ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾಮದಲ್ಲಿ ನಾಯಿ ಕಡಿದ ಆರು ತಿಂಗಳ ಬಳಿಕ ಶಿವಶಂಕರ್ ಎಂಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಯಿ ಕಡಿತವನ್ನು ನಿರ್ಲಕ್ಷಿಸಿದ್ದರಿಂದ ಈ ದುರಂತ ಸಂಭವಿಸಿದೆ.
ಬೆಳಗಾವಿ (ಏ.9): ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿ ಶಿವಶಂಕರ್ ಪರಸಪಗೋಳ (40) ಎಂಬ ವ್ಯಕ್ತಿ, ನಾಯಿ ಕಡಿದ ಆರು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಘಟನೆಯ ವಿವರ
ಕಳೆದ ಆರು ತಿಂಗಳ ಹಿಂದೆ ತಿಗಡಿ ಗ್ರಾಮದಲ್ಲಿ ಶಿವಶಂಕರ್ ಅವರ ಸಾಕು ನಾಯಿಯೊಂದು ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡಿತ್ತು. ಬಳಿಕ ಆ ಸಾಕು ನಾಯಿಯು ಶಿವಶಂಕರ್ ಅವರಿಗೆ ಕಡಿದು ಗಾಯಗೊಳಿಸಿತ್ತು. ಆದರೆ, ಈ ಗಾಯವನ್ನು ಶಿವಶಂಕರ್ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದ್ದರು.
ಇದನ್ನೂ ಓದಿ: Kancha Gachibowli row: ಬೀದಿ ನಾಯಿಗಳ ದಾಳಿಗೆ ಬಲಿಯಾದ ಜಿಂಕೆ!
ನಿನ್ನೆ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ, ಅವರನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅವರು ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ.
ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದ್ದು, ನಾಯಿ ಕಡಿತದ ಗಾಯಗಳನ್ನು ಸರಿಯಾಗಿ ಗಮನಿಸುವ ಮತ್ತು ತಕ್ಷಣದ ಚಿಕಿತ್ಸೆ ಪಡೆಯುವ ಮಹತ್ವವನ್ನು ಈ ದುರಂತ ಮತ್ತೊಮ್ಮೆ ಎಚ್ಚರಿಸಿದೆ.
