ಬೀದರ್‌ನ ನೌಬಾದ್ ಬಳಿ ರೈಲ್ವೆ ಹಳಿಯ ಮೇಲೆ ಬೈಕ್ ಸವಾರನೊಬ್ಬ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ರೈಲು ಚಾಲಕನ ಸಮಯಪ್ರಜ್ಞೆಯಿಂದ, ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ.
ಬೀದರ್ (ನ.4) ಬೀದರ್ ನಗರದ ನೌಬಾದ್ ಬಳಿ ಕಲಬುರಗಿ-ಬೀದರ್ ಮಾರ್ಗದ ರೈಲ್ವೆ ಹಳಿಯ ಮೇಲೆ ಭಾರೀ ದುರಂತವೊಂದು ತಪ್ಪಿದೆ. ಬೈಕ್ ಸವಾರನೊಬ್ಬ ರೈಲು ಹಳಿಯ ಮೇಲೆ ಬೈಕ್ ಬಿಟ್ಟ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆ ಹೇಗಾಯ್ತು?
ಬೈಕ್ ಸವಾರ ಜಮೀನಿಗೆ ತೆರಳಲು ರೈಲು ಹಳ್ಳಿ ದಾಟಲು ಯತ್ನಿಸಿದ್ದಾನೆ. ವಾಹನವನ್ನ ರೈಲ್ವೆ ಹಳಿ ಮೇಲೆ ಚಲಾಯಿಸುವಾಗ ರೈಲು ಬರುವುದು ಕಂಡು ಬೈಕ್ ರೈಲ್ವೆ ಹಳಿ ಮೇಲೆಯೇ ಬಿಟ್ಟು ಪಾರಾಗಿದ್ದಾನೆ. ಆದರೆ ಇದನ್ನ ದೂರದಿಂದಲೇ ಗಮನಿಸಿದ ರೈಲು ಚಾಲಕ ತಕ್ಷಣ ರೈಲು ನಿಲ್ಲಿಸಲು ಪ್ರಯತ್ನಿಸಿದ್ದರೂ, ಸಂಪೂರ್ಣ ನಿಲ್ಲದೆ ಬೈಕ್‌ಗೆ ಡಿಕ್ಕಿಯಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಬೈಕ್ ಸವಾರ ಬೇಜವಾಬ್ದಾರಿತನವೋ, ಉದ್ದೇಶಪೂರ್ವಕ ಕೃತ್ಯವೋ?
ರೈಲ್ವೆ ಹಳಿ ದಾಟುವಾಗ ಎರಡು ಬದಿ ನೋಡಿ ಬೈಕ್ ಚಲಾಯಿಸುವುದು ಸಮಾನ್ಯ. ಆದರೆ ರೈಲ್ವೆ ಹಳಿ ಮೇಲೆ ಬೈಕ್ ಚಲಾಯಿಸಿ ಬೈಕ್ ಹಳಿಮೇಲೆ ಬಿಟ್ಟು ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ರೈಲ್ವೆ ಚಾಲಕನ ಪ್ರಯತ್ನದಿಂದ ದುರಂತ ತಪ್ಪಿದೆ. ಒಂದು ವೇಳೆ ಬೈಕ್‌ನಿಂದ ಹಳಿ ತಪ್ಪಿದ್ದರೆ ರೈಲ್ವೆ ಪ್ರಯಾಣಿಕರ ಗತಿಯೇನು? ಈ ರೀತಿಯ ಘಟನೆಗಳನ್ನು ತಡೆಯಲು ಸಾರ್ವಜನಿಕರಿಗೆ ರೈಲು ಹಳ್ಳಿಗಳ ಬಳಿ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.
