ಮಂಡ್ಯ ಮಿಮ್ಸ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ವೇಳೆ ಉಳಿಯುವ ಕ್ಯಾನ್ಸರ್ ಅವಶೇಷವನ್ನು ನೈಜ ಸಮಯದಲ್ಲಿ ಗುರುತಿಸುವ ಸಂಶೋಧನೆ ಆರಂಭಿಸಿವೆ. ಈ ತಂತ್ರಜ್ಞಾನವು ಎಐ ಮತ್ತು ಫ್ಲೊರೆಸನ್ಸ್ ಇಮೇಜಿಂಗ್ ಬಳಸಿ ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸಿ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ವರದಿ: ಮಂಡ್ಯ ಮಂಜುನಾಥ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಮೆಡ್-ಟೆಕ್ ಸ್ಟಾರ್ಟ್‌ಅಪ್ ಮ್ಯಾನ್‌ಮೆಡ್ ಡೈನಾಮಿಕ್ಸ್ ಜಂಟಿಯಾಗಿ ಶಸ್ತ್ರಚಿಕಿತ್ಸೆ ವೇಳೆ ಉಂಟಾಗುವ ಕ್ಯಾನ್ಸರ್ ಅವಶೇಷವನ್ನು ನೈಜ ಸಮಯದಲ್ಲಿ ಗುರುತಿಸುವ ಎರಡು ವರ್ಷದ ಸಂಶೋಧನಾ ಕಾರ್ಯಕ್ರಮವನ್ನು ಆರಂಭಿಸಿವೆ. ನಿಯರ್ ಇನ್ಫ್ರಾರೆಡ್ ಫ್ಲೊರೆಸಸ್ ಮತ್ತು ಕಲಿಕಾ ಆಧಾರಿತ ಎಐ ಮಾದರಿಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿರುವ ಈ ಅಧ್ಯಯನಕ್ಕೆ ಸ್ಮಾರ್ಟ್ ಸರ್ಜಿಕಲ್ ಮಾರ್ಜಿನ್ಸ್: ಪವರ್ಡ್ ರಿಯಲ್ ಟೈಮ್ ಕ್ಯಾನ್ಸರ್ ರೆಸಿಡ್ಯೂಲ್ ಡಿಟೆಕ್ಷನ್ ಯೂಸಿಂಗ್ ಫ್ಲೊರೆಸನ್ಸ್ ಇಮೇಜಿಂಗ್ ಎಂಬ ಶೀರ್ಷಿಕೆ ನೀಡಲಾಗಿದೆ.
2.5 ಲಕ್ಷ ರು. ಅನುದಾನ ಮಂಜೂರು:
ಈ ಯೋಜನೆಯು ಸಿಟಿಆರ್‌ಐನಲ್ಲಿ ನೋಂದಣಿಯಾಗಿದ್ದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಸ್ಥಾ ನೈತಿಕ ಸಮಿತಿಯಿಂದ ಅನುಮೋದನೆ ಪಡೆದಿದೆ. ಮೊದಲ ಹಂತದಲ್ಲಿ 2.5 ಲಕ್ಷ ರು. ಇಂಟ್ರಾಮ್ಯೂರಲ್ ಅನುದಾನವನ್ನು ಮಿಮ್ಸ್ ಮಲ್ಟಿ ಡಿಸಿಪ್ಲಿನರಿ ರೀಸರ್ಚ್ ಯೂನಿಟ್ ಮಂಜೂರು ಮಾಡಿದ್ದು ಮುಂದಿನ ಹಂತಗಳಿಗೆ ಐಸಿಎಂಆರ್ ಎಕ್ಸ್‌ಟ್ರಾ ಮ್ಯೂರಲ್ ಬೆಂಬಲ ಪಡೆಯುವ ಆಲೋಚನೆ ಹೊಂದಲಾಗಿದೆ.
ಶಸ್ತ್ರಚಿಕಿತ್ಸೆಯಲ್ಲಿ ಹೊಸ ಕ್ರಾಂತಿಗೆ ನಾಂದಿ:
ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಸುತ್ತಲಿನ ಆರೋಗ್ಯಕರ ಹಸ್ತಿಯನ್ನು ಉಳಿಸುವುದು ದೊಡ್ಡ ಸವಾಲಾಗಿ ಮುಂದುವರೆದಿದೆ. ಇಂದಿಗೂ ಬಳಸುತ್ತಿರುವ ಪರಂಪರಾಗತ ವಿಧಾನಗಳು ಬಹಳಷ್ಟು ಶಸ್ತ್ರಚಿಕಿತ್ಸಕರ ಅನುಭವ, ಶಸ್ತ್ರಕ್ರಿಯೆಯಲ್ಲಿನ ಕ್ಷಣ ಕ್ಷಣದ ನಿರ್ಧಾರ ಹಾಗೂ ಶಸ್ತ್ರದ ನಂತರ ತಡವಾಗಿ ಬರುವ ಹಿಸ್ಟೋಪಥಾಲಜಿ ವರದಿಗಳ ಮೇಲೆ ಅವಲಂಬಿತವಾಗಿವೆ. ಈ ಹಿನ್ನೆಲೆಯಲ್ಲೇ ಸ್ಮಾರ್ಟ್ ಎಡ್ಜ್ ಇಮೇಜಿಂಗ್ ತಂತ್ರಜ್ಞಾನ ಕ್ಷಣಾರ್ಧದಲ್ಲೇ ಸೂಕ್ಷ್ಮಮಟ್ಟದ ಕ್ಯಾನ್ಸರ್ ಅವಶೇಷಗಳನ್ನು ಹೈ-ರೆಸೆಲ್ಯೂಷನ್ ಚಿತ್ರಗಳ ಮೂಲಕ ತೋರಿಸುವ ಸಮಗ್ರ ವ್ಯವಸ್ಥೆಯಾಗಿ ಶಸ್ತ್ರಚಿಕಿತ್ಸಾ ಮಾರ್ಜಿನ್ ಮೌಲ್ಯಮಾಪನದಲ್ಲಿ ಕ್ರಾಂತಿಯನ್ನು ತರಲು ಉದ್ದೇಶಿಸಲಾಗಿದೆ. ಅಂಕಾಲಜಿಕ್ ಶಸ್ತ್ರಚಿಕಿತ್ಸೆಗಳ ನಿಖರತೆ, ಸುರಕ್ಷತೆ ಮತ್ತು ಚಿಕಿತ್ಸಾ ಫಲಿತಾಂಶಗಳನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.
ಎಐ ನೆರವಿನ ನೈಜ ಕಾಲ ಗುರುತಿಸುವಿಕೆ ಒದಗಿಸುವುದರಿಂದ ಡೀಪ್ ಲರ್ನಿಂಗ್ ಅಲ್ಗೋರಿದಮ್‌ಗಳು ಫ್ಲೊರೆಸೆನ್ಸ್ ಮಾದರಿಗಳನ್ನು ತಕ್ಷಣ ವಿಶ್ಲೇಷಿಸಿ ಉಳಿದಿರುವ ದುರ್ಜನ್ಯ ಹಸ್ತಿಯ ಸಾಧ್ಯ ಭಾಗಗಳ ಬಗ್ಗೆ ಶಸ್ತ್ರಚಿಕಿತ್ಸಕರಿಗೆ ಎಚ್ಚರಿಕೆ ನೀಡುತ್ತವೆ. ಗಡ್ಡೆ ಮತ್ತು ಆರೋಗ್ಯಕರ ಹಸ್ತಿಯ ನಡುವಿನ ಗಡಿಯನ್ನು ಸ್ಪಷ್ಟವಾಗಿ ತೋರಿಸಿ ಕಡಿಮೆ ಜಟಿಲತೆಗಳೊಂದಿಗೆ ಉತ್ತಮ ಮಾರ್ಜಿನ್ ಸಾಧಿಸಲು ನೆರವಾಗುತ್ತದೆ.
ವೈದ್ಯಕೀಯ-ಎಂಜಿನಿಯರ್ ತಂಡ ಜಂಟಿ ಪಾತ್ರ:
ಈ ಯೋಜನೆಯಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ತಂಡಗಳ ಪಾತ್ರಗಳನ್ನು ಸ್ಪಷ್ಟವಾಗಿ ಹಂಚಲಾಗಿದೆ. ಮಿಮ್ಸ್‌ನ ಎಂಆರ್‌ಯು ಘಟಕವು ಇಂಟ್ರಾಮ್ಯೂರಲ್ ಅನುದಾನ, ಆಡಳಿತಾತ್ಮಕ ನೆರವು ಹಾಗೂ ಸಂಶೋಧನಾ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಮಂಡ್ಯ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅವರು ಮುಖ್ಯ ಸಂಶೋಧಕರಾಗಿ ಸಂಸ್ಥೆಯ ನೇತೃತ್ವ. ನಿಯಂತ್ರಣ ಸಂಸ್ಥೆಗಳೊಂದಿಗಿನ ಹೊಂದಾಣಿಕೆ ಮತ್ತು ವಿಭಾಗಾಂತರ ಸಂಯೋಜನೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.
ನ್ಯೂರೋಸರ್ಜನ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಎನ್.ಲಿಂಗರಾಜು ಮುಖ್ಯ ಸಂಶೋಧಕರಾಗಿ ರೋಗಿಯ ಆರೈಕೆ ರೂಪುರೇಷೆ, ಶಸ್ತ್ರಚಿಕಿತ್ಸೆಯಲ್ಲಿ ತೆಗೆದುಕೊಳ್ಳುವ ಮಾದರಿಗಳ ಸಂರಕ್ಷಣೆ, ಯೋಜನೆಯ ವೈಜ್ಞಾನಿಕ ಫಲಿತಾಂಶಗಳನ್ನು ಕ್ಯಾನ್ಸರ್ ಚಿಕಿತ್ಸೆಯೊಂದಿಗೆ ಹೋಲಿಕೆ ಮಾಡುವ ಭಾಗವನ್ನು ಮುಂದುವರೆಸುತ್ತಾರೆ. ಪಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೈ.ಮುರಳೀಧರ್‌ಟ್ ಅವರು ಸಹ ಮುಖ್ಯ ಸಂಶೋಧಕರಾಗಿ ಎಲ್ಲ ಫಲಿತಾಂಶಗಳನ್ನು ಹಿಸ್ಟೋಪಥಾಲಜಿಸ್ಟ್ ಗೋಲ್ಡ್ ಸ್ಟ್ಯಾಂಡರ್ಡ್ ಎಚ್‌ಅಂಡ್‌ಇ ಜೊತೆ ಕಟ್ಟುನಿಟ್ಟಾಗಿ ಹೋಲಿಸಿ ವೈದ್ಯಕೀಯ ಶುದ್ಧತೆಯನ್ನು ಖಚಿತಪಡಿಸಲಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಮ್ಯಾನ್‌ಮೆಡ್ ಡೈನಾಮಿಕ್ಸ್ ಸಹ ಸ್ಥಾಪಕ ಪಿ.ಎನ್.ವಿಶ್ವಾಸ್‌ಗೌಡ ತಾಂತ್ರಿಕ ಮುಖ್ಯ ಸಂಶೋಧಕರಾಗಿ ಕಲ್ಪನೆ, ಆಪ್ಟಿಕ್ಸ್, ಇಮೇಜಿಂಗ್ ಹಾರ್ಡ್‌ವೇರ್, ಎಡ್ಜ್ ಕಂಪ್ಯೂಟಿಂಗ್ ಹಾಗೂ ಎಐ ಮಾದರಿ ನಿರ್ಮಾಣದವರೆಗಿನ ಸಂಪೂರ್ಣ ಇಂಜಿನಿಯರಿಂಗ್ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ.
ಸಂಶೋಧನೆಯಲ್ಲಿ ಜರ್ಮನಿಯಲ್ಲಿರುವ ಮಂಡ್ಯ ಹುಡುಗ:
ಮಂಡ್ಯ ತಾಲೂಕಿನ ಪಣಕನಹಳ್ಳಿ ಮೂಲದ ವಿಶ್ವಾಸ್, ಜರ್ಮನಿಯ ಯೂನಿವರ್ಸಿಟಿ ಆಫ್ ಡೂಯಿಸ್ಟರ್ಗ್-ಎಸೆನ್‌ನಲ್ಲಿ ಮೆಕಾಟ್ರಾನಿಕ್ಸ್ ಸ್ನಾತಕೋತ್ತರ ಪದವಿ (ಶಸ್ತ್ರಚಿಕಿತ್ಸೆ ಬಳಕೆಯ ರೋಬೋಟಿಕ್ಸ್ ವಿಶೇಷತೆಯೊಂದಿಗೆ) ಅಭ್ಯಾಸದಲ್ಲಿದ್ದಾರೆ. ಈ ಸಂಶೋಧನೆಯಿಂದ ಶಸ್ತ್ರಚಿಕಿತ್ಸಾ ಮಾರ್ಜಿನ್ ಬಳಿ ಉಳಿಯಬಹುದಾದ ಕ್ಯಾನ್ಸರ್ ಅವಶೇಷದ ನಿರ್ಣಯ ವೇಗವಾಗಿ ಸಾಧ್ಯವಾಗಲಿದೆ. ಚೇತರಿಕೆ ನಿಧಾನವಾಗಿರುವ ಮಧುಮೇಹಿ ರೋಗಿಗಳಲ್ಲಿ ಪುನಃ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಕೆಲವು ಸಂದರ್ಭಗಳಲ್ಲಿ ದೂರ ಮಾಡುವುದು, ರೋಗಿ ಮತ್ತು ಶಸ್ತ್ರಚಿಕಿತ್ಸಕರ ಶ್ರಮವನ್ನು ಉಳಿಸುವುದು ಹಾಗೂ ಒಟ್ಟು ಚಿಕಿತ್ಸಾ ವೆಚ್ಚದಲ್ಲೂ ಕಡಿತ ತರಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.
ಕತ್ತರಿಸಿದ ಸ್ತನ ಮಾದರಿಗಳ ಮೇಲೆ ಪರೀಕ್ಷೆ:
ಅಧ್ಯಯನದ ಮೊದಲ ಹಂತದಲ್ಲಿ ಮಿಮ್ಸ್ ಪಥಾಲಜಿ ಪ್ರಯೋಗಾಲಯದಲ್ಲೇ ಬೆಳಕು ಪ್ರವೇಶಿಸದ ಕ್ರಮಬದ್ಧ ಬಾಕ್ಸ್ ಒಳಗೆ ಕತ್ತರಿಸಿ ತೆಗೆಯಲಾದ ಸ್ತನ ಮತ್ತು ಕೊಲೊರೆಕ್ಟಲ್ ಗಡ್ಡೆ ಮಾದರಿಗಳ ಮೇಲೆ ಎಕ್ಸ್-ವಿವೋ ಪರೀಕ್ಷೆ ನಡೆಸಲಾಗುತ್ತದೆ. ಸುಮಾರು 785 ಎನ್‌ಎಂ ತರಂಗದೈರ್ಘದ ನಿಯರ್ ಇನ್ಫ್ರಾರೆಡ್ ಎಕ್ಸೈಟೇಶನ್ ಅಡಿಯಲ್ಲಿ ಐಸಿಜಿ ಫ್ಲೊರೆಸೆನ್ಸ್ ಉಂಟಾಗುವಂತೆ ಮಾಡಿ ಅದನ್ನು ವಿಶೇಷ ಎಮಿಷನ್ ಫಿಲ್ಟರ್‌ಗಳ ಮೂಲಕ ಮೋನೋ ವೈಜ್ಞಾನಿಕ ಕ್ಯಾಮೆರಾ ಸೆರೆಹಿಡಿಯುತ್ತದೆ. ಆ ಚಿತ್ರಸಂಗ್ರಹಗಳನ್ನು ಎಡ್ಜ್ ಕಂಪ್ಯೂಟ್ ಮಾಡ್ಯೂಲ್ ಸಂಸ್ಕರಿಸುತ್ತದೆ.
ಕಲಿಕೆ ಆಧಾರಿತ ಎಐ ಮಾದರಿ ಸಂಶಯಾಸ್ಪದ ಪ್ರದೇಶಗಳನ್ನು ಹೈಲೈಟ್ ಮಾಡುವ ಮೂಲಕ ಶಸ್ತ್ರಚಿಕಿತ್ಸಾ ಮಾರ್ಜಿನ್ ಭಾಗದಲ್ಲಿ ಉಳಿದಿರಬಹುದಾದ ಕ್ಯಾನ್ಸರ್ ಅವಶೇಷವನ್ನು ಗುರುತಿಸಲು ಸಹಕಾರಿಯಾಗುತ್ತದೆ. ಎಐ ಸೂಚನೆಯನ್ನು ಪ್ರತ್ಯೇಕವಾಗಿ ಹಿಸ್ಟೋಪಥಾಲಜಿಯೊಂದಿಗೆ ಹೋಲಿಕೆಆಡಲಾಗುತ್ತದೆ. ಎಲ್ಲಾ ದತ್ತಾಂಶಗಳನ್ನೂ ಡಿ-ಐಡೆಂಟಿಫೈ ಮಾಡಿ ವರ್ಶನ್ ಕಂಟ್ರೋಲ್, ಆಡಿಟ್ ಟ್ರೇಲ್ಸ್ ಮತ್ತು ನಿರ್ದಿಷ್ಟ ಪ್ರವೇಶ ಹಕ್ಕುಗಳನ್ನು ಒಳಗೊಂಡ ಪ್ರೋಟೋಕಾಲ್ ಅಡಿಯಲ್ಲಿ ಸಂಗ್ರಹಿಸಲಾಗುತ್ತದೆ. ಎಐ ಉತ್ಪನ್ನಗಳು ವೈದ್ಯರ ತೀರ್ಮಾನಕ್ಕೆ ನೆರವಾದರೂ ಪ್ರಧಾನ ಕ್ಲಿನಿಕಲ್ ತೀರ್ಮಾನವನ್ನು ಯಾವತ್ತೂ ಬದಲಾಯಿಸುವುದಿಲ್ಲ.
ಸಾರ್ವಜನಿಕ ವೈದ್ಯಕೀಯ ಮಹಾವಿದ್ಯಾಲಯದ ವಾತಾವರಣದಲ್ಲೇ ಐಸಿಜಿ ಆಧಾರಿತ ಎನ್‌ಐಆರ್ ಪ್ಲೊರೆಸೆನ್ಸ್, ಮಷಿನ್ ವಿಷನ್ ಆಪ್ಟಿಕ್ಸ್ ಮತ್ತು ಆನ್-ಡಿವೈಸ್ ಕಲಿಕೆ ಆಧಾರಿತ ಎಐ ಮಾದರಿಯನ್ನು ಒಂದೇ ಕಡಿಮೆ ವೆಚ್ಚದ ಎಕ್ಸ್-ವಿವೋ ಮರ್ಜಿನ್ ಅಸೆಸ್ಮೆಂಟ್ ಪೈಪ್‌ಲೈನ್‌ಗೆ ಸಂಯೋಜಿಸುವ ಭಾರತ ಮೂಲದ ಮೊದಲ ಯೋಜನೆ ಎಂಬ ಹಕ್ಕು ಎಂದು ಹೇಳಲಾಗಿದೆ.
ಈ ವ್ಯವಸ್ಥೆಯ ವಿನ್ಯಾಸ ಸರ್ಕಾರ ಮತ್ತು ಜಿಲ್ಲಾ ಆಸ್ಪತ್ರೆಗಳು ಸಹ ಖರೀದಿಸಿ ಬಳಸಿಕೊಳ್ಳಬಹುದಾದಷ್ಟು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ರೂಪುಗೊಳ್ಳುತ್ತಿದೆ. ಕೇವಲ ತೃತೀಯ ಹಂತದ ಸೂಪರ್ ಸ್ಪೆಷಾಲಿಟಿ ಕೇಂದ್ರಗಳಿಗೆ ಮಾತ್ರ ಸೀಮಿತವಾಗದ ತಂತ್ರಜ್ಞಾನವನ್ನು ಒದಗಿಸುವುದು ಮುಖ್ಯ ಗುರಿಯಾಗಿದೆ ಎನ್ನಲಾಗಿದೆ.
ಈ ಯೋಜನೆ ಮಿಮ್ಸ್ ವೈದ್ಯಕೀಯ ಮೌಲ್ಯ ಧೋರಣೆಯನ್ನು ಕಠಿಣ ಎಂಜಿನಿಯರಿಂಗ್ ಜೊತೆ ಒಂದೇ ವೇದಿಕೆಗೆ ತರಲಾಗುತ್ತಿದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.
ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್
ಪ್ರಯೋಗಾಲಯ ಮಟ್ಟದಿಂದ ಆರಂಭಿಸುವುದರಿಂದ ರೋಗಿಗಳ ಸುರಕ್ಷತೆ ಖಚಿತವಾಗುತ್ತದೆ. ಶಸ್ತ್ರಚಿಕಿತ್ಸಾ ಕೋಣೆಗೆ ತೆರಳುವ ಮುನ್ನ ಪಥಾಲಜಿಯಿಂದ ದೃಢೀಕರಿಸಿರುವ ಸಮೃದ್ಧ ಸಾಕ್ಷ್ಯಗಳನ್ನು ನಾವು ಪಡೆಯುತ್ತೇವೆ.
ಡಾ.ಎನ್.ಲಿಂಗರಾಜು, ಮುಖ್ಯ ಸಂಶೋಧಕ, ಮಿಮ್ಸ್
ಪ್ರತಿ ದೃಢೀಕೃತ ಪ್ರಕರಣದೊಂದಿಗೆ ವೇದಿಕೆಯ ಎಐ ಮಾದರಿ ಕಲಿಕೆಯಿಂದ ಬೆಳೆದು ಎರಡು ವರ್ಷದ ಅವಧಿಯಲ್ಲಿ ಸೆನ್ಸಿಟಿವಿಟಿ ಮತ್ತು ಸ್ಪೆಸಿಫಿಸಿಟಿಯನ್ನು ಹಂತ ಹಂತವಾಗಿ ಹೆಚ್ಚಿಸಲಿದೆ.
ಪಿ.ಎನ್.ವಿಶ್ವಾಸ್‌ಗೌಡ, ತಾಂತ್ರಿಕ ಮುಖ್ಯ ಸಂಶೋಧಕ


