ಮಲ್ಲೇಶ್ವರದಲ್ಲಿರುವ ಪೊಲೀಸ್ ಇಲಾಖೆಯ 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯತ್ನಿಸಿದ್ದಾರೆ. ಪೊಲೀಸ್ ಕ್ವಾರ್ಟರ್ಸ್‌ನ ವಿದ್ಯುತ್ ಬಿಲ್‌ನಲ್ಲಿ ಖಾಸಗಿ ವ್ಯಕ್ತಿಯ ಹೆಸರು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಲೋಕಾಯುಕ್ತ ಇನ್ಸ್‌ಪೆಕ್ಟರ್ ದೂರಿನ ಮೇರೆಗೆ  ಎಫ್‌ಐಆರ್ ದಾಖಲು.

ಬೆಂಗಳೂರು (ಏ.2): ಪೊಲೀಸ್ ಇಲಾಖೆಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯತ್ನಿಸಿರುವ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಖಾಸಗಿ ವ್ಯಕ್ತಿಗಳು, ಬೆಸ್ಕಾಂ, ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಂ.ಕುಮಾರ್‌ ಅವರು ನೀಡಿದ ದೂರಿನನ್ವಯ ಎಂ.ಆರ್‌ ಮಹಾಲಕ್ಷ್ಮಿ, ಕೃಷ್ಣಮೂರ್ತಿ, ಶ್ರೀನಾಥ್‌ ನರಗದ್ದೆ, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪೊಲೀಸ್ ವಸತಿ ಗೃಹಗಳಿರುವ ಈ ಜಾಗಕ್ಕೆ ಸುಮಾರು 100 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಸುಮಾರು 80 ಕೋಟಿ ರು. ಮೌಲ್ಯದ ಆಸ್ತಿ ಇದಾಗಿದೆ ಎನ್ನಲಾಗಿದೆ. ಪ್ರಸ್ತುತ ಇಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಇನ್‌ಸ್ಪೆಕ್ಟರ್‌ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ಲಿನಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರು ನಮೂದಾಗಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಅನುಮಾನಗೊಂಡ ಇನ್‌ಸ್ಪೆಕ್ಟರ್‌ ಕುಮಾರ್ ಅವರು, ಮೊದಲು ಬೆಸ್ಕಾಂ, ಬಿಬಿಎಂಪಿ ಮತ್ತು ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಕ್ರಮವಾಗಿ ಆಸ್ತಿ ದಾಖಲೆಗಳನ್ನು ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ. ಇಷ್ಟೇ ಅಲ್ಲದೇ ಬಿಬಿಎಂಪಿ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರ (ಅಗ್ರಿಮೆಂಟ್ ಆಫ್ ಸೇಲ್) ಕೂಡ ಮಾಡಿರುವುದು ಪತ್ತೆಯಾಗಿದೆ.

ಪೊಲೀಸ್‌ ಕುಟುಂಬಕ್ಕೆ ಧಮ್ಕಿ \B\Bಹಾಕಿದ್ದ ಕಿಡಿಗೇಡಿಗಳು:

ಮಾ.9 ರಂದು ಕೆಲವು ವ್ಯಕ್ತಿಗಳು ಪೊಲೀಸ್‌ ಕ್ವಾರ್ಟಸ್‌ಗೆ ಆಗಮಿಸಿ, ಇದು ನಮಗೆ ಸೇರಿದ ಆಸ್ತಿ, ಈ ಕೂಡಲೇ ನೀವು ಜಾಗ ಖಾಲಿ ಮಾಡಬೇಕು. ಯಾರೇ ಅಧಿಕಾರಿಗಳು ವಾಸವಿದ್ದರೂ ನಾವು ಬಿಡುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ಮನೆಯನ್ನು ಖಾಲಿ ಮಾಡಬೇಕು ಇಲ್ಲವಾದಲ್ಲಿ ನಿಮ್ಮ ವಸ್ತುಗಳನ್ನು ಹೊರಗಡೆ ಬಿಸಾಡಿ ನಿಮ್ಮನ್ನು ಹೊರ ಹಾಕಲಾಗುವುದು. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸ್ವತ್ತು ಸರ್ಕಾರದ ಪೊಲೀಸ್‌ ವಸತಿ ಗೃಹಗಳು ಎಂದು ಗೊತ್ತಿದ್ದರೂ ಉದ್ದೇಶ ಪೂರ್ವಕವಾಗಿಯೇ ಎಂ.ಆರ್‌ ಮಹಾಲಕ್ಷ್ಮಿ ಅವರು ಕೃಷ್ಣಮೂರ್ತಿ, ಶ್ರೀನಾಥ್‌ ನರಗದ್ದೆ, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ಶಾಮಿಲಾಗಿ ಮೋಸ ಮಾಡುವ ಉದ್ದೇಶದಿಂದ ಪೊಲೀಸ್‌ ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡದೆ ಪೊಲೀಸ್‌ ಇಲಾಖೆಗೆ ಸೇರಿದ್ದ ಸೇರಿದ್ದ ಜಾಗವನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.