Asianet Suvarna News Asianet Suvarna News

ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದರು ಸಿಎಂ ಮಾಧ್ಯಮ ಸಲಹೆಗಾರ

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ್ದಾರೆ.

Mahadev Prakash Rejects Rajyotsava Award snr
Author
Bengaluru, First Published Oct 28, 2020, 9:14 AM IST

ಬೆಂಗಳೂರು (ಅ.28) :  ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂಬುದಾಗಿ ನನಗೆ ತಿಳಿದು ಬಂದಿದ್ದು, ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಮಹದೇವ್‌ ಪ್ರಕಾಶ್‌ ತಿಳಿಸಿದ್ದಾರೆ.

‘ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವ ನಾನು ಈ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ನನ್ನ ಭಾವನೆ. ಮುಖ್ಯಮಂತ್ರಿಗಳು ನನ್ನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿದ್ದರೂ ಅದಕ್ಕೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಗುರಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದೇನೆ. ಇದನ್ನು ಅಹಂಕಾರ ಎಂದು ಯಾರೂ ಪರಿಗಣಿಸಬೇಕಿಲ್ಲ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

ಮತ್ತೆ ಶುರುವಾಯ್ತು ಸಂಪುಟ ಕಸರತ್ತು, ಬೈ ಎಲೆಕ್ಷನ್ ನಂತ್ರ ಮಂತ್ರಿಯಾಗ್ತಿನಿ ಎಂದ MLC ...

‘ರಾಜ್ಯೋತ್ಸವ ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿ ಆಗಬೇಕೇ ಹೊರತು ಮಾರಕ ಆಗಬಾರದು ಅನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರವನ್ನು ಯಾರೂ ಅಹಂಕಾರ ಎಂದು ಭಾವಿಸಬಾರದು ಎನ್ನುವುದೇ ನನ್ನ ವಿನಮ್ರ ವಿನಂತಿ’ ಎಂದಿದ್ದಾರೆ.

‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡದ ಒಂದು ಪ್ರತಿಷ್ಠಿತ ಹಾಗೂ ಹೆಮ್ಮೆಯ ಪ್ರಶಸ್ತಿ. ಕನ್ನಡ ಪತ್ರಿಕೋದ್ಯಮದಲ್ಲಿ 46 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದೇನೆ. ಸಂಪಾದಕನಾಗಿ, ಅಂಕಣಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ಮುದ್ರಣ ಮತ್ತ ದೃಶ್ಯ ಮಾಧ್ಯಮಗಳಲ್ಲಿ ನನ್ನ ಇರುವಿಕೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶನ ಮಾಡಿದ್ದೇನೆ. ಇದನ್ನು ಪರಿಗಣಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಪ್ರಕಾಶ್‌ ಹೇಳಿದ್ದಾರೆ.

Follow Us:
Download App:
  • android
  • ios