ಬೆಂಗಳೂರು(ಏ.25): ಬಜರಂಗದಳದ ಮಾಜಿ ಸಂಚಾಲಕ ಹಾಗೂ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್(47) ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ.

ಶುಕ್ರವಾರ ರಾತ್ರಿಯಿಂದ ಮಹೇಂದ್ರ ಕುಮಾರ್‌ರವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಅಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಪಾದರಾಯನಪುರ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್‌!

ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಬಜರಂಗದಳದ ಕರ್ನಾಟಕ ರಾಜ್ಯ ಸಂಚಾಲಕರಾಗಿದ್ದ ಅವರು ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿದ್ದರು. ಆದರೆ ಕೆಲ ಸಮಯದ ಬಳಿಕ ಸಂಘಟನೆಯಿಂದ ಹೊರ ಬಂದಿದ್ದ ಮಹೇಂದ್ರ ಕುಮಾರ್ ಬಜರಂಗ ದಳವನ್ನು ಕಟುವಾಗಿ ಟೀಕಿಸಿದ್ದರು. ಇಷ್ಟೇ ಅಲ್ಲದೇ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಂಘಟನೆಯನ್ನೂ ಕಟುವಾಗಿ ವಿರೋಧಿಸಿದ್ದರು.

ಸಾಮಾಜಿಕ, ಜಾಗೃತಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತಿದ್ದ ಮಹೇಂದ್ರ ಕುಮಾರ್, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಕಾಯ್ದೆ ವಿರುದ್ಧವೂ ಹಲವಾರು ಪ್ರತಿಭಟನೆಗಳಲ್ಲಿ ಭಾವವಹಿಸಿ,ಮಾತನಾಡಿದ್ದರು. ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕವೂ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನರಿಗೆ ಹತ್ತಿರವಾಗಿದ್ದರು.

ಸಿಎಂ ಯಡಿಯೂರಪ್ಪ ಸಂತಾಪ

ಇನ್ನು ಮಹೇಂದ್ರ ಕುಮಾರ್ ನಿಧನಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.