ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಗಳ ಪ್ರಮುಖ ಆರೋಪಿ, ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕೋರ್ಟ್ ವಾರೆಂಟ್ ಮತ್ತು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ.

ಮಂಗಳೂರು: ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಹಿಂದೂ ಸಂಘಟನೆ ಮುಖಂಡನಾದ ಭರತ್ ಕುಮ್ಡೇಲು ಅವರು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕಳೆದ ಕೆಲವು ತಿಂಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅವರು, ಕೋರ್ಟ್ ಹೊರಡಿಸಿದ ವಾರೆಂಟ್ ಮತ್ತು ಕೋಕಾ ಕಾಯ್ದೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾನೆ.

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಭರತ್ ಕುಮ್ಡೇಲು

ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವ ಜಿಲ್ಲಾ ಕೋರ್ಟ್‌ಗೆ ಭರತ್ ಕುಮ್ಡೇಲು ಕಳೆದ 3–4 ತಿಂಗಳಲ್ಲಿ ಹಾಜರಾಗದೇ ತಪ್ಪಿಸಿಕೊಂಡಿದ್ದರು. ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಅವರ ವಿರುದ್ಧ ನಿರ್ಬಂಧಿತ ವಾರೆಂಟ್ ಹೊರಡಿಸಿತ್ತು. ಇದೇ ವೇಳೆ, ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿಯೂ ಅವರು ತಲೆಮರೆಸಿಕೊಂಡಿದ್ದು, ಪೊಲೀಸರು ಇತ್ತೀಚೆಗೆ ಅವರ ವಿರುದ್ಧವೂ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಾರೆಂಟ್ ಮತ್ತು ಕೋಕಾ ಕಾಯ್ದೆಯಡಿ ದಾಖಲಾಗಿದ್ದ ಕೇಸ್‌ನ ಹಿನ್ನೆಲೆ, ಭರತ್ ಕುಮ್ಡೇಲು ಅವರು ಅಂತಿಮವಾಗಿ ಮಂಗಳೂರಿನ ಜಿಲ್ಲಾ ಕೋರ್ಟ್‌ಗೆ ಹಾಜರಾಗಿದ್ದಾರೆ.

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ – ಕೋಕಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕ್ರಮ

ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯ್ದೆ (KCOCA Act) ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರಾದ ಆರೋಪಿಗಳ ಪಟ್ಟಿ ಹೀಗಿದೆ:

  • ದೀಪಕ್
  • ಚಿಂತನ್
  • ಪ್ರಥ್ವಿರಾಜ್ ಜೋಗಿ
  • ಸುಮಿತ್ ಬಿ. ಆಚಾರ್ಯ
  • ವಿ. ರವಿರಾಜ ಮೂಲ್ಯ
  • ಅಭಿನ್ ರೈ
  • ತೇಜಾಕ್ಷ
  • ರವಿಸಂಜಯ್ ಜಿ.ಎಸ್.
  • ಶಿವಪ್ರಸಾದ್ ತುಂಬೆ
  • ಪ್ರದೀಪ
  • ಶಾಹಿತ್ @ ಸಾಹಿತ್
  • ಸಚಿನ್ @ ಸಚ್ಚು ರೊಟ್ಟಿಗುಡ್ಡೆ
  • ರಂಜಿತ್

ಈ ಎಲ್ಲರ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಹಿಂದೂ ಸಂಘಟನೆ ಮುಖಂಡನ ವಿರುದ್ಧವೂ ಕೋಕಾ ಕಾಯ್ದೆ

ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು, ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಕೋಮು ಸಂಘರ್ಷ ಸೃಷ್ಟಿಸುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಅವರ ವಿರುದ್ಧವೂ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಂಧನದ ಭೀತಿಯಿಂದ ಅವರು ಹಲವು ವಾರಗಳಿಂದ ತಲೆಮರೆಸಿಕೊಂಡಿದ್ದರು.

ಅಶ್ರಫ್ ಕಲಾಯಿ ಹಾಗೂ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಗಳು ರಾಜ್ಯ ಮಟ್ಟದಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಸಂಘಟಿತ ಅಪರಾಧ ವಿರುದ್ಧದ ಕಾನೂನು ಕ್ರಮಗಳು ತೀವ್ರಗೊಂಡಿವೆ. ಪ್ರಮುಖ ಆರೋಪಿಯಾಗಿ ಭರತ್ ಕುಮ್ಡೇಲು ಕೋರ್ಟ್‌ಗೆ ಶರಣಾದ ಘಟನೆ, ಮುಂದಿನ ವಿಚಾರಣೆಯ ಹಂತದಲ್ಲಿ ಮಹತ್ವ ಪಡೆಯಲಿದೆ.