ಮಲೆ ಮಹದೇಶ್ವರ ಬೆಟ್ಟದಲ್ಲಿ 29 ದಿನಗಳ ಹುಂಡಿ ಎಣಿಕೆಯಲ್ಲಿ 2.54 ಕೋಟಿ ರೂ., 69 ಗ್ರಾಂ ಚಿನ್ನ, 2.77 ಕೆಜಿ ಬೆಳ್ಳಿ ಮತ್ತು 6 ವಿದೇಶಿ ನೋಟುಗಳು ಸಂಗ್ರಹವಾಗಿವೆ. ನಿಡಸೋಸಿ ಮಠದ ಪಟ್ಟದ ವಿವಾದ ಮುಂದುವರೆದಿದ್ದು, ಕಿರಿಯ ಶ್ರೀಗಳು ದುಬೈಗೆ ತೆರಳಿದ್ದಾರೆ. ಮೇ 21 ರಂದು ಉಭಯ ಶ್ರೀಗಳ ಸಮ್ಮುಖದಲ್ಲಿ ಮತ್ತೆ ಸಭೆ ನಡೆಯಲಿದೆ.
ಚಾಮರಾಜನಗರ (ಮೇ 16): ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ತೋರಿಸಿರುವ ಅಪಾರ ಶ್ರದ್ಧೆಯ ಹಿನ್ನೆಲೆಯಲ್ಲಿ, ಕಳೆದ 29 ದಿನಗಳಿಂದ ಸಂಗ್ರಹಣೆಯಾದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಬರೋಬ್ಬರಿ 2.54 ಕೋರಿ ರೂಪಾಯಿ ದಾಖಲೆಯ ಮೊತ್ತ ಸಂಗ್ರಹವಾಗಿದೆ.
ಸಾಲೂರು ಶ್ರೀಗಳ ನೇತೃತ್ವದಲ್ಲಿ ನಡೆದ ಈ ಎಣಿಕೆಯಲ್ಲಿ ಭಕ್ತರು ನೀಡಿರುವ ದೇಣಿಗೆ ಹೀಗಿದೆ:
ನಗದು: 2.54 ಕೋಟಿ ರೂಪಾಯಿ ಭಕ್ತರಿಂದ ಸಂಗ್ರಹವಾಗಿದೆ.
ಜೊತೆಗೆ 69 ಗ್ರಾಂ ಚಿನ್ನ ಮತ್ತು 2 ಕೆಜಿ 770 ಗ್ರಾಂ ಬೆಳ್ಳಿ ವಸ್ತುಗಳನ್ನು ದೇವರಿಗೆ ಅರ್ಪಿಸಲಾಗಿದೆ.
ವಿಶೇಷವೆಂದರೆ, ಈ ಬಾರಿ 6 ವಿದೇಶಿ ನೋಟುಗಳು ಕೂಡಾ ಹುಂಡಿಯಲ್ಲಿ ಪತ್ತೆಯಾಗಿವೆ.
ಇದಲ್ಲದೆ, ಎರಡು ಸಾವಿರ ರೂಪಾಯಿ ಮುಖಬೆಲೆಯ 6 ನೋಟುಗಳು ಕೂಡ ಭಕ್ತರು ಹಾಕಿರುವುದು ಗಮನಸೆಳೆಯುತ್ತದೆ. ಈ ದಾಖಲೆಯ ಸಂಗ್ರಹವು ಮಹದೇಶ್ವರಸ್ವಾಮಿಗೆ ಭಕ್ತರು ತೋರಿಸುತ್ತಿರುವ ಅಪಾರ ಶ್ರದ್ಧಾ ಭಕ್ತಿಯ ಪ್ರತೀಕವಾಗಿದೆ. ದೇವಾಲಯದ ಆಡಳಿತ ಮಂಡಳಿಯು ಈ ಹಣವನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಲಿದೆ.
ನಿಡಸೋಸಿ ಮಠದ ಭಕ್ತರ ಮನವಿಗೂ ಕಿವಿಗೊಡದೆ ಮುಂದುವರಿದ ಅಂತರ್ಯುದ್ಧ:
ಬೆಳಗಾವಿ: ಕೋಟಿ ಕೋಟಿ ಆಸ್ತಿಯನ್ನು ಹೊಂದಿರುವ ನಿಡಸೋಸಿ ಮಠದೊಳಗಿನ ಪಟ್ಟದ ವಿಚಾರವಾಗಿ ಉದ್ಬವಿಸಿದ ಅಂತರ್ಯುದ್ಧ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಲಿಂಗಾಯತ ಸಮಾಜದ ನಾಯಕರ ಸಭೆ ಬಳಿಕವೂ ಅಂತರ್ಯುದ್ಧ ನಡೆಯುತ್ತಲೇ ಇದೆ. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಪಟ್ಟದ ವಿಚಾರವಾಗಿ ಭಕ್ತರೊಂದಿಗೆ ಚರ್ಚೆ ಮಾಡದಂತೆ ಮನವಿ ಮಾಡಿದ್ದ ಲಿಂಗಾಯತ ನಾಯಕರು, ಈ ವಿವಾದವನ್ನು ಶಮನ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ, ನಿಜವಾಗಿ ಮಠದೊಳಗಿನ ಬಿಕ್ಕಟ್ಟು ಇನ್ನಷ್ಟು ಗಂಭೀರವಾಗಿದೆ.
ಲಿಂಗಾಯತ ನಾಯಕ ಡಾ. ಪ್ರಭಾಕರ ಕೋರೆ ಉಭಯ ಶ್ರೀಗಳಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು, ಭಕ್ತರ ಭಾವನೆಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ಇದರ ನಡುವೆಯೇ, ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮೀಜಿ ಪಟ್ಟದಿಂದ ಹಿಂಜರಿಯಬಾರದು ಎಂದು ಭಕ್ತರು ಹಿರಿಯ ಶ್ರೀಗಳಿಗೆ ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ನಿಡಸೋಸಿ ಮಠದ ಹಿರಿಯ ಶ್ರೀಗಳು ಪಂಚಮಶಿವಲಿಂಗೇಶ್ವರ ಸ್ವಾಮೀಜಿಗೆ ಕೂಡಾ ಭಕ್ತರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಪೈಪೋಟಿಗೆ ಇಮ್ಮುಡಿ ನೀಡಿದೆ.
ಈ ಗೊಂದಲದ ನಡುವೆ ಕಿರಿಯ ಶ್ರೀಗಳು ದುಬೈ ಪ್ರವಾಸ ಕೈಗೊಂಡಿದ್ದು ಇದೀಗ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಶುಕ್ರವಾರ ಸಂಜೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿದ ನಿಜಲಿಂಗೇಶ್ವರ ಸ್ವಾಮೀಜಿ, ದುಬೈನಲ್ಲಿ ನಡೆಯಲಿರುವ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಪ್ರವಾಸಕ್ಕೂ ಮುನ್ನ, ಅವರು ಹಿರಿಯ ಶ್ರೀಗಳ ಆಶೀರ್ವಾದ ಪಡೆದಿರುವುದೂ ವಿಶೇಷವಾಗಿದೆ. ಇದೆಲ್ಲದರ ನಡುವೆ, ಮೇ 21 ರಂದು ಉಭಯ ಶ್ರೀಗಳ ಸಮ್ಮುಖದಲ್ಲಿ ಲಿಂಗಾಯತ ನಾಯಕರು ಮತ್ತೊಮ್ಮೆ ಸಭೆ ಕರೆದಿದ್ದು, ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಿಡಸೋಸಿ ಮಠದ ಭವಿಷ್ಯ ಏನು ಎನ್ನುವುದು ಲಿಂಗಾಯತ ಸಮಾಜದ ಮಾತ್ರವಲ್ಲ, ರಾಜ್ಯ ರಾಜಕಾರಣಕ್ಕೂ ವಿಶೇಷ ಮಹತ್ವ ಹೊಂದಿದೆ. ಭಕ್ತರ ಭಾವನೆಗಳಿಗೆ ಗೌರವ ನೀಡಿ, ಸುಸೂತ್ರ ನಿರ್ಧಾರವಾಗಬೇಕೆಂಬುದು ಎಲ್ಲರ ಆಶಯವಾಗಿದೆ.


