Asianet Suvarna News Asianet Suvarna News

ಭುಗಿಲೆದ್ದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯಾದ್ಯಂತ ಹೋರಾಟ ತೀವ್ರ

ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌ನ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭುಗಿಲೆದ್ದಿದ್ದ ಹೋರಾಟದ ಕಿಚ್ಚು ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ.
 

Violent protest against release of Cauvery water to Tamilnadu gvd
Author
First Published Sep 23, 2023, 5:23 AM IST

ಬೆಂಗಳೂರು (ಸೆ.23): ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌ನ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭುಗಿಲೆದ್ದಿದ್ದ ಹೋರಾಟದ ಕಿಚ್ಚು ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರುಹರಿಸದಂತೆ ಒತ್ತಾಯಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ಮುಂದುವರೆಸಿದರೆ, ಬೆಂಗಳೂರು ಸೇರಿ ರಾಜ್ಯದ ಇತರೆಡೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ, ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಲಾಯಿತು. ಇದೇ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ನಟ ಅಭಿಷೇಕ್ ಅಂಬರೀಷ್‌ ಅವರಿಂದಲೂ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.

ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಯತ್ನ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನ್ಯಾಯಾಲಯವು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಮತ್ತು ರೈತರ ಹಿತ ಮರೆತು ರಾಜ್ಯ ಸರ್ಕಾರ ಕೂಡ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ವ್ಯಾಪಕ ಅಸಮಾಧಾನ ಶುರುವಾಗಿತ್ತು. ಅದರಂತೆ ಗುರುವಾರ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಇದೀಗ ತಮ್ಮ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಿದ್ದಾರೆ. 

ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ

ಬೆಂಗಳೂರು ಮಾತ್ರವಲ್ಲದೆ, ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ, ಹೊಸಪೇಟೆ ಸೇರಿ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಗದಗದಲ್ಲಿ ಪ್ರಧಾನ ಅಂಚೆ ಕಚೇರಿ, ಕೊಪ್ಪಳದಲ್ಲಿ ಬಿಎಸ್ಸೆನ್ನೆಲ್‌ ಕಚೇರಿ, ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ಯತ್ನಿಸಿದ್ದು, ಈ ವೇಳೆ ಹಲವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ಗದಗದಲ್ಲಿ ಪೊಲೀಸರೊಂದಿಗೆ ನಡೆದ ನೂಕಾಟ-ತಳ್ಳಾಟ ಹಾಗೂ ಘೋಷಣೆ ಕೂಗುವ ವೇಳೆ ಕಾರ್ಯಕರ್ತನೋರ್ವ ಅಸ್ವಸ್ಥಗೊಂಡು ಕುಸಿದ ಬಿದ್ದ ಘಟನೆಯೂ ನಡೆಯಿತು. ಇದರಿಂದ ತೀವ್ರ ಗಲಿಬಿಲಿಗೊಂಡ ಕಾರ್ಯಕರ್ತರು ತಕ್ಷಣವೇ ಕಾರ್ಯಕರ್ತನನ್ನು ಆಸ್ಪತ್ರೆ ಸಾಗಿಸಿದರು.

ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆ: ಕಾವೇರಿ ಜಲಾನಯಪ್ರದೇಶವಾದ ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರಲ್ಲೂ ಪ್ರತಿಭಟನೆ ಮುಂದುವರಿದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ರೈತ ಸೇರಿ ವಿವಿಧ ಸಂಘಟನೆಗಳು ಮಂಡ್ಯ ಹಾಗೂ ರಾಮನಗರದಲ್ಲಿ ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರೆ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಮೈಸೂರಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಅನಿವಾರ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಪಂಪ್‌ಹೌಸ್‌ಗೆ ಮುತ್ತಿಗೆ ಯತ್ನ: ಕಾವೇರಿ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿಗೆ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿಯ ಪಂಪ್‌ಹೌಸ್‌ಗೆ ರೈತರು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗವೂ ಶುಕ್ರವಾರ ನಡೆಯಿತು. ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯ ಜಲಮಂಡಳಿ ಮುಖ್ಯದ್ವಾರಕ್ಕೆ ಆಗಮಿಸಿದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ರೈತರು ಪಂಪ್ ಹೌಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ತಳ್ಳಾಟ, ನೂಕಾಟ ನಡೆಯಿತು. ಆಗ ಕೆಲ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

Follow Us:
Download App:
  • android
  • ios