Asianet Suvarna News Asianet Suvarna News

ಬರೀ ಕೋಮು ಭಾಷಣ ಬಿಟ್ಟು ನೀವೇನು ಮಾಡಿದ್ದೀರಿ?, ಭಟ್ಕಳ ಶಾಸಕ ಸುನೀಲ್‌ ನಾಯ್ಕ್‌ಗೆ ತಂಝೀಮ್‌ ಪ್ರಶ್ನೆ

ರಾಜಕೀಯ ಲಾಭಕ್ಕೆ ಎರಡು ಧರ್ಮಗಳ ನಡುವೆ ಹುಳಿ ಹಿಂಡುವ ಕೆಲಸ ಮಾಡಬೇಡಿ. 2018ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕೋಮು ಭಾಷಣ ಬಿಟ್ಟು ನೀವೇನು ಮಾಡಿದ್ದೀರಿ ಎಂದು ಭಟ್ಕಳದ ತಂಝೀಮ್‌ ಸಂಸ್ಥೆ ಮಹಾದ್ವಾರದ ವಿಚಾರದಲ್ಲಿ ಭಟ್ಕಳ-ಹೊನ್ನಾವರ ಶಾಸಕ ಸುನೀಲ್‌ ನಾಯ್ಕ್ ಅವರಿಗೆ ಪ್ರಶ್ನೆ ಮಾಡಿದೆ.
 

Majlis e Islah wa Tanzeem Bhatkal Slams Bhatkal Honnavar MLA Sunil Naik for politicizing Mahadwara san
Author
First Published Sep 21, 2022, 2:50 PM IST

ಭಟ್ಕಳ (ಸೆ. 21): ಭಟ್ಕಳದ ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ನಿರ್ಮಾಣಕ್ಕೆ ಸಂಬಂಧಿಸಿ ತಂಝೀಮ್ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ ಹಾಗೂ ಪುರಸಭೆಗೆ ದೂರನ್ನೂ ನೀಡಿಲ್ಲ. ಆದರೆ, ಶಾಸಕ ಸುನೀಲ್ ನಾಯ್ಕ್ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ತಂಝೀಮ್ ಸಂಸ್ಥೆಯನ್ನು ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿರುವ ತಂಝೀಮ್ ಸಂಸ್ಥೆ, ಶಾಸಕರ ವಿರುದ್ಧ ಕಿಡಿಕಾರಿದೆ. ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ನಿರ್ಮಾಣ ಸಂಬಂಧಿಸಿದಂತೆ ಉಂಟಾದ ವಿವಾದದಲ್ಲಿ ಶಾಸಕ ಸುನೀಲ್ ನಾಯ್ಕ್ ಉದ್ದೇಶಪೂರ್ವಕವಾಗಿ ತಂಝೀಮ್ ಸಂಸ್ಥೆ ಹಾಗೂ ಇಸ್ಲಾಂ ಧರ್ಮವನ್ನು ಎಳೆದು ತರುತ್ತಿದ್ದಾರೆ. ಇಂತಹ ಸಣ್ಣ ಮನಸ್ಥಿತಿ ರಾಜಕಾರಣ ಶೋಭೆ ತರುವಂತಹದ್ದಲ್ಲ ಎಂದು ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವಾಝ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರವೀದ್, ಎಂ.ಜೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಂಝೀಮ್ ಸಂಸ್ಥೆ ಯಾವಾಗಲೂ ಸೌಹಾರ್ದತೆ, ಶಾಂತಿಯಿಂದ ಪರಸ್ಪರ ಕೂಡಿ ಬಾಳುವಂತೆ ಮಾಡಿದ ಇತಿಹಾಸ ಹೊಂದಿದೆ ಹೊರತು ವಿನಾಕಾರಣ ನಿಮ್ಮ ಹಾಗೆ ಇತರರ ಧಾರ್ಮಿಕ ನಂಬಿಕೆಯ ವಿಷಯದಲ್ಲಿ ಮೂಗು ತೂರಿಸುವುದು ತಂಝೀಮ್ ಮತ್ತು ಮುಸ್ಲಿಂ ಸಮುದಾಯದ ಜಾಯಮಾನವಲ್ಲ. ನೀವು ಬೇಕಾದರೆ ನಿಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಿಕೊಳ್ಳಿ. ಇಲ್ಲಿನ ಹಿಂದೂ-ಮುಸ್ಲಿಮರ ನಡುವೆ ಹುಳಿ ಹಿಂಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದು ತಿಳಿದುಕೊಂಡರೆ ಅದು ನಿಮ್ಮ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾನೂನು ಪ್ರಕಾರ ಎಲ್ಲಿ ಬೇಕಾದರೂ ಮಹಾದ್ವಾರ ಕಟ್ಟಿಕೊಳ್ಳಿ: ನೀವು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯ ಕೋಮು ಪ್ರಚೋದಕ ಮಾತುಗಳನ್ನು ಆಡುತ್ತಾ ಬಂದಿದ್ದೀರಿ. ಕ್ಷೇತ್ರದ ಅಭಿವೃದ್ಧಿಯ ಕೆಲಸ ಬಿಡಿ, ನಿಮಗೆ ಓಟು ಕೊಟ್ಟು ನಿಮ್ಮನ್ನು ಆರಿಸಿಕೊಟ್ಟ ಜನರನ್ನೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ, ಎಲ್ಲೆಂದರಲ್ಲಿ ಮೂಗು ತೂರಿಸುತ್ತ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಈಗ ಚುನಾವಣೆಗೆ ಕೇವಲ ಕೆಲವು ತಿಂಗಳು ಬಾಕಿ ಇರಬೇಕಾದರೆ ಮಹಾದ್ವಾರದ ನಿರ್ಮಾಣದ ನಾಟಕವಾಡುತ್ತಿದ್ದೀರಿ. ಮಹಾದ್ವಾರ ನಿರ್ಮಾಣಕ್ಕೆ ತಂಝೀಮ್ ಆಗಲಿ ಮುಸ್ಲಿಮ್ ಸಮುದಾಯವಾಗಲಿ ಯಾವತ್ತೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಮುಂದೆಯೂ ಆಕ್ಷೇಪಿಸುವುದಿಲ್ಲ. ಪುರಸಭೆಯಲ್ಲಿ ಕಾನೂನು ಪ್ರಕಾರ ಅಧಿಕೃತವಾಗಿ ಅನುಮತಿ ಪಡೆದು ನೀವು ಎಲ್ಲಿ ಬೇಕಾದರೂ ಏನು ಬೇಕಾದರೂ ಕಟ್ಟಿಕೊಳ್ಳಿ. ಅಮಾಯಕ ಹಿಂದೂ ಸಹೋದರರನ್ನು ನೀವು ಯಾಮಾರಿಸುವುದನ್ನು ಬಿಟ್ಟುಬಿಡಿ. ಮುಂದೆ ನೀವು ಆಯ್ಕೆಯಾಗುತ್ತೀರೋ ಅಥವಾ ನಿಮಗೆ ಟಿಕೆಟು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಉಳಿದ ದಿನಗಳಷ್ಟಾದರೂ ಸ್ವಲ್ಪ ಜನಹಿತ ಕಾರ್ಯಗಳನ್ನು ಮಾಡಿ ಭಟ್ಕಳ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಿ. ಅದನ್ನು ಬಿಟ್ಟು ತಂಝೀಮ್ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸಂಬಂಧ ಪಡೆದ ವಿಷಯಗಳಲ್ಲಿ ವಿವಾದಗಳನ್ನು ತಮ್ಮ ಮೈಮೇಲೆ ಹಾಕಿಕೊಳ್ಳಬೇಡಿ ಎಂದು ತಂಝೀಮ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ಸಂದರ್ಭದಲ್ಲಿ ಹಿಂದೂ (Hindu) ಬಾಂಧವರ ಧಾರ್ಮಿಕ ವಿಷಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅವರನ್ನು ಗೌರವಿಸುತ್ತ ಬಂದಿರುವ ನೂರಾರು ವರ್ಷಗಳ ಇತಿಹಾಸ ನಮ್ಮದು. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಹ ಕೊಡಬಹುದು. ಚನ್ನಪಟ್ಟಣ ಹನುಮಂತ (Chennapattana Hanumantha Temple) ದೇವಸ್ಥಾನವಾಗಲಿ, ಮಾರಿಕಟ್ಟೆ ದೇವಸ್ಥಾನವಾಗಲಿ ಇಲ್ಲಿನ ಹಿಂದೂ-ಮುಸ್ಲಿಂ ಪರಸ್ಪರ ಸಹಕಾರದಿಂದಲೇ ನಡೆಯುತ್ತಾ ಬಂದಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಲ್ಲದೇ, ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ಮುಂದಿನ ರಸ್ತೆಯ ತಿರುವು ನಿರ್ಮಾಣ ಮಾಡಿದಾಗಲೂ ನಾವು ಯಾವುದೇ ಆಕ್ಷೇಪಗಳನ್ನು ಎತ್ತಿಲ್ಲ. ಅಲ್ಲಿ ನಿಜಕ್ಕೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೂ ಕೂಡ ನಾವು ಸಹಿಸಿಕೊಂಡು ಬಂದಿದ್ದೇವೆ. ಇದು ಇಲ್ಲಿನ ನಾಮಧಾರಿ ಸಮುದಾಯ ನಮ್ಮ ಮೇಲೆ ಹೊಂದಿರುವ ಪ್ರೀತಿ, ವಿಶ್ವಾಸದ ಫಲವಾಗಿದೆ. ಈಗ ನೀವು ರಾಜಕೀಯ ದುರ್ಲಾಭದ ಉದ್ದೇಶದಿಂದ ಜವಾಬ್ದಾರಿತ ಸ್ಥಾನದಲ್ಲಿದ್ದು ಹೀಗೆಲ್ಲಾ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಜನರು ಹಾಗೂ ಭಗವಂತ ನಿಮಗೆ ಕ್ಷಮಿಸುವುದಿಲ್ಲ. ನೀವು ಕಾನೂನು ರೀತಿಯಲ್ಲಿ ದ್ವಾರ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡು ನಿರ್ಮಾಣ ಮಾಡಿ ಎಂದು ಹೇಳಿದೆ.

ಭಟ್ಕಳದಲ್ಲಿ ಭುಗಿಲೆದ್ದ ದೇವಸ್ಥಾನ ಮಹಾದ್ವಾರ V/s ಟಿಪ್ಪು ಗೇಟ್ ನಿರ್ಮಾಣ ವಿವಾದ

ಇದರಲ್ಲಿ ತಂಝೀಮ್, ಪುರಸಭೆಯ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಅದೂ ಅಲ್ಲದೇ, ನಿಮ್ಮ ದೇವಸ್ಥಾನದ (Nichal Makki Temple Gate) ಪ್ರದೇಶದಲ್ಲಿ ನೀವು ದ್ವಾರ ನಿರ್ಮಾಣ ಮಾಡಿಕೊಂಡರೆ ನಮಗೆ ಯಾವುದೇ ಅಭ್ಯಂತರವಿಲ್ಲ. ಅಲ್ಲದೇ, ಸುಲ್ತಾನ್ ಸ್ಟ್ರೀಟ್ ನಲ್ಲಿ ಟಿಪ್ಪು ಗೇಟ್ ನಿರ್ಮಾಣಕ್ಕಾಗಿ ಮಾಡುತ್ತಿರುವ ಪ್ರಯತ್ನಕ್ಕೆ ನಮ್ಮ ಯಾವುದೇ ರೀತಿಯ ಸಮರ್ಥನೆಯೂ ಇಲ್ಲ. ಶಾಸಕರು ಪದೇ- ಪದೇ ಪಾಕಿಸ್ತಾನ ಹಿಂದೂಸ್ಥಾನ ಎಂದು ಅಮಾಯಕರನ್ನು ಯಾಮಾರಿಸಬಾರದು. ನಾವು ಅಪ್ಪಟ ಭಾರತೀಯರು, ನಮಗೆ ಭಾರತ ನಿಮಗಿಂತಲೂ ಹೆಚ್ಚು ಶ್ರೇಷ್ಠ. ನೀವು ಕೇವಲ ಮಾತಿನ ಮೂಲಕ ಭಾರತೀಯ ಅಷ್ಟೇ. ನಾವು ನಮ್ಮ ಹೃದಯದಿಂದ ಭಾರತವನ್ನು, ಇಲ್ಲಿನ ಭೂಮಿಯನ್ನು ಪ್ರೀತಿಸುತ್ತೇವೆ ಎಂದು ತಂಝೀಮ್‌ ಅಧ್ಯಕ್ಷ ಹೇಳಿದ್ದಾರೆ.

ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಬಾಲಕ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಅಜ್ಜನಿಂದಲೇ ಕೃತ್ಯ

ಶಾಸಕರಾಗಿ ನೀವೇನು ಮಾಡಿದ್ದೀರಿ: ಭಟ್ಕಳ (Bhatkal City) ನಗರದ ಅಭಿವೃದ್ಧಿಗಾಗಿ ಈ ಕಳೆದ ಐದು ವರ್ಷದಲ್ಲಿ ಓರ್ವ ಶಾಸಕನಾಗಿ (MLA) ನೀವೇನು ಮಾಡಿದ್ದೀರಿ ಎಂದು ಯೋಚಿಸಿದ್ದೀರಾ? ನಗರದಲ್ಲಿ ಯುಜಿಡಿ ಸಮಸ್ಯೆ ಇದೆ. ಹಳೇ ಮೀನು ಮಾರುಕಟ್ಟೆಯನ್ನು (Fish Market) ಹೊಸ ಮೀನು ಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಕ್ಕೇ ನೀವೇ ತೊಡಕಾಗಿದ್ದೀರಿ ಎಂದು ಈ ಹಿಂದೆ ಪುರಸಭೆ ಅಧ್ಯಕ್ಷರು ಕೂಡ ಆರೋಪ ಮಾಡಿದ್ದರು. ಚುನಾವಣೆ ಬಂದಿದೆ ಎಂದು ಏನೇನೋ ಸಮಸ್ಯೆ ಹುಟ್ಟುಹಾಕಿ ಮತ್ತೊಮ್ಮೆ ಅಮಾಯಕ ಹಿಂದೂ ಸಮುದಾಯವನ್ನು ಯಾಮಾರಿಸುವ ಹುನ್ನಾರದಲ್ಲಿದ್ದೀರಿ. ಇದನ್ನೆಲ್ಲಾ ಬಿಟ್ಟು, ಹಿಂದೂ- ಮುಸ್ಲಿಂ ಸಮುದಾಯವನ್ನು ನೆಮ್ಮದಿಯಿಂದ ಶಾಂತಿಯುತ ಬದುಕನ್ನು ಬದುಕಲು ಬಿಡಿ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ-ವ- ತಂಝೀಮ್ ಕಿಡಿ ಕಾರಿದೆ.

Follow Us:
Download App:
  • android
  • ios