Male Mahadeshwara Hills: ಕೋಟಿ ಕೋಟಿ ಕಾಣಿಕೆ ಬಂದ್ರೂ ಡಕೋಟಾ ಬಸ್; ಪ್ರಾಣ ಭೀತಿಯಲ್ಲಿ ಮಾದಪ್ಪನ ಭಕ್ತರು!
ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯ, ರಾಜ್ಯದ ಎರಡನೇ ಶ್ರೀಮಂತ ದೇಗುಲ, ಪ್ರತಿವಾರ ಲಕ್ಷಾಂತರ ಭಕ್ತರು ಭೇಟಿ ಕೊಡಲಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳು ಬಸ್‌ಗಳ ಬಗ್ಗೆ ನಿರ್ಲಕ್ಷ್ಯತೋರುತ್ತಿದ್ದಾರೆ
ಚಾಮರಾಜನಗರ (ಜೂ.26) ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯ, ರಾಜ್ಯದ ಎರಡನೇ ಶ್ರೀಮಂತ ದೇಗುಲ, ಪ್ರತಿವಾರ ಲಕ್ಷಾಂತರ ಭಕ್ತರು ಭೇಟಿ ಕೊಡಲಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳು ಬಸ್‌ಗಳ ಬಗ್ಗೆ ನಿರ್ಲಕ್ಷ್ಯತೋರುತ್ತಿದ್ದಾರೆ. ದೇವಾಲಯ ಅಭಿವೃದ್ಧಿ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಮಲೆಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಅಭಿವೃದ್ಧಿ, ಮೂಲಸೌಕರ್ಯ ಆಗಿಲ್ಲದಿರುವುದಕ್ಕೆ ಡಕೋಟಾ ಬಸ್ಸುಗಳೇ ಸಾಕ್ಷಿಯಾಗಿದೆ.
ಮಲೆಮಹದೇಶ್ಚರ ಬೆಟ್ಟ(Male Mahadeshwara Hills)ಕ್ಕೆ ಬರುವ ಭಕ್ತರಿಗಾಗಿಯೇ ಬೆಂಗಳೂರು, ಕನಕಪುರ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ಪ್ರಾಧಿಕಾರದ ವತಿಯಿಂದ ಈ ಹಿಂದೆ 12 ಬಸ್ಸುಗಳು ಸಂಚಾರ ನಡೆಸಿದ್ದವು. ಆದರೆ, ಕ್ರಮೇಣ ಈಗ 4 ಬಸ್ಸುಗಳಾಗಿದ್ದು, ಅವೂ ಕೂಡ ನಿರ್ವಹಣೆ ಕೊರತೆಯಿಂದ ಸೊರಗಿ ಪ್ರಾಣಭೀತಿಯಲ್ಲಿ ಭಕ್ತರು ಸಂಚರಿಸುವ ವಿಪರ್ಯಾಸ ಎದುರಾಗಿದೆ.
ಈಗ ಬೆಂಗಳೂರಿಗೆ ಮೂರು, ಗುಂಡ್ಲುಪೇಟೆ 1 ಬಸ್ ಸಂಚಾರಿಸುತ್ತಿದ್ದು ಬಸ್ಸಿನ ಟೈರ್ ಗಳು ಚಪಾತಿಯಂತಾದರೂ ಪ್ರಾಧಿಕಾರ ಗಮನಹರಿಸಿಲ್ಲ. ಬಸ್ಸಿನಲ್ಲಿ ಸ್ಟೆಪ್ನಿಗಳಿಲ್ಲ ಜೊತೆಗೆ ಬಸ್ಸಿನ ಲಗೇಜ್ ಬಾಕ್ಸ್ ತೂತಾಗಿದ್ದು ಭಕ್ತರು ಕೊಡುವ ತರಕಾರಿ ಕ್ಷೇತ್ರದ ಬದಲು ರಸ್ತೆಪಾಲಾಗುತ್ತಿದೆ.
ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.53 ಕೋಟಿ ರು.ಸಂಗ್ರಹ!
ಕಾಣಿಕೆ ಪ್ರಾಧಿಕಾರಕ್ಕೆ: ಬಸ್ಸು ಗ್ಯಾರೇಜ್ ಮೂಲೆಗೆ
ಅಮಾವಾಸ್ಯೆ, ವಾರಾಂತ್ಯ ಸೇರಿದಂತೆ ವಿಶೇಷ ದಿನಗಳಲ್ಲಿ ಸೇವೆಗಗಳಿಂದಲೇ ಪ್ರಾಧಿಕಾರಕ್ಕೆ ಲಕ್ಷಾಂತರ ಆದಾಯ ಬರುತ್ತಿದೆ. ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆಯಲ್ಲಿ ಸರಾಸರಿ ಒಂದೂವರೆ ಕೋಟಿ ರು.ಗೂ ಹೆಚ್ಚಿನ ಆದಾಯ ಶ್ರೀಕ್ಷೇತ್ರಕ್ಕೆ ಬರುತ್ತಿದ್ದರೂ ಭಕ್ತರಿಗೆ ಕನಿಷ್ಠ ಬಸ್ ಸೌಲಭ್ಯ ಕಲ್ಪಿಸಲು ಪ್ರಾಧಿಕಾರ ನಿರ್ಲಕ್ಷ್ಯವಹಿಸಿದೆ. ಇರುವ ಬಸ್‌ನ್ನೂ ನಿರ್ವಹಣೆ ಮಾಡದೇ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದೆ.
ಮಲೆಮಹದೇಶ್ವರ ಬೆಟ್ಟವನ್ನು ಏರಿ ಹೋಗಬೇಕಿದ್ದು, ಕಡಿದಾದ ದಾರಿಯನ್ನೂ ಹೊಂದಿದೆ. ವಾಹನಗಳು ಎಷ್ಟೇ ಕಂಡಿಷನ್ಸ್ ನಲ್ಲಿದ್ದರೂ ಬೆಟ್ಟಗಳನ್ನು ಏರುವುದು ತುಸು ಕಷ್ಟವೇ. ಈ ರೀತಿ, ಮಾರ್ಗದಲ್ಲಿ ಸವೆದು ಹೋಗಿರುವ ಟೈರ್, ಸ್ಟೆಪ್ನಿ ಗಳಿಲ್ಲದ ಬಸ್, ಮುರಿದು ಬೀಳುವ ಹಂತದಲ್ಲಿರುವ ಚಾಸಿಯ ಡಕೋಟಾ ಬಸ್‌ಗಳಲ್ಲಿ ಮಾದಪ್ಪನ ಭಕ್ತರು ಪ್ರಯಾಣ ಮಾಡುತ್ತಿರುವುದು ದೀಪದ ಕೆಳಗೆ ಕತ್ತಲು ಎಂಬಂತೆ ಕೋಟಿ ಕೋಟಿ ಆದಾಯ ಬಂದರೂ ಭಕ್ತರಿಗೆ ಸೌಕರ್ಯ ಸೊನ್ನೆ ಎಂಬಂತಾಗಿದೆ.
ಸಾವಿರಾರು ರು. ತರಕಾರಿ ಕೊಡುವ ಭಕ್ತರು
ಮಂಡ್ಯ, ರಾಮನಗರ, ಬೆಂಗಳೂರು ಭಾಗದಲ್ಲಿ ಮಲೆಮಹದೇಶ್ವನ ಭಕ್ತರು ಹೆಚ್ಚಿದ್ದು ತಾವು ಬೆಳೆದ ತರಕಾರಿ, ಧಾನ್ಯಗಳನ್ನು ಶ್ರೀಕ್ಷೇತ್ರದ ಅನ್ನದಾಸೋಹಕ್ಕೆ ಈ ಬಸ್ ಮೂಲಕವೇ ಕಳುಹಿಸುತ್ತಾರೆ. ಆದರೆ, ಲಗೇಜ್ ಬಾಕ್ಸ್ ಗಳು ಹಾಳಾಗಿರುವುದರಿಂದ ಭಕ್ತರು ಕೊಡುವ ತರಕಾರಿ, ಧಾನ್ಯ ರಸ್ತೆಯಲ್ಲೇ ಸಾಕಷ್ಟುಸೋರಿ ಹೋಗಲಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಎಲ್ಲವನ್ನೂ ಟಪಾಲಿಗೆ ಹಾಕಲು
ಸಾಧ್ಯವಾಗದಿರುವುದರಿಂದ ಭಕ್ತರು ಕೊಡುವ ಕಾಣಿಕೆ ಮಾದಪ್ಪನ ಬೆಟ್ಟವನ್ನೇ ತಲುಪುತ್ತಿಲ್ಲ ಎನ್ನಲಾಗಿದೆ.
ಶಕ್ತಿ ಯೋಜನೆ ಬಂದನಂತರವೂ ಪ್ರಾಧಿಕಾರದ ಬಸ್ಸುಗಳಿಗೆ ಪ್ರಯಾಣಿಕರು ಕಡಿಮೆಯಾಗಿಲ್ಲ. ಬಸ್‌ಗಳು ತುಂಬಿ ತುಳುಕಿದರೂ ಪ್ರಾಧಿಕಾರ ಮಾತ್ರ ಜಾಣನಿದ್ರೆ ಮಾಡುತ್ತಿದ್ದು, ಭಕ್ತರ ಪ್ರಾಣದ ಜೊತೆ ನಿರ್ಲಕ್ಷ್ಯ ವಹಿಸಿದೆ. ಪ್ರಾಧಿಕಾರದ ಅಧ್ಯಕ್ಷರೂ ಮುಖ್ಯಮಂತ್ರಿ ಆಗಿದ್ದು ಇನ್ನಾದರೂ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ಉತ್ತಮ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ. ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ 'ಕೇಸರಿ' ರಣಕಹಳೆ: ಬಿಜೆಪಿ ದಿಗ್ವಿಜಯ ರಥಯಾತ್ರೆ ಶುರು
ಭಕ್ತರ ದುಡ್ಡಲ್ಲಿ ಉತ್ತಮ ಬಸ್ ಕೊಡಿ
ನಷ್ಟಇದ್ದರೇ ಬೇಡ, ಭಕ್ತರು ಕೋಟ್ಯಾಂತರ ರು. ಕಾಣಿಕೆ ಕೊಡುತ್ತಾರೆ, ಆ ಹಣದಲ್ಲೇ ಉತ್ತಮ ಬಸ್ ಕೊಡಿ, ಇಲ್ಲವೇ ಇರುವ ಬಸ್‌ನ್ನು ಸರಿಯಾಗಿ ನಿರ್ವಹಣೆ ಮಾಡಿ, ಬಸ್ಸಿನ ಟೈರ್ ನೋಡಿದರೆ ಭಯವಾಗಲಿದ್ದು ಮಾದಪ್ಪನ ಮೇಲೆ ಭಾರ ಹಾಕಿ ಬಸ್ ಹತ್ತುತ್ತಿದ್ದೇವೆ, ಈ ಹಿಂದೆ ಆಗಾಗ್ಗೆ ಕಾಣಿಸುತ್ತಿದ್ದ ಬಸ್ ಈಗ 4ಕ್ಕೆ ಬಂದು ನಿಂತಿದೆ.
ಮಹದೇವಸ್ವಾಮಿ, ಚಾಮರಾಜನಗರ ನಿವಾಸಿ