ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದ ತಹಶಿಲ್ದಾರ್ ಶರತ್ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿ ಏಟು ತಿನ್ನಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಗಡಿ (ಡಿ.25): ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ಅವರು ಇಂದು ಕೆಂಡಾಮಂಡಲವಾದರು. ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ರೈತರ ದೂರುಗಳನ್ನು ಕೇಳಿ ಆಕ್ರೋಶಗೊಂಡ ಶಾಸಕರು, ತಹಶಿಲ್ದಾರ್ ಶರತ್ ಕುಮಾರ್ ಅವರಿಗೆ ಬಹಿರಂಗವಾಗಿಯೇ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕೆಲಸ ಮಾಡದಿದ್ರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ!
ಸಭೆಯಲ್ಲಿ ರೈತರ ದೂರಿನ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಜನರ ಕೆಲಸಗಳು ಸರಿಯಾಗಿ ಆಗದಿದ್ದರೆ ಜನ ನಿನಗೂ ಹೊಡಿತಾರೆ, ನನಗೂ ಹೊಡಿತಾರೆ. ಸರಿಯಾಗಿ ಕೆಲಸ ಮಾಡಿಸಲು ಆಗದಿದ್ದಕ್ಕೆ ಮೊದಲು ನನಗೆ ಚಪ್ಪಲಿಯಲ್ಲಿ ಹೊಡಿತಾರೆ, ಆಮೇಲೆ ನಿನಗೆ ಹೊಡಿತಾರೆ ಎಂದು ತಹಶಿಲ್ದಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು. ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಮಗೆ ಜನಪ್ರತಿನಿಧಿಯಾಗಿ ಮುಜುಗರವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾಚಿಕೆ ಆಗಲ್ವಾ ನಿಮಗೆ? ಅಧಿಕಾರಿಗಳ ವಿರುದ್ಧ ಕಿಡಿ
ರೈತರು ಕಚೇರಿಗಳಿಗೆ ಅಲೆದಾಡುತ್ತಿರುವ ವಿಷಯ ತಿಳಿದು ಗರಂ ಆದ ಬಾಲಕೃಷ್ಣ ಅವರು, ಜನರನ್ನ ಯಾಕೆ ಹೀಗೆ ಸಾಯಿಸುತ್ತೀರಾ? ಕೆಲಸ ಮಾಡಲು ನಾಚಿಕೆ ಆಗಲ್ವಾ ನಿಮಗೆ? ಎಷ್ಟೋ ಅಧಿಕಾರಿಗಳು ಉತ್ತಮ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಆದರೆ ನೀವು ಜನರನ್ನು ಸತಾಯಿಸುತ್ತಿದ್ದೀರಿ, ಯಾಕೆ ಬೇಕು ನಿಮಗೆ ಈ ಕೆಲಸ? ಎಂದು ತಹಶಿಲ್ದಾರ್ ಶರತ್ ಕುಮಾರ್ ಅವರನ್ನು ಪ್ರಶ್ನಿಸಿದರು.
ಡಿಕೆ ರವಿ ಅವರ ಉದಾಹರಣೆ ನೀಡಿದ ಶಾಸಕ
ಅಧಿಕಾರಿಯ ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತನಾಡುತ್ತಾ ಶಾಸಕರು ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರನ್ನು ಸ್ಮರಿಸಿದರು. ಐಎಎಸ್ ಅಧಿಕಾರಿ ಡಿಕೆ ರವಿ ಅವರು ತೀರಿಕೊಂಡಾಗ ಜನ ಕಣ್ಣೀರು ಹಾಕಿದ್ದರು. ಅವರು ಮಾಡಿದ ಕೆಲಸ ಹಾಗಿತ್ತು. ಆದರೆ ನೀವು ಹೀಗೆ ಜನರನ್ನು ಸತಾಯಿಸುತ್ತಾ ಹೋದರೆ, ನೀವು ಸತ್ತಾಗ ಯಾರಾದರೂ ಬಂದು ಕಣ್ಣೀರು ಹಾಕುತ್ತಾರಾ? ಎಂದು ತೀಕ್ಷ್ಣವಾಗಿ ಮಾರ್ಮಿಕವಾಗಿ ಪ್ರಶ್ನಿಸಿದರು.
ರೈತರ ದೂರಿನಿಂದ ಕೋಪಗೊಂಡ ಶಾಸಕ:
ಮಾಗಡಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ವೇಳೆ ಈ ಘಟನೆ ನಡೆದಿದೆ. ರೈತರ ಜಮೀನು ಮತ್ತು ಇತರ ದಾಖಲೆಗಳ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಶಾಸಕರ ಮುಂದೆ ಸಾಲು ಸಾಲು ದೂರುಗಳನ್ನು ನೀಡಿದ್ದರು. ಇದರಿಂದ ಕೆರಳಿದ ಶಾಸಕರು ಸ್ಥಳದಲ್ಲೇ ಇದ್ದ ಅಧಿಕಾರಿಗೆ ಚಳಿ ಬಿಡಿಸಿದರು.


