ಉದಯಗಿರಿ ಕಲ್ಲುತೂರಾಟ ಘಟನೆ: ಅಮಾಯಕರನ್ನು ಬಂಧಿಸದ ಪೊಲೀಸರ ಕಾರ್ಯವೈಖರಿ ಶ್ಲಾಘನೀಯ; ಮಹದೇವಪ್ಪ
ಉದಯಗಿರಿಯಲ್ಲಿ ನಡೆದ ಪೊಲೀಸ್ ಠಾಣೆ ಹಾಗೂ ಡಿಸಿಪಿ ಕಾರಿನ ಮೇಲಿನ ಕಲ್ಲು ತೂರಾಟ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ಬಂಧಿಸಿಲ್ಲ ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಪೋಸ್ಟರ್ ಹಂಚಿಕೆಯಿಂದ ಗಲಭೆ ಶುರುವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮೈಸೂರು (ಫೆ.13): ನಗರದ ಉದಯಗಿರಿಯಲ್ಲಿ ಪೊಲೀಸ್ ಠಾಣೆ ಹಾಗೂ ಡಿಸಿಪಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದಂತಹ ಘಟನೆಯಲ್ಲಿ ರಾಜ್ಯ ಪೊಲೀಸರು ಯಾವುದೇ ಅಮಾಯಕರನ್ನು ಬಂಧಿಸಿಲ್ಲ. ಇದಕ್ಕಾಗಿ ರಾಜ್ಯ ಪೊಲೀಸ್ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು.
ಮೈಸೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಉದಯಗಿರಿ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡುತ್ತಾ, ಯಾರೋ ಒಬ್ಬ ಕಿಡಿಗೇಡಿ ಮುಸ್ಲಿಂ ಸಮುದಾಯದ ಧಾರ್ಮಿಕ ನಂಬಿಕೆಗೆ ಧಕ್ಕೆ ಭರುವಂತಹ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾನೆ. ಅದನ್ನು ಮೊಬೈಲ್‌ನಿಂದ ಮೊಬೈಲ್‌ಗೆ ಎಲ್ಲರೂ ಶೇರ್ ಮಾಡಿದ್ದಾರೆ. ಈ ವಿಷಯ ಎಲ್ಲರಿಗೂ ಗೊತ್ತಾಗಿದೆ. ಎರಡು ಗುಂಪು ಠಾಣೆಗೆ ಬಂದು ಗೊಂದಲ ಶುರುವಾಗಿದೆ. ಎರಡು ಗುಂಪು ಅಧಿಕೃತವಾಗಿ ದೂರು ನೀಡಿಲ್ಲ. ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಕ್ರಮಕ್ಕೆ ಹಿರಿಯರು ಒಪ್ಪಿಗೆ ಸೂಚಿಸಿದ್ದರು.
ಇನ್ನು ಸಮುದಾಯಕ್ಕೆ ಧಕ್ಕೆ ಬರುವ ಪೋಸ್ಟರ್ ಹಂಚಿಕೊಂಡ ಆರೋಪಿ ಇದ್ದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಇದೀಗ ತಪ್ಪು ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಕೆಲವರ ಪತ್ತೆಗೆ ತನಿಖೆ ಮಾಡುತ್ತಿದ್ದಾರೆ. ಕಾನೂನು ಭಂಗ ಉಂಟು ಮಾಡಿದವರು ಯಾಕೆ ಮಾಡಿದರು? ಏನು ಅಂತ ಪೊಲೀಸರು ತನಿಖೆ ಮಾಡುತ್ತಾರೆ. ಜನರು ಶಾಂತಿ ಕಾಪಾಡಬೇಕು. ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಅಂತ ನಾನು ಹೇಳಿದ್ದೇನೆ. ಯಾರೇ ಆದರೂ ತಪ್ಪು ಮಾಡಿದ್ದರೆ ಶಿಕ್ಷೆ ಆಗತ್ತದೆ. ಈ ಘಟನೆಯ ಹಿಂದೆ ಆರ್‌ಎಸ್ಎಸ್ ಕೈವಾಡವುದೆ ಎಂಬ ಕೆಲವರ ಆರೋಪವಿದೆ. ಆದರೆ, ಸಿಸಿಬಿ ಪೊಲೀಸರು ನಿಜ ಸತ್ಯ ಹೊರ ತರುವ ನಿರೀಕ್ಷೆಯಿದೆ. ಪೊಲೀಸರ ಕ್ರಮಕ್ಕೆ ನನ್ನ ಸಹಮತವಿದೆ. ಅಮಾಯಕರನ್ನು ಯಾರು ಬಂಧಿಸಿಲ್ಲ. ಏನೇ ಇದ್ದರೂ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಅಮಾಯಕರಿಗೆ ಶಿಕ್ಷೆ ಆಗಲ್ಲ. ತಪ್ಪು ಮಾಡಿದರಿಗೇ ಶಿಕ್ಷೆ ಆಗತ್ತದೆ. ಉದಯಗಿರಿ ಘಟನೆ ವಿಚಾರವಾಗಿ ನಾಳೆ ಸಿಎಂ ಸಿದ್ದರಾಮಯ್ಯ ಕೂಡ ಉದಯಗಿರಿ ಗಲಾಟೆ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ಮಾಡುತ್ತಾರೆ. ನಾಳೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಮಾಡಿ ಘಟನೆ ಮಾಹಿತಿಯನ್ನು ಪಡೆಯುತ್ತಾರೆ.
ಉದಯಗಿರಿ ಠಾಣೆ ಮೇಲೆ ಕಲ್ಲು ಎಸೆದಿದ್ದಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ದೃಶ್ಯ ಆಧಾರಿಸಿ ಕೆಲವರನ್ನು ಬಂಧಿಸಿದ್ದಾರೆ. ನಾವೆಲ್ಲರೂ ಕೂಡ ಕಾನೂನಿಗೆ ಗೌರವ ಕೊಡಬೇಕು. ನಮ್ಮ ಪೊಲೀಸರು ಅಶ್ರವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಾರೆ. ಕಾನೂನಿನ ಬಗ್ಗೆ ಈ ಭಾಗದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗುತ್ತದೆ. ಕ್ರೈಮ್ ರೇಟ್ ಆಧಾರದ ಮೇಲೆ ಪೊಲೀಸ್ ಠಾಣೆ ಬೇಕಾ ಬೇಡವಾ ಎಂಬ ಪ್ರಕ್ರಿಯೆ ನಡೆಯುತ್ತದೆ. ವಿಪಕ್ಷ ನಾಯಕರ ಮಾತಿಗೆ ಪೋಲೀಸರು ಮಣೆ ಹಾಕುತ್ತಾರೆ ಎಂದು ವಿಪಕ್ಷದವರು ಆರೋಪ ಮಾಡುತ್ತಾರೆ. ಆದರೆ, ಆ ಪರಿಸ್ಥಿತಿ ನೋಡಿದರೆ ಹಾಗಿಲ್ಲ ಎಂದು ಹೇಳಿದರು.