ಟ್ಯಾಕ್ಸಿ ಚಾಲಕನಿಗೆ ಮೊಬೈಲ್‌ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಆರೋಪದ ಮೇಲೆ ಮಲೆಯಾಳಂ ನಟ ಜಯಕೃಷ್ಣನ್ ಅವರನ್ನು ಮಂಗಳೂರಿನ ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತಾನು ಕುಡಿದಿದ್ದರೂ ತನ್ನ ಸ್ನೇಹಿತ ನಿಂದಿಸಿದ್ದಾಗಿ ನಟ ವಿಚಾರಣೆ ವೇಳೆ ತಿಳಿಸಿದ್ದಾರೆ.

ಮಂಗಳೂರು (ಅ.12): ಟ್ಯಾಕ್ಸಿ ಚಾಲಕನಿಗೆ ಮೊಬೈಲ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ನಿಂದನೆ ಮಾಡಿದ ಆರೋಪದ ಮೇಲೆ ಮಲೆಯಾಳಂ ಹಿರಿಯ ನಟ ಜಯಕೃಷ್ಣನ್ ಅವರನ್ನು ಉರ್ವ ಪೊಲೀಸರು ಶನಿವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅವರೊಂದಿಗೆ ಇದ್ದ ಸಂತೋಷ್ ಅಬ್ರಾಹಂ ಕೂಡ ಪೊಲೀಸರ ವಶದಲ್ಲಿದ್ದು, ಇನ್ನೋರ್ವ ಆರೋಪಿ ವಿಮಲ್ ನಾಪತ್ತೆಯಾಗಿದ್ದಾರೆ.

ಶುಕ್ರವಾರ ರಾತ್ರಿ ಮಂಗಳೂರಿಗೆ ಬಂದಿದ್ದ ನಟ ಜಯಕೃಷ್ಣನ್ ಸೇರಿದಂತೆ ಮೂವರು ಉಬರ್ ಮತ್ತು ರ‍್ಯಾಪಿಡೊ ಕ್ಯಾಪ್ಟನ್‌ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ವಾಹನ ಹತ್ತುವ ಸ್ಥಳವನ್ನು ಬಿಜೈ ನ್ಯೂ ರೋಡ್‌ ಎಂದು ನಮೂದಿಸಿದ್ದರು. ನಾನು ಆ್ಯಪ್‌ ಮೂಲಕ ಕಾಲ್ ಮಾಡಿ ಪಿಕ್ ಆಪ್ ಬಗ್ಗೆ ವಿಚಾರಿಸಿದ್ದೆ. ಆಗ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯು ನನಗೆ ‘ಮುಸ್ಲಿಂ ಉಗ್ರವಾದಿ, ಟೆರರಿಸ್ಟ್’ ಎಂದು ಅಪಹಾಸ್ಯವಾಗಿ ಮಾತನಾಡಿದ್ದ. ಅಲ್ಲದೆ ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ನನ್ನ ತಾಯಿಗೆ ಅವಾಚ್ಯವಾಗಿ ಬೈದಿದ್ದಾನೆ ಎಂದು ಆರೋಪಿಸಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ಉರ್ವ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ:ಮಂಗಳೂರಿನ ಕ್ಯಾಬ್‌ ಚಾಲಕನಿಗೆ ಟೆರರಿಸ್ಟ್‌ ಎಂದ ಸೂಪರ್‌ಸ್ಟಾರ್‌, ಎಫ್‌ಐಆರ್‌ ದಾಖಲು!

ಕಂಠಪೂರ್ತಿ ಕುಡಿದು ಮಾತನಾಡಿದ್ದಾಗಿ ನಟ ಜಯಕೃಷ್ಣನ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ನಾನಲ್ಲ, ವಿಮಲ್‌ ಬೈದಿರುವುದಾಗಿ ಹೇಳಿರುವುದರಿಂದ ನಟನ ವಾಯ್ಸ್ ಸ್ಯಾಂಪಲ್ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.