ಬೆಂಗಳೂರಿನ ಪ್ರಮುಖ ವ್ಯಾಪಾರಿ ಸ್ಥಳಗಳು ಮತ್ತು ಕೆಂಪೇಗೌಡರು ನಿರ್ಮಿಸಿದ ಮೂಲ ಬಡಾವಣೆಗಳು ಪರಭಾಷಿಕರ ಪಾಲಾಗುತ್ತಿವೆ. ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಉತ್ತರ ಭಾರತದ ವ್ಯಾಪಾರಿಗಳು ಕನ್ನಡಿಗರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.

ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಮಾರವಾಡಿಗಳು, ಉತ್ತರ-ಭಾರತದವರದ್ದೇ ಪಾರುಪತ್ಯ । ಜಾಗ ಖರೀದಿಯಲ್ಲೂ ಇವರದ್ದೇ ಕಾರುಬಾರು

ಉಮಾಶಂಕರ ಕಾರ್ಯ

ಬೆಂಗಳೂರು (ನ.5): ರಾಜ್ಯಕ್ಕೆ ವ್ಯಾಪಾರಕ್ಕೆಂದು ಬಂದ ಪರಭಾಷಿಕರು ಬೆಂಗಳೂರಿನಲ್ಲಿ ವಸಾಹತು ನಿರ್ಮಿಸಿಕೊಳ್ಳುತ್ತಿರುವುದರ ಪರಿಣಾಮ ಕೆಂಪೇಗೌಡರ ಮೂಲ ಬೆಂಗಳೂರಿನ ಬಡಾವಣೆಗಳು ಪರಭಾಷಿಕರ ಬೆಂಗಳೂರಾಗಿ ಮಾರ್ಪಾಡಾಗಿವೆ.

ನಗರದ ಹಲಸೂರು ಗೇಟ್, ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶ, ಚಿಕ್ಕಪೇಟೆ, ಅಕ್ಕಿಪೇಟೆ, ಬಳೇಪೇಟೆ, ರಾಗಿಪೇಟೆಗಳೆಲ್ಲಾ ಮಾಯವಾಗಿ ಈಗ ಎಲ್ಲಾ ಮಾರವಾಡಿಗಳು, ಇತರೆ ವ್ಯಾಪಾರಿಗಳ ಮನೆ, ವ್ಯಾಪಾರದ ಸ್ಥಳಗಳಾಗಿವೆ. ಈ ಪ್ರದೇಶಗಳಲ್ಲಿ ಇದ್ದ ಮೂಲ ಕನ್ನಡಿಗರ ಕುಟುಂಬಗಳು, ಕೈಮಗ್ಗ ನೇಕಾರರು ಇಂದು ಕಾಣೆಯಾಗಿ ಇಲ್ಲಿ ಉತ್ತರ-ಭಾರತದ ವ್ಯಾಪಾರಿಗಳ ಕುಟುಂಬಗಳೇ ತುಂಬಿ ಹೋಗಿವೆ.

ಮೊದಲು ಅಂಗಡಿಯನ್ನು ಬಾಡಿಗೆಗೆ ಪಡೆಯುವ ವ್ಯಾಪಾರಿಗಳು ನಂತರ ಹೆಚ್ಚು ಮುಂಗಡ ಹಣ ನೀಡುವ ಮೂಲಕ ಆ ಜಾಗಕ್ಕೆ ಅಡಿ ಇಡುತ್ತಾರೆ. ಸ್ಥಳೀಯರು ಆ ಜಾಗ ಚದರ ಅಡಿಗೆ 5 ಸಾವಿರ ರೂಪಾಯಿ ಬೆಲೆಬಾಳುತ್ತದೆ ಎಂದು ಹೇಳುತ್ತಿದ್ದರೆ, ಇವರು 10 ಸಾವಿರ ಹಣ ಕೊಟ್ಟು ಖರೀದಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದು ನಿವೇಶನ 50 ಲಕ್ಷ ರೂಪಾಯಿ ಬೆಲೆಬಾಳುತ್ತಿದ್ದರೆ, ಇವರು 1 ಕೋಟಿ ರುಪಾಯಿ ಬೆಲೆಗೆ ಖರೀದಿಸುತ್ತಾರೆ. ಆದರೆ, ಆ ಒಂದು ಕೋಟಿಯನ್ನು ನಾಲ್ಕು ಮಂದಿ ಸ್ನೇಹಿತರು ಅಥವಾ ಸಹೋದರರು ಹಂಚಿಕೊಳ್ಳುತ್ತಾರೆ. ಒಬ್ಬರ ಪಾಲು ಕೇವಲ 25 ಲಕ್ಷ ರುಪಾಯಿಗಳು. ಆ ನಾಲ್ಕು ಮಂದಿಗೂ ನಾಲ್ಕು ಮಹಡಿಗಳ ವಸತಿ ಸಮುಚ್ಛಯ ನಿರ್ಮಾಣದ ಲೆಕ್ಕಾಚಾರ ಮಾಡುತ್ತಾರೆ. 1.5 ಕೋಟಿ ನಿರ್ಮಾಣ ವೆಚ್ಚವಾದರೆ, ಅದನ್ನೂ ನಾಲ್ಕು ಮಂದಿ ಸೇರಿ ಬಂಡವಾಳ ಹೂಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಮನೆಯಂತೆ ನಾಲ್ಕು ಅಂತಸ್ತುಗಳ ವಸತಿ ಸಮುಚ್ಛಯ ನಿರ್ಮಾಣ ಮಾಡುತ್ತಾರೆ. ಅಲ್ಲಿಗೆ ಒಂದು ನಿವೇಶನದ ಬೆಲೆ, ನಿರ್ಮಾಣ ವೆಚ್ಚ ಎಲ್ಲಾ ಸೇರಿ 62.5 ಲಕ್ಷಕ್ಕೆ ಐಷಾರಾಮಿ ಮನೆಯಲ್ಲಿ ವಾಸ ತಮ್ಮದಾಗಿಸಿಕೊಳ್ಳುತ್ತಾರೆ.

ನಿಯಮಾವಳಿಗಳಿಗೆ ಇವರ ಬಳಿ ಬೆಲೆಯೇ ಇಲ್ಲ:

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮೂರು ಅಂತಸ್ತಿಗಿಂತ ಹೆಚ್ಚು ವಾಸದ ಮನೆ ನಿರ್ಮಿಸುವಂತಿಲ್ಲ. ಆದರೆ, ಈ ವ್ಯಾಪಾರಿಗಳು ತಮ್ಮ ಸಂಬಂಧಿಕರಿಗಾಗಿ ನಿರ್ಮಿಸುವ ಮನೆಗಳಿಗೆ ಯೋಜನೆ ಮಂಜೂರಾತಿ ಪಡೆಯುವುದೇ ಇಲ್ಲ. ಕಟ್ಟಡ ನಿಯಮಾವಳಿಗಳನ್ನು ಇವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾಲ್ಕು, ಐದು, ಆರು ಅಂತಸ್ತಿನ ವಸತಿ ಸಮುಚ್ಛಯಗಳೂ ನಿರ್ಮಾಣವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತನಗರದ ಗುರು ಅಭಿಪ್ರಾಯಪಡುತ್ತಾರೆ.

ಇವರ ಆಮಿಷಕ್ಕೆ ಒಳಗಾಗುವ ಕುಟುಂಬಗಳು ಹೆಚ್ಚಿನ ಹಣ ನೀಡಿ ಭೋಗ್ಯಕ್ಕೆ ನೀಡುತ್ತಾರೆ. ಅಷ್ಟು ಮೊತ್ತ ಪಡೆಯುವ ಕನ್ನಡಿಗ ಕುಟುಂಬಗಳು ವ್ಯಾಪಾರಿಗಳು ನೀಡುವ ಹಣವನ್ನು ಮಕ್ಕಳ ಮದುವೆ, ಹಬ್ಬಕ್ಕೆ ವೆಚ್ಚ ಮಾಡಿ ಅಂತಿಮವಾಗಿ ನಗರದಿಂದ ಹೊರಗೆ ಹೋಗಿ ಜೀವನ ನಡೆಸುತ್ತಿದ್ದಾರೆ.

ಐದರಿಂದ ಏಳು ಅಂತಸ್ತಿನವರೆಗೆ ಮನೆ ನಿರ್ಮಿಸಿ ಸುಲಭದಲ್ಲಿ ಕನ್ನಡದ ಭೂಮಿಯನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳುವ ಜಾಲವೇ ಇಡೀ ರಾಜ್ಯದಾದ್ಯಂತ ಹರಡಿಕೊಂಡಿದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಕಂಡು ಬಂದಿದ್ದು, ರಾಜ್ಯದ ಪ್ರಮುಖ ವ್ಯಾಪಾರ ನಗರಗಳಲ್ಲೂ ಇದೇ ಉಪಾಯ ಬಳಸಿ ಎಲ್ಲಾ ಪ್ರಮುಖ ನಿವೇಶನಗಳನ್ನು ಬೃಹತ್ ವಸತಿ ಸಮುಚ್ಚಯಗಳನ್ನಾಗಿ ಮಾಡಿಕೊಂಡು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಬೆಂಗಳೂರು ಪಾಲಿಕೆಯ ಅಧಿಕಾರಿಗಳು, ವ್ಯಾಪಾರಿಗಳು ನೀಡುವ ಲಂಚದ ಆಮಿಷಕ್ಕೆ ಬಲಿಯಾಗಿ ಪರಭಾಷಿಕರಿಗೆ ಗೊತ್ತಿಲ್ಲದ ರಾಜ್ಯದ ಕಾನೂನುಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನುವ ಉಪಾಯಗಳನ್ನೂ ಹೇಳಿಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರು, ನಾಲ್ಕು ದಿಕ್ಸೂಚಿ ಗೋಪುರಗಳಾದ ಉತ್ತರದ ಗಡಿ ಮೇಖ್ರಿ ವೃತ್ತದ ಬಳಿಯ ರಮಣ ಮಹರ್ಷಿ ಉದ್ಯಾನದ ಗೋಪುರ. ದಕ್ಷಿಣದ ಗಡಿ ಲಾಲ್‌ಬಾಗ್ ಗುಡ್ಡದ ಮೇಲಿರುವ ಪ್ರಸಿದ್ಧ ಗೋಪುರ, ಪೂರ್ವದ ಗಡಿ ಹಲಸೂರು ಕೆರೆ ಬಳಿ (ಪ್ರಸ್ತುತ ಮದ್ರಾಸ್ ಸ್ಯಾಪರ್ಸ್ ಸೇನಾ ವಲಯದಲ್ಲಿದೆ) ಇರುವ ಗೋಪುರ, ಪಶ್ಚಿಮದ ಗಡಿ ಚಾಮರಾಜಪೇಟೆ ಕೆಂಪಾಂಬುಧಿ ಕೆರೆ ಬಳಿಯ ಗುಡ್ಡದ ಮೇಲಿರುವ ಗೋಪುರ ನಿರ್ಮಿಸಿ ಕನ್ನಡಿಗರ ಹೆಮ್ಮೆಯ ಬೆಂಗಳೂರು ಸ್ಥಾಪಿಸಿದ್ದರು.

ಈಗ ಈ ಪ್ರದೇಶಗಳ ಶೇ.65ರಷ್ಟು ಪಾಲು ಪರಭಾಷಿಕರು, ಮಾರವಾಡಿಗಳ ಪಾಲಾಗಿವೆ. ವಾಣಿಜ್ಯ ಪೇಟೆಗಳನ್ನಾಗಿ ಕೋಟೆಯ ಒಳಗಿನ ವ್ಯಾಪ್ತಿಯಲ್ಲಿ ವಿವಿಧ ವೃತ್ತಿಗಳಿಗೆ ಅನುಗುಣವಾಗಿ 64 ಪೇಟೆಗಳನ್ನು ನಿರ್ಮಿಸಲಾಯಿತು. ಚಿಕ್ಕಪೇಟೆ, ಬಳೇಪೇಟೆ, ಅಕ್ಕಿಪೇಟೆ, ರಾಗಿಪೇಟೆ ಮುಂತಾದವು ಪ್ರಮುಖವಾಗಿದ್ದವು. ಇಲ್ಲೆಲ್ಲಾ ಆಯಾ ಸಮುದಾಯದ ಜನರು ಅವರ ಕುಲ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಗರದ ಕೇಂದ್ರ ಬಿಂದುವಾಗಿ ಚಿಕ್ಕಪೇಟೆ ದೊಡ್ಡಪೇಟೆ ರಸ್ತೆ (ಪ್ರಸ್ತುತ ಅವೆನ್ಯೂ ರಸ್ತೆ) ಇದ್ದವು. ಈಗ ಈ ಪ್ರದೇಶಗಳೆಲ್ಲಾ ಮಾರವಾಡಿಗಳು, ತಮಿಳರ ಪಾಲಾಗಿವೆ ಎಂದು ಅವರು ವಿವರಿಸಿದರು.

ಪರಭಾಷಿಕರ ವಿರುದ್ಧ ಏಕಾಂಗಿ ಹೋರಾಟಗಾರ:

ಕಾನೂನು ಉಲ್ಲಂಘಿಸಿ, ನಿಯಮಾವಳಿ ಉಲ್ಲಂಘಿಸಿ ಮೂರು ಅಂತಸ್ತಿನ ಅಕ್ರಮ ಕಟ್ಟಡ ನಿರ್ಮಿಸುವುದರ ವಿರುದ್ಧ ಹೋರಾಟವನ್ನು ನನ್ನ ಸ್ನೇಹಿತರ ಸಹಕಾರ ಪಡೆದು ಏಕಾಂಗಿಯಾಗಿ ಮಾಡುತ್ತಿದ್ದೇನೆ. ಕೆಂಪೇಗೌಡರ ಬೆಂಗಳೂರು ಭೂಮಿಯ ರಕ್ಷಣೆ ಮಾಡಬೇಕೆಂದು ನನ್ನ ಸ್ವಂತ ಖರ್ಚಿನಲ್ಲಿ ನ್ಯಾಯಾಲಯದಲ್ಲಿ ಇಂತಹ ವ್ಯಾಪಾರಿಗಳು, ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಆದರೆ, ನಮ್ಮನ್ನು ಆಳುತ್ತಿರುವ ಸರ್ಕಾರಗಳು ನಮ್ಮ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂಬುದೇ ನನಗೆ ಬೇಸರದ ಸಂಗತಿ ಎಂದು ಗುರು ಅಭಿಪ್ರಾಯಪಟ್ಟರು.