಮ್ಮನೆ ಕೂರಲ್ಲ, ಏನು ಮಾಡ್ತೀನೋ ನೋಡುತ್ತಿರಿ: ಸುಮಲತಾ ಚಾಲೆಂಜ್!

* ಅಕ್ರಮ ಗಣಿ ವಿರುದ್ಧ ಹೋರಾಟ ಕಾದು ನೋಡಿ!

* ಬೇನಾಮಿಯಾಗಿ ಅಕ್ರಮ ಗಣಿಗಾರಿಕೆ ಆಗುತ್ತಿದೆ

* ಸಿಬಿಐ ತನಿಖೆ ನಡೆದು ಅವರ ಹೆಸರೆಲ್ಲ ಹೊರಬರಬೇಕು

* ನಾನು ಇನ್ನು ಸುಮ್ಮನೆ ಕೂರಲ್ಲ, ಏನು ಮಾಡ್ತೀನೋ ನೋಡುತ್ತಿರಿ: ಮಂಡ್ಯ ಸಂಸದೆ ಸುಮಲತಾ ಚಾಲೆಂಜ್‌

Mandya MP Sumalatha Vows To Fight Against Illegal Mining pod
Author
Bangalore, First Published Jul 9, 2021, 8:00 AM IST

ಬೆಂಗಳೂರು(ಜು.09): ‘ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನಾನು ಸುಮ್ಮನೆ ಕೂಡುವುದಿಲ್ಲ. ನೋಡುತ್ತಿರಿ. ಏನು ಮಾಡುತ್ತೇನೋ ಕಾದು ನೋಡಿ’ ಎಂದು ಗುಡುಗು ಹಾಕಿರುವ ಸಂಸದೆ ಸುಮಲತಾ ಅಂಬರೀಶ್‌, ‘ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಬೇನಾಮಿ ಹೆಸರಿನಲ್ಲಿ ಯಾರಾರ‍ಯರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೋ ಅವರ ಹೆಸರುಗಳೆಲ್ಲಾ ಹೊರಗೆ ಬರಬೇಕು. ಅದು ಸ್ಥಳೀಯ ಪೊಲೀಸ್‌, ರಾಜ್ಯದ ಸಿಐಡಿ ತನಿಖೆಯಿಂದ ಸಾಧ್ಯವೇ ಇಲ್ಲ’ ಎಂದೂ ಅವರು ತೀಕ್ಷ$್ಣವಾಗಿ ಹೇಳಿದ್ದಾರೆ.

ಲೂಟಿ ನಿಲ್ಲಬೇಕು:

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದಿನಕ್ಕೆ 500 ಲಾರಿಗಳಲ್ಲಿ ಗಣಿ ಸಾಮಗ್ರಿಗಳು ರವಾನೆಯಾಗುತ್ತಿದೆ. ಲೈಸೆನ್ಸ್‌ ಇಲ್ಲದೆ, ರಾಜಧನ ಪಾವತಿಸದೆ ಅಕ್ರಮವಾಗಿ ಗಣಿ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇದು ನಿಲ್ಲಬೇಕಿದೆ. ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಮೆಗ್ಗರ್‌ ಬ್ಲಾಸ್ಟ್‌ಗಳಿಂದ ಮನೆಗಳು ಬಿರುಕು ಬಿಡುತ್ತಿವೆ. ಕುಳಿಗಳಿಗೆ ರಾಸಾಯನಿಕ ಪುಡಿ ತುಂಬುತ್ತಿರುವುದರಿಂದ ಸ್ಫೋಟ ಸಂಭವಿಸಿದ ವೇಳೆ ಅದು ಗಾಳಿಯಲ್ಲಿ ಸೇರಿ ಸುತ್ತಮುತ್ತಲಿನ ಜನರು ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಸ್ಫೋಟದ ಶಬ್ದಕ್ಕೆ ವಯಸ್ಸಾದವರಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ. ಇವೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದರು.

ಗಣಿಗಾರಿಕೆ ನಡೆಸುವವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೋ ಅಥವಾ ನೀವೇ ಅಕ್ರಮ ಗಣಿಗಾರಿಕೆ ನಡೆಸುವವರೊಂದಿಗೆ ಶಾಮೀಲಾಗಿದ್ದೀರೋ ಎಂಬ ಶಂಕೆ ಮೂಡಿದೆ. ಈಗಲಾದರೂ ಎಚ್ಚೆತ್ತು ಅಕ್ರಮ ಗಣಿ ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕು ಎಂದು ತಿಳಿಸಿದರು.

ಮಣ್ಣು ಪಾಲಾಗುತ್ತೀರಿ:

‘ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿ ಅದನ್ನು ಎದುರಿಸುವ ಧೈರ್ಯ ನನಗೆ ಇದೆ. ಅಂಬರೀಶ್‌ ಅವರ ಬಗ್ಗೆ ಒಂದು ಮಾತನಾಡಿದರೂ ಭಸ್ಮ ಅಲ್ಲ, ಮಣ್ಣು ಪಾಲಾಗುತ್ತೀರ. ಹೊಲಸು ರಾಜಕಾರಣ ಮಾಡುವವರ ಬಾಯಿನಿಂದ ಅಂಬರೀಷ್‌ ಅವರ ಹೆಸರು ಬರಬಾರದು. ಅಂಬರೀಷ್‌ ಅವರ ಕಾಲಿನ ಧೂಳಿಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಸಮ ಇಲ್ಲ’ ಎಂದು ಅವರು ಇದೇ ವೇಳೆ ಹರಿಹಾಯ್ದರು.

‘ಮುಂದೆ ಜಿಲ್ಲಾ ಪಂಚಾಯಿತಿಯಲ್ಲೂ ರವೀಂದ್ರ ಶ್ರೀಕಂಠಯ್ಯ ಗೆಲ್ಲುವುದಿಲ್ಲ. ಜನ ಹೇಗೆ ಒದ್ದು ಓಡಿಸುತ್ತಾರೆ ನೋಡಿ. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ‘ಅಂಬರೀಶ್‌ ಅವರ ಬಗ್ಗೆ ಮಾತನಾಡಿದರೆ ಹೀರೋ ಆಗುತ್ತೇನೆ’ ಎಂದು ರವೀಂದ್ರ ಶ್ರೀಕಂಠಯ್ಯ ತಿಳಿದಿದ್ದಾರೆ. ಈ ಮಾತುಗಳೆಲ್ಲಾ ರವೀಂದ್ರ ಅವರದ್ದಲ್ಲ, ಕೀ ಕೊಟ್ಟಹಾಗೇ ಮಾತನಾಡುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದಿರುವುದು ಜಿಲ್ಲೆಯ ದುರಂತ’ ಎಂದು ವಾಗ್ದಾಳಿ ನಡೆಸಿದರು.

‘ಇವರು ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಇವರು ರಾಜಕೀಯ ಪ್ರವೇಶ ಮಾಡಿರುವುದೇ ಭ್ರಷ್ಟಾಚಾರ ನಡೆಸಲು. ಭ್ರಷ್ಟಾಚಾರದಲ್ಲಿ ಎಷ್ಟೆಷ್ಟುಹಣ ಸಂಪಾದನೆ ಮಾಡಬೇಕು ಎಂಬುದೇ ಇವರ ಗುರಿ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಯಾವುದೇ ವಿಚಾರಗಳು ಹೊರಬಾರದಂತೆ ನೋಡಿಕೊಳ್ಳುತ್ತಾರೆ. ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದಾಗ ಶಾಸಕರ ಸಹಚರರು ಗೂಂಡಾ ವರ್ತನೆ ತೋರುವ ಮೂಲಕ ನಮ್ಮನ್ನು ಸ್ಥಳಕ್ಕೆ ಹೋಗಲು ಬಿಡಲಿಲ್ಲ. ನಿಜಕ್ಕೂ ನಾವು ಪಾಕಿಸ್ತಾನದಲ್ಲಿದ್ದೆವೆಯೇ ಎಂಬಂತಾಯಿತು. ರಾಜಕಾರಣದ ಹೆಸರಿನಲ್ಲಿ ಗೂಂಡಾ ವರ್ತನೆ ತೋರುವುದೇ ಇವರ ಕೆಲಸ. ಈ ಗೂಂಡಾಗಿರಿಗೆ ನಾನು ಹೆದರುವುದಿಲ್ಲ ಎಂದು ಛೇಡಿಸಿದರು.

‘ಮಂಡ್ಯ ಜಿಲ್ಲೆಯಲ್ಲಿ ಎಲ್ಲೆಲ್ಲಿ ಭ್ರಷ್ಟಾಚಾರ ಇದೆಯೋ, ಅಲ್ಲಿ ರವೀಂದ್ರ ಶ್ರೀಕಂಠಯ್ಯ ಕೈವಾಡ ಇದೆ. ಮಂಡ್ಯ ಜಿಲ್ಲೆಯನ್ನು ಭ್ರಷ್ಟಾಚಾರದ ಕ್ಯಾಂಪ್‌ ಮಾಡಿಕೊಂಡು ಆಳ್ವಿಕೆ ಮಾಡಲು ಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಬರಬೇಕಿರುವ ಹಣವನ್ನೆಲ್ಲ ಲಾಭ ಪಡೆದುಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಆಡಿಯೋ ಅಥವಾ ವಿಡಿಯೋ ಬಾಂಬ್‌ ಬಗ್ಗೆ ಮಾತನಾಡಿದರೆ, ಸಾರಿ ನನ್ನ ಬಳಿ ಇದೆಲ್ಲ ನಡೆಯುವುದಿಲ್ಲ. ಐ ಡೋಂಟ್‌ ಕೇರ್‌, ನಾನು ಹೆದರಿಕೊಳ್ಳುತ್ತೀನಾ?, ಭಯ ಬಿದ್ದು, ಈ ರೀತಿ ಮಾತನಾಡುವುದು ಸಹಜ’ ಎಂದು ಹೇಳಿದರು.

ಅಂಬರೀಶ್‌ ಹೆಸರು ಹೇಳಿದ್ರೆ ಕ್ರಮ:

‘ಅಂಬರೀಶ್‌ ಅವರು ವಸತಿ ಸಚಿವರಾಗಿದ್ದ ವೇಳೆ ಲೂಟಿ ಮಾಡಿದ್ದಾರೆ’ ಎಂಬ ಆರೋಪ ಮಾಡಿರುವ ಶಾಸಕರು ಇದಕ್ಕೆ ಸಂಬಂಧಪಟ್ಟದಾಖಲೆಗಳನ್ನು ಬಿಡುಗಡೆ ಮಾಡಲಿ. ‘ರವೀಂದ್ರ ಶ್ರೀಕಂಠಯ್ಯ ಅವರ ನಡೆ, ನಿಮ್ಮ ಮಾತು ಎಲ್ಲ ಸ್ಪಷ್ಟವಾಗಿದೆ. ಏಕೆ ಇಷ್ಟೆಲ್ಲಾ ಪರದಾಡುತ್ತಿದ್ದಾರೆ ಎಂದು ತಿಳಿಯುತ್ತಿದೆ. ಶಾಸಕರ ಹೇಳಿಕೆ ವಿನಾಶಕಾಲೇ ವೀಪರಿತ ಬುದ್ಧಿಯಂತಾಗಿದೆ. ಇನ್ನು ಮುಂದೆ ಅಂಬರೀಶ್‌ ಅವರ ಹೆಸರು ತೆಗೆದುಕೊಂಡರೆ ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ತೆಗೆದುಕೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಅಂಬಿ ಹೆಸರೆತ್ತಿದರೆ ಭಸ್ಮ ಅಲ್ಲ, ಮಣ್ಣುಪಾಲಾಗುತ್ತೀರಿ...

ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿ, ಎದುರಿಸ್ತೀನಿ. ಅಂಬರೀಶ್‌ ಬಗ್ಗೆ ಮಾತಾಡಿದರೆ ಭಸ್ಮ ಅಲ್ಲ, ಮಣ್ಣು ಪಾಲಾಗುತ್ತೀರಿ. ಇನ್ನು ಮುಂದೆ ಅಂಬರೀಶ್‌ ಹೆಸರೆತ್ತಿದರೆ ಏನು ಕ್ರಮ ಕೈಗೊಳ್ಳಬೇಕೋ, ಅದನ್ನು ಮಾಡುತ್ತೇನೆ. ತಾಳ್ಮೆ ಪರೀಕ್ಷೆ ಬೇಡ. ಅಂಬರೀಶ್‌ ಬಗ್ಗೆ ಮಾತಾಡಿದರೆ ಹೀರೋ ಆಗುತ್ತೇನೆ ಎಂದು ರವೀಂದ್ರ ಶ್ರೀಕಂಠಯ್ಯ ತಿಳಿದಿದ್ದಾರೆ. ಅವರು ಮುಂದೆ ಜಿಪಂಗೂ ಗೆಲ್ಲಲ್ಲ. ಜನ ಹೇಗೆ ಒದ್ದು ಓಡಿಸುತ್ತಾರೆ ನೋಡುತ್ತಿರಿ. ಅವರ ಮಾತು ಅವರದಲ್ಲ, ಕೀ ಕೊಟ್ಟಹಾಗೆ ಮಾತನಾಡುತ್ತಿದ್ದಾರೆ. ಇಂಥ ಶಾಸಕರನ್ನು ಪಡೆದದ್ದು ಮಂಡ್ಯದ ದುರಂತ.

- ಸುಮಲತಾ, ಮಂಡ್ಯ ಸಂಸದೆ

Follow Us:
Download App:
  • android
  • ios