ಮತಗಳ್ಳತನದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವು ಜನಾದೇಶದ ಪ್ರತಿಫಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಆರೋಪ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.
ಮದ್ದೂರು (ಆ.3): ಮತಗಳ್ಳತನ ಮೂಲಕ ಯಾರು ಅಧಿಕಾರಕ್ಕೆ ಬಂದಿರುತ್ತಾರೋ ಅವರೇ ಇಂತಹ ಗಂಭೀರ ಆರೋಪ ಮಾಡಲು ಸಾಧ್ಯ ಎನ್ನುವ ಮೂಲಕ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ನಾಯಕರು ಆರೋಪಕ್ಕೆ ಡಾ.ಸಿ.ಎನ್.ಮಂಜುನಾಥ್ ತಿರುಗೇಟು ನೀಡಿದರು.
ಸೋಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮಂಜುನಾಥ್, 'ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪವನ್ನು ತಳ್ಳಿಹಾಕಿದರು. 'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮತ ಯಂತ್ರಗಳು ಸರಿಯಾಗಿರುತ್ತವೆ, ಆದರೆ ಸೋತಾಗ ಮಾತ್ರ ಯಂತ್ರಗಳಲ್ಲಿ ದೋಷ ಕಾಣುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿತ್ತು. ಆಗ ಯಾವುದೇ ಕಳವು ಆಗಿರಲಿಲ್ಲವೇ?' ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ತಾನು 2.70 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು, ಜನರ ಒಲವಿನಿಂದಾಗಿ ಎಂದು ಮಂಜುನಾಥ್ ಸ್ಪಷ್ಟಪಡಿಸಿದರು. ವಿಧಾನಸಭೆ ಚುನಾವಣೆಯ ಮತದಾನ ಪಟ್ಟಿಯಂತೆಯೇ ಲೋಕಸಭಾ ಚುನಾವಣೆ ನಡೆದಿದೆ. ಚುನಾವಣಾ ಅಧಿಸೂಚನೆ ಬಳಿಕ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಇಷ್ಟು ದೊಡ್ಡ ಮತಗಳ ಅಂತರವನ್ನು ಕಳವು ಮಾಡುವುದು ಸಾಧ್ಯವೇ? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
'ಮತಗಳ್ಳತನ ರಾಜಕೀಯ ಪ್ರೇರಿತ ಆರೋಪ:
ಕಾಂಗ್ರೆಸ್‌ನ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಕರೆದ ಅವರು, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಒತ್ತಿ ಹೇಳಿದರು. ಜನರ ಆದೇಶವೇ ಅಂತಿಮ. ಆರೋಪಗಳಿಂದ ಸತ್ಯ ಬದಲಾಗುವುದಿಲ್ಲ ಎಂದು ಹೇಳಿದ ಮಂಜುನಾಥ್, ಕಾಂಗ್ರೆಸ್‌ನ ಆರೋಪಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಆ.5ರಂದು ರಾಹುಲ್ ಗಾಂಧಿ ಪ್ರತಿಭಟನೆಗೆ ಆಗಮಿಸಲಿದ್ದು, ಇತ್ತ ಬಿಜೆಪಿ ಪಕ್ಷವೂ ಕೂಡ ರಾಹುಲ್ ಗಾಂಧಿ ವಿರುದ್ಧ ಧರಣಿ ನಡೆಸಲಿದೆ.
