ತಮಿಳುನಾಡಿಗೆ ಕಾವೇರಿ ನೀರು: ಇಂದು ಮಂಡ್ಯ, ಮದ್ದೂರು ಬಂದ್, ಎಚ್ಡಿಕೆ ಬೆಂಬಲ
ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಶನಿವಾರ ಮಂಡ್ಯ ನಗರ ಹಾಗೂ ಮದ್ದೂರು ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.
ಮಂಡ್ಯ/ಮದ್ದೂರು (ಸೆ.23): ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಶನಿವಾರ ಮಂಡ್ಯ ನಗರ ಹಾಗೂ ಮದ್ದೂರು ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದರೂ ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಜತೆಗೆ, ಸುಪ್ರೀಂ ಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ.
ಮಂಡ್ಯ ನಗರ ಬಂದ್‌ಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದರೆ, ಮದ್ದೂರು ತಾಲೂಕು ಬಂದ್‌ಗೆ ವಿವಿಧ ಸಂಘಟನೆಗಳು ಮನವಿಮಾಡಿವೆ. ಈ ಬಂದ್‌ಗೆ ಈಗಾಗಲೇ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆ 6ರವರೆಗೆ ಹೋಟೆಲ್, ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಈಗ ಅಧಿಕೃತ: ದಸರಾ ಬಳಿಕ ಲೋಕಸಭೆ ಸೀಟು ಹಂಚಿಕೆ ನಿರ್ಧಾರ
ನಾಲ್ಕನೇ ಶನಿವಾರವಾಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದು, ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ ಪ್ರತಿಭಟನಾ ಮೆರವಣಿಗೆಯೂ ನಡೆಯಲಿದ್ದು, ತಮಿಳುನಾಡು ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುವ ನಿರೀಕ್ಷೆ ಇದೆ.
ಮಂಡ್ಯ ಪ್ರತಿಭಟನೆಗೆ ಇಂದು ಎಚ್ಡಿಕೆ: ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಪ್ರತಿಭಟಿಸಿ ಮಂಡ್ಯ ಜಿಲ್ಲೆಯ ಜನರು ನಡೆಸುತ್ತಿರುವ ಬಂದ್‌ಗೆ ತಮ್ಮ ಬೆಂಬಲವಿದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶನಿವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ನಾನು ವಾಪಸಾಗುತ್ತೇನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮಂಡ್ಯಕ್ಕೆ ತೆರಳುತ್ತೇನೆ ಎಂದು ಹೇಳಿದ್ದಾರೆ. ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಜನರ ಜತೆ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.
ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ಧ ಆಕ್ರೋಶ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ನಡೆ ವಿರೋಧಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಚೆ ಕಚೇರಿಗೆ ನುಗ್ಗಲು ಯತ್ನಿಸಿ ಬಂಧನಕ್ಕೆ ಒಳಗಾದರು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಅಂಚೆ ಕಛೇರಿ ಒಳ ಹೋಗಲು ಯತ್ನಿಸಿದಾಗ ಪೊಲೀಸರು ಅವರನ್ನು ಬಾಗಿಲಲ್ಲಿಯೇ ತಡೆದರು. ನಂತರ ಬಂಧಿಸಿ ಕರೆದೊಯ್ದು ಬಿಡುಗಡೆ ಮಾಡಿದರು.
ಭುಗಿಲೆದ್ದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯಾದ್ಯಂತ ಹೋರಾಟ ತೀವ್ರ
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರು ಉಳಿದಿದ್ದು, ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ಮಾತ್ರ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು 7 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಶ್ಚರ್ಯಕರ ಹಾಗೂ ಅಘಾತಕಾರಿಯಾಗಿದೆ. ಬೆಂಗಳೂರಿಗೆ ಪ್ರತಿ ತಿಂಗಳು, ಕುಡಿಯುವ ನೀರಿಗೆ 1.5 ಟಿಎಂಸಿ ನೀರು ಬೇಕು, ಕಾವೇರಿ ಕಣಿವೆಯ ರೈತರ ಹೊಲ ಗದ್ದೆಗಳಿಗೆ ನೀರಿಲ್ಲ. ಕೈಗಾರಿಕೆಗಳಿಗೆ ಕೊಡಬೇಕಾದ ನೀರಿಲ್ಲ. ಹೀಗಿರುವಾಗ 15 ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ. ಮಂಡ್ಯ ಭಾಗದಲ್ಲಿ ರೈತರು ನೀರಿಗೆ ಏನು ಮಾಡಬೇಕು? ಬೆಂಗಳೂರಿನ 1.5 ಕೋಟಿ ಜನರು ಕುಡಿಯುವ ನೀರು ಇಲ್ಲದೆ ಸಾಯಬೇಕೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.