ಉತ್ತರ ಕನ್ನಡದಲ್ಲಿ ವಿರೋಧಕ್ಕೆ ಕಾರಣವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಸ್ಥಗಿತಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರವೇ ಕೈಗೊಳ್ಳಬೇಕು ಎಂದು ಎನ್ಡಬ್ಲ್ಯುಡಿಎ ಸ್ಪಷ್ಟಪಡಿಸಿದೆ. ಯೋಜನೆಯ ಹಣಕಾಸು ವ್ಯವಸ್ಥೆ ಅನುಷ್ಠಾನದ ಹಂತದಲ್ಲಿ ಅಂತಿಮಗೊಳ್ಳಲಿದೆ ಎಂದು ತಿಳಿಸಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿರುವ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರವೇ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯುಡಿಎ) ಸ್ಪಷ್ಟಪಡಿಸಿದೆ. ಅಲ್ಲದೆ, ಯೋಜನೆಯ ಅನುಷ್ಠಾನದ ಹಂತದಲ್ಲಿ ಮಾತ್ರ ಹಣಕಾಸು ವ್ಯವಸ್ಥೆ ಅಥವಾ ಅನುದಾನದ ಮಾದರಿ ಅಂತಿಮ ರೂಪ ಪಡೆಯಲಿದೆ ಎಂದು ತಿಳಿಸಿದೆ.
ಈ ಕುರಿತು ಉತ್ತರ ಕನ್ನಡದ ಡಾ. ರವಿಕಿರಣ ಪಟವರ್ಧನ ಅವರಿಗೆ ನ. 3ರಂದು ಪತ್ರ ಬರೆದಿರುವ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಶಾಜತಾನನ್ ಕೆ.ಎಚ್., ಬೇಡ್ತಿ- ವರದಾ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಮಾತ್ರ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಡಾ. ರವಿಕಿರಣ ಪಟವರ್ಧನ ಅವರು ಅ. 25ರಂದು ಪ್ರಧಾನಮಂತ್ರಿ ಕಚೇರಿ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ಹಾಗೂ ಅ. 26ರಂದು ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದ್ದ ಮನವಿಗಳಿಗೆ ಉತ್ತರವಾಗಿ ಈ ಪತ್ರ ಬಂದಿದೆ.
ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಯೋಜನೆಯಡಿ ಬರುವ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ತುಂಗಭದ್ರಾ ಜಲಾಶಯವನ್ನು ಪರಿಗಣಿಸಲಾಗಿದ್ದ ಯೋಜನೆಯನ್ನು ಬದಲಿಸಿ, ಯಲ್ಲಾಪುರ ತಾಲೂಕಿನ ಹಿರೇವಡ್ಡತ್ತಿ ಗ್ರಾಮದಲ್ಲಿ ಜಲಸಂಗ್ರಹಣಾ ಜಲಾಶಯ ನಿರ್ಮಿಸುವ ಪ್ರಸ್ತಾವನೆ ರೂಪಿಸಲಾಗಿದೆ. ಜತೆಗೆ ನೀರು ಸಾಗಣೆಗಾಗಿ ಎರಡು ಪರ್ಯಾಯ ವ್ಯವಸ್ಥೆಗಳನ್ನು ಪರಿಗಣಿಸಲಾಗಿದೆ.
ಹಿರೇವಡ್ಡತ್ತಿ ಜಲಾಶಯವನ್ನು ಒಳಗೊಂಡ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು(ಪಿಎಫ್ಆರ್) 2025ರ ಆ.12ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಬಳಿಕ ರಾಜ್ಯದ ಜಲಸಂಪನ್ಮೂಲ ಇಲಾಖೆಯು ಮಾರ್ಪಡಿಸಿದ ಬೇಡ್ತಿ- ವರದಾ(ಹಿರೇವಡ್ಡತ್ತಿ) ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಒಪ್ಪಿಗೆ ನೀಡಿತ್ತು. ಡಿಪಿಆರ್ ತಯಾರಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 2025ರ ಡಿ. 23ರಂದು ಒಪ್ಪಂದವೂ(ಎಂಒಯು) ಸಹಿ ಆಗಿತ್ತು.
ಸದ್ಯ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆ ಮುಂದುವರಿದಿದೆ. ಇದನ್ನು ಸ್ಥಗಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂಬುದು ಎನ್ಡಬ್ಲ್ಯುಡಿಎ ಪತ್ರದ ಪ್ರಮುಖ ಅಂಶವಾಗಿದೆ. ಯೋಜನೆಗೆ ಅನುದಾನ ಒದಗಿಸುವ ವಿಧಾನ ಅಥವಾ ಹಣಕಾಸಿನ ಹೊಣೆಗಾರಿಕೆ ಕುರಿತು ಈಗಲೇ ಯಾವುದೇ ನಿರ್ಧಾರವಾಗಿಲ್ಲ. ಯೋಜನೆ ಅನುಷ್ಠಾನದ ಹಂತಕ್ಕೆ ಬಂದಾಗ ಮಾತ್ರ ಈ ವಿಷಯ ಅಂತಿಮಗೊಳ್ಳಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯದ ನಿರ್ಧಾರವೇ ನಿರ್ಣಾಯಕ:
ಬೇಡ್ತಿ- ವರದಾ ಯೋಜನೆಯಿಂದ ಜಿಲ್ಲೆಯ ಪರಿಸರ, ಅರಣ್ಯ, ನದಿ ಹಾಗೂ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜಿಲ್ಲೆಯಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಎನ್ಡಬ್ಲ್ಯುಡಿಎಯ ಈ ಸ್ಪಷ್ಟನೆ ಮಹತ್ವ ಪಡೆದಿದೆ. ಡಿಪಿಆರ್ ಸ್ಥಗಿತಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರದ ಹೆಗಲಿಗೆ ವರ್ಗಾಯಿಸಿರುವ ಹಿನ್ನೆಲೆ, ರಾಜ್ಯ ಸರ್ಕಾರ ಮುಂದಿನ ಹೆಜ್ಜೆ ಏನು ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.






