Asianet Suvarna News Asianet Suvarna News

Kuvempu Row; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ

ಕುವೆಂಪು ನಾಡಗೀತೆ ಅವಮಾನಿಸಿರುವ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಪದಚ್ಯುತಗೊಳಿಸುವಂತೆ ಗಣ್ಯರು ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಒತ್ತಡ ಹೇರಿದ್ದಾರೆ.

Writers  leaders  seers mount pressure on Bommai to oust Rohith Chakrathirtha
Author
Bengaluru, First Published May 31, 2022, 10:51 AM IST

ಬೆಂಗಳೂರು(ಮೇ.31): ಕುವೆಂಪು (Kuvempu) ನಾಡಗೀತೆ ಅವಮಾನಿಸಿರುವ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ (Textbook Revision Committee) ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohith Chakrathirtha) ಅವರನ್ನು ಪದಚ್ಯುತಗೊಳಿಸುವಂತೆ ಲೇಖಕರು, ರಾಜಕೀಯ ನಾಯಕರು ಹಾಗೂ ಸಾಹಿತಿಗಳಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. 

ಈ ನಡುವೆ ಕುಪ್ಪಳ್ಳಿಯ (Kuppalli) ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಹಂಪ ನಾಗರಾಜಯ್ಯ (Nadoja Hampa Nagarajaiah) ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರಿಗೆ ಆಗುತ್ತಿರುವ ಅವಮಾನವನ್ನು ನೋಡುತ್ತಾ ಸುಮ್ಮನೆ ಕೂರಲಾಗದು. ರಾಷ್ಟ್ರಕವಿಗಳಿಗೆ ಅವಮಾನ ಮಾಡಿದವರಿಗೆ ಸರ್ಕಾರ ಮಹತ್ವದ ಸ್ಥಾನಗಳನ್ನು ನೀಡಬಾರದು. ಕುವೆಂಪು ಅವರಿಗೆ ಅವಮಾನ ಮಾಡಿದವರ ಮೇಲೆ‌ ಕ್ರಮ ಜರುಗಿಸಬೇಕು. 

BC Nagesh: ನಾಡಗೀತೆ ವಿವಾದ: ಚುಂಚಶ್ರೀಗೆ ನಾಗೇಶ್‌ ವಿವರಣೆ!

ಈ ಬೆಳವಣಿಗೆಯಲ್ಲಿ ಸರಕಾರ ಮೂಕಪ್ರೇಕ್ಷಕರಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ, ನಾಡಗೀತೆಯನ್ನು ಅವಮಾನಿಸುವವರಿಗೆ ಸರಕಾರಿ ಸಮಿತಿಗಳ ಸದಸ್ಯರಾಗಿ ಅವಕಾಶ ಸಿಗುತ್ತದೆ ಎಂಬ ತಪ್ಪು ಸಂದೇಶ ರವಾನಿಸಲಾಗುತ್ತಿದೆ. “ವ್ಯಕ್ತಿಗಳ ಮೇಲಿನ ದಾಳಿಯನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಭರವಸೆ ವ್ಯರ್ಥವಾಯಿತು, ಮತ್ತು ಕುವೆಂಪು ಮತ್ತು ನಾಡಗೀತೆಯ ಅವಮಾನವಾಗುತ್ತಿದ್ದರೂ ಮೌನವಾಗಿರುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ಮುಖ್ಯಮಂತ್ರಿಗಳು ಈ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ನಾಗರಾಜಯ್ಯ ಹೇಳಿದ್ದಾರೆ.

ಆದಿಚುಂಚನಗಿರಿ (Adichunchanagiri) ಮಠದ ಮುಖ್ಯಸ್ಥ ಶ್ರೀ ನಿರ್ಮಲಾನಂದ ಸ್ವಾಮಿಗಳು  ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 'ರಾಷ್ಟ್ರಕವಿ' ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ಅವಮಾನ ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್‌ಗೆ 31ನೇ ರ‍್ಯಾಂಕ್‌!

ಕುವೆಂಪು ಅವರು ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಸರ್ಕಾರ ಅವರಿಗೆ ಕರ್ನಾಟಕ ರತ್ನ ನೀಡಿ ಗೌರವಿಸುವುದರ ಜೊತೆಗೆ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿತು. ಆದರೆ, ಅವರನ್ನು ಅವಮಾನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಜವಾಬ್ದಾರಿಯುತ ಹುದ್ದೆ ನೀಡಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅನುಮತಿ ಹಿಂಪಡೆದ ಇನ್ನೊಬ್ಬ ಸಾಹಿತಿ!: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ 9ನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾದ ತಮ್ಮ ‘ಮನೆಗೆಲಸದ ಹೆಣ್ಣುಮಗಳು’ ಪದ್ಯವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಹಿಂಪಡೆದಿದ್ದಾರೆ. ಇತ್ತೀಚೆಗೆ ಸಾಹಿತಿ ದೇವನೂರ ಮಹಾದೇವ, ಜಿ.ರಾಮಕೃಷ್ಣ ಅವರು ಅನುಮತಿ ಹಿಂಪಡೆದಿದ್ದರು. ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದಿರುವ ಎಸ್‌.ಜಿ.ಸಿದ್ದರಾಮಯ್ಯ, ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣದ ಮೇಲಿನ ಕೋಮುವಾದೀಕರಣವನ್ನು ನೋಡಿದರೆ ಆತಂಕ ಮತ್ತು ಭಯ ಉಂಟಾಗುತ್ತಿದೆ. 

ಪಠ್ಯ ಪರಿಷ್ಕರಣೆಯ ಅಸಂವಿಧಾನಿಕ ನಡವಳಿಕೆಗಳು ಶೈಕ್ಷಣಿಕ ವಾತಾವರಣದಲ್ಲಿ ಅನಾರೋಗ್ಯಕರ ಬೆಳವಣಿಗೆಗಳಾಗಿವೆ. ಕನ್ನಡ ಪರಂಪರೆಗೆ ದುಡಿದ ಮಹನೀಯರಿಗೆ ಮತ್ತು ಕನ್ನಡ ಪರಂಪರೆಗೆ ಧಕ್ಕೆ ಎಸಗುತ್ತಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಎಸಗಿದ ದ್ರೋಹದ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಒಂದು ಕವಿತೆ ‘ಮನೆಗೆಲಸದ ಹೆಣ್ಣುಮಗಳು’ 9ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿದೆ. ಅದನ್ನು ಪಠ್ಯವಾಗಿ ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios