ಮಲೆ ಮಹದೇಶ್ವರ ಬೆಟ್ಟದ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ; ಭಕ್ತರಿಗೆ ಕಲ್ಲು ಮುಳ್ಳಿನ ಹಾದಿಯೇ ಗತಿ!
ನೂರಾರು ಕಿ.ಮೀ ದೂರದಿಂದ ನಡೆದು ಬರುವ ಭಕ್ತರಿಗೆ ತಾಳಬೆಟ್ಟದಿಂದ ಮೆಟ್ಟಿಲು ವ್ಯವಸ್ಥೆ ಇದ್ದಿದ್ದರೆ ಕಾಲ್ನಡಿಗೆಯಿಂದ ಬೆಟ್ಟ ಹತ್ತುವ ಭಕ್ತರಿಗೆ ವಿಶ್ರಾಂತಿ ಪಡೆಯಲು ಹಾಗು ಸುಲಭವಾಗಿ ಬೆಟ್ಟ ಹತ್ತಲು ಸಹಾಯವಾಗುತ್ತಿತ್ತು. ಹಾಗಾಗಿ ಆದಷ್ಟು ಬೇಗ ಮೆಟ್ಟಿಲುಗಳ ಕಾಮಗಾರಿ ಪುನ: ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಸರ್ಕಾರ ಹಾಗು ಪ್ರಾಧಿಕಾರದಲ್ಲಿ ಭಕ್ತರು ಮನವಿ ಮಾಡುತ್ತಿದ್ದಾರೆ.
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಅ.27): ಮಲೆಯ ಒಡೆಯನ ದರ್ಶನಕ್ಕೆ ಭಕ್ತರು ಗುಂಪು ಗುಂಪಾಗಿ ನಡೆದು ಹೋಗ್ತಾರೆ. ಹರಕೆ ಹೊತ್ತು ನಡೆದು ಹೋಗುವ ಭಕ್ತರೇ ಸಂಖ್ಯೆಯೇ ಹೆಚ್ಚು. ಅದರಲ್ಲೂ ದಟ್ಟ ಕಾನನದ ನಡುವೆ ಕಲ್ಲು, ಮುಳ್ಳಿನ ನೋವಿನ ನಡುವೆಯೂ ದರ್ಶನಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸ್ತಿದ್ರೂ,ಇದನ್ನೆಲ್ಲಾ ಅರಿತ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಹೊಸದಾಗಿ ಮೆಟ್ಟಿಲು ನಿರ್ಮಿಸುವ ಕೆಲಸಕ್ಕೆ ಮುಂದಾಗಿತ್ತು.ಇದೀಗಾ ಏಕಾಏಕಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.
ಹೌದು ಅದು ರಾಜ್ಯದ ದೇಗುಲಗಳ್ಳಲ್ಲೇ ಅತಿ ಹೆಚ್ಚು ಆದಾಯ ಬರುವ ಎರಡನೇ ದೇವಾಲಯ. ಅದು ಬೇರ‌್ಯಾವುದೋ ಅಲ್ಲ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ದೇವಾಲಯ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸ್ತಾರೆ. ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ,ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ.
ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ರು. ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡೋ ಕೆಲಸಕ್ಕೆ ಮುಂದಾಗಿತ್ತು. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ತಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿತ್ತು. ಆದ್ರೆ ಕಾರಣಾಂತರಗಳಿಂದ ಇದೀಗ ಏಕಾಏಕಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಟಾಪ್ ಆಗಿದೆ. ಹಾಗಾಗಿ ಮಾದಪ್ಪನ ದರ್ಶನಕ್ಕೆ ಮತ್ತೆ ಕಲ್ಲು ಮುಳ್ಳು ಹಾದಿಯಲ್ಲೆ ಬೆಟ್ಟ ಹತ್ತಬೇಕಾದ ಅನಿವಾರ್ಯತೆ ಭಕ್ತರಿಗೆ ಎದುರಾಗಿದೆ.
ನೂರಾರು ಕಿ.ಮೀ ದೂರದಿಂದ ನಡೆದು ಬರುವ ಭಕ್ತರಿಗೆ ತಾಳಬೆಟ್ಟದಿಂದ ಮೆಟ್ಟಿಲು ವ್ಯವಸ್ಥೆ ಇದ್ದಿದ್ದರೆ ಕಾಲ್ನಡಿಗೆಯಿಂದ ಬೆಟ್ಟ ಹತ್ತುವ ಭಕ್ತರಿಗೆ ವಿಶ್ರಾಂತಿ ಪಡೆಯಲು ಹಾಗು ಸುಲಭವಾಗಿ ಬೆಟ್ಟ ಹತ್ತಲು ಸಹಾಯವಾಗುತ್ತಿತ್ತು. ಹಾಗಾಗಿ ಆದಷ್ಟು ಬೇಗ ಮೆಟ್ಟಿಲುಗಳ ಕಾಮಗಾರಿ ಪುನ: ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಸರ್ಕಾರ ಹಾಗು ಪ್ರಾಧಿಕಾರದಲ್ಲಿ ಭಕ್ತರು ಮನವಿ ಮಾಡುತ್ತಿದ್ದಾರೆ.
ಇನ್ನು ಮೆಟ್ಟಿಲು ನಿರ್ಮಾಣ ಕಾಮಗಾರಿ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿಯವರನ್ನು ಪ್ರಶ್ನಸಿದ್ರೆ ಶೇ 60 ರಷ್ಟು ಕಾಮಗಾರಿ ಮುಗಿದಿದೆ. ಆದ್ರೆ ಸದ್ಯ ಮೆಟ್ಟಿಲು ಕಾಮಗಾರಿ ನಿಂತು ಹೋಗಿದೆ. ಗುತ್ತಿಗೆ ಪಡೆದಿದ್ದ ವ್ಯಕ್ತಿ ಕೆಲಸ ನಿಲ್ಲಿಸಿದ್ದಾನೆ. ಸಿಎಂ ಸಿದ್ದರಾಮಯ್ಯ ಗಮನಕ್ಕೂ ಕೂಡ ಬಂದಿದೆ. ಇದೀಗ ಮತ್ತೆ ಟೆಂಡರ್ ಕರೆದು ಬೇರೊಬ್ಬ ಗುತ್ತಿಗೆದಾರನಿಗೆ ಕಾಮಗಾರಿ ಕೆಲಸ ವಹಿಸ್ತೇವೆ ಅಂತಾ ಉತ್ತರಿಸ್ತಾರೆ. ಶೀಘ್ರವೇ ಕೆಲಸ ಮುಗಿಸಲು ಕ್ರಮ ವಹಿಸ್ತೇವೆ ಅಂತಾರೆ ಅಧಿಕಾರಿಗಳು.
ಒಟ್ನಲ್ಲಿ ಮುಂಬರುವ ದೀಪಾವಳಿ, ಶಿವರಾತ್ರಿ ವೇಳೆ ಮಲೆ ಮಾದಪ್ಪನ ದರ್ಶನಕ್ಕೆ ನಡೆದು ಭಕ್ತ ಸಾಗರವೇ ಬರುತ್ತೆ. ಈ ಬಾರಿಯಾದರೂ ಮೆಟ್ಟಿಲುಗಳ ಮೇಲೆ ನಡೆಯುವ ಭಕ್ತರ ಆಸೆಗೆ ಪ್ರಾಧಿಕಾರ ತಣ್ಣೀರು ಎರಚಿದೆ. ಈ ಬಾರಿಯೂ ಕಲ್ಲುಮುಳ್ಳುಗಳ ನಡುವೆ ಏಳು ಮಲೆ ಒಡೆಯನ ದರ್ಶನ ಪಡೆಯುವ ಸ್ಥಿತಿ ಬಂದಿದೆ. ಇನ್ನಾದ್ರೂ ಪ್ರಾಧಿಕಾರ ಭಕ್ತರ ಸಂಕಷ್ಟಕ್ಕೆ ಧಾವಿಸುತ್ತಾ,ಕಾಮಗಾರಿ ಬೇಗ ಆರಂಬಿಸಿ ಮುಗಿಸುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.