ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
ಬೆಂಗಳೂರು (ಏ.15): ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಇಂದು ಷರತ್ತುಬದ್ಧ ಜಾಮೀನು ಸಿಕ್ಕಿದೆ. ಕಾನೂನಿನ ಎಲ್ಲಾ ಕ್ರಮಗಳನ್ನು ಪೂರೈಸಿದ ಬಳಿಕ ವಿರೂಪಾಕ್ಷಪ್ಪ 15 ದಿನಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರ ಬಂದಿದ್ದಾರೆ.
ಜೈಲಿನಿಂದ ಹೊರಬಂದು ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, ಭಾರತದ ನ್ಯಾಯಾಂಗದ ಬಗ್ಗೆ ನನಗೆ ವಿಶ್ವಾಸವಿದೆ. ಈ ಆರೋಪದಿಂದ ನಾನು ಮುಕ್ತನಾಗುತ್ತೇನೆ ಎಂದು ನಂಬಿಕೆ ಇದೆ. ನಾಲ್ಕು ಗೋಡೆಗಳ ಮಧ್ಯೆ ನಾನಿದ್ದೆ. ಯಾವುದೇ ಟಿವಿ ಮಾಧ್ಯಮಗಳು ಅಲ್ಲಿಲ್ಲ. ಮನೆಗೆ ಹೋದ ಮೇಲೆ ಮಾಧ್ಯಮಗಳನ್ನ ನೋಡಿದ ಮೇಲೆ ರಾಜಕೀಯ ಬಗ್ಗೆ ಚರ್ಚೆ ಮಾಡ್ತೀನಿ. ನಾನು ಏನನ್ನ ಹೇಳುವ ಪರಿಸ್ಥಿತಿಯಲ್ಲಿಲ್ಲ. ಹೊರಗಡೆ ಏನು ನಡೆದಿದೆ ಎಂಬುದರ ಅರಿವಿಲ್ಲ. ಮನೆಗೆ ಹೋಗಿ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀನಿ ಎಂದು ಹೇಳಿಕೆ ನೀಡಿದ್ದಾರೆ.
ಕೆಎಸ್‌ಡಿಎಲ್ ಗುತ್ತಿಗೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನನ್ನು ಶನಿವಾರ ನೀಡಲಾಗಿದೆ. ನ್ಯಾ. ಜಯಂತ್ ಕುಮಾರ್ ಅವರಿದ್ದ ಪೀಠದಿಂದ ಆದೇಶ ಹೊರಡಿಸಲಾಗಿದೆ. 5 ಷರತ್ತುಗಳನ್ನ ವಿಧಿಸಿ ನ್ಯಾಯಮೂರ್ತಿ ಜಾಮೀನು ನೀಡಿದ್ದಾರೆ.
ಲಂಚ ಪ್ರಕರಣ: ಮಾಡಾಳು ವಿರುಪಾಕ್ಷಪ್ಪಗೆ ಕೊನೆಗೂ ಸಿಕ್ತು ಕಂಡೀಷನಲ್ ಬೇಲ್!
ವಿರೂಪಾಕ್ಷಪ್ಪಷರತ್ತು ಬದ್ಧ ಜಾಮೀನಲ್ಲಿ ಉಲ್ಲೇಖವಾಗಿರುವ ಅಂಶಗಳು:
3 ವಾರಕ್ಕೆ ಒಮ್ಮೆ ಲೋಕಾಯುಕ್ತ ಕಚೇರಿಗೆ ಹಾಜರಾಗಬೇಕು, ಲೋಕಾಯುಕ್ತ ಅಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಪ್ರಕರಣದ ಸಾಕ್ಷಿಗೆ ಯಾವ ಕಾರಣದಲ್ಲೂ ಪ್ರಭಾವ ಬೀರಬಾರದು. ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಬಾರದು ಅದರೊಂದಿಗೆ ಪಾಸ್‌ಪೋರ್ಟ್ ಅನ್ನು ಸರೆಂಡರ್ ಮಾಡುವಂತೆ ಮಾಡಾಳ್ ವಿರೂಪಾಕ್ಷಪ್ಪಗೆ ಷರತ್ತು ವಿಧಿಸಲಾಗಿದೆ. ಜೊತೆಗೆ 5 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ ತಿಳಿಸಲಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ತನಿಖೆ ಮುಕ್ತಾಯ ಆಗುವವರೆಗೂ ಕೆಎಸ್ಡಿಎಲ್ ಕಚೇರಿಗೆ ಭೇಟಿ ನೀಡಬಾರದು. ಜೊತೆಗೆ ಹೈಕೋರ್ಟ್ ಮಾರ್ಗಸೂಚಿ ಪಾಲಿಸುವಂತೆ ಕೋರ್ಟ್ ಷರತ್ತು ವಿಧಿಸಿದೆ.
ಮಾಡಾಳು ವಿರುಪಾಕ್ಷಪ್ಪ ಮನೆಯಲ್ಲಿ ಸಿಕ್ಕಿದ್ದು ಚುನಾವಣಾ ಹಣ!
ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಮಾ.27ರಂದು ಲೋಕಾಯುಕ್ತ ಪೊಲಿಸರು ಬಂಧಿಸಿದ್ದರು. ಮಾ.8ರಂದು ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ಮಾ.27ರಂದು ರದ್ದಾದ ಬೆನ್ನಲ್ಲೇ ಚನ್ನಗಿರಿಯಿಂದ ಕಾರಿನಲ್ಲಿ ಹೊರಟ ಮಾಡಾಳ ವಿರುಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್‌ಗೇಟ್ ಬಳಿ ಬಂಧಿಸಿದ್ದರು. ನಂತರ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಎದೆ ನೋವು ಎಂದು ನಾಟಕ ಮಾಡುತ್ತಿದ್ದ ಶಾಸಕರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಪ್ರಮಾಣಪತರವನ್ನು ಪಡೆದುಕೊಂಡು ವಶಕ್ಕೆ ಪಡೆದುಕೊಂಡಿದ್ದರು.
