ಸಿದ್ದುಗೆ ಶುರುವಾಯ್ತು ಮಾದಿಗರ ಟೆನ್ಶನ್: ಹತ್ತಿರದಲ್ಲೇ ಇದೆ ಎಲೆಕ್ಷನ್!
ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಂಬಿಡದ ಮಾದಿಗರ ಟೆನ್ಸ್‌ನ್| ಸದಾಶಿವ ವರದಿ ಜಾರಿ ಮಾಡದ್ದಕ್ಕೆ ಕಾಂಗ್ರೆಸ್‌ಗೆ ತಿರುಗಿಬಿದ್ದ ಮಾದಿಗರು| ಸಿದ್ದು ಸ್ವಕ್ಷೇತ್ರದಿಂದಲೇ ಹೋರಾಟಕ್ಕೆ ಮಾದಿಗರ ಸಿದ್ಧತೆ| ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಪಾಠ ಕಲಿಸ್ತಿವಿ ಅಂತಿರೋ ಮಾದಿಗರು| ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದ ಮಾದಿಗ ನಾಯಕರು|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಫೆ.24): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಸೋ ಸಾರಥಿಯಾಗಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೊಂದು ಟೆನ್ಸನ್ ಶುರವಾಗಿದೆ.
ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಬಹಿರಂಗವಾಗಿಯೇ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದ ಮಾದಿಗರು, ಇದೀಗ ಲೋಕಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರ ಸ್ವಕ್ಷೇತ್ರದ ಜಿಲ್ಲೆಯಿಂದಲೇ ಮತ್ತೊಮ್ಮೆ ಹೋರಾಟಕ್ಕೆ ಮುನ್ನುಡಿ ಬರೆಯೋಕೆ ಶುರು ಮಾಡಿದ್ದಾರೆ.
"
ಕಾಂಗ್ರೆಸ್ ಪಕ್ಷಕ್ಕೆ ಇದೀಗ ರಾಜ್ಯದಲ್ಲಿನ ಮಾದಿಗರ ಹೋರಾಟ ನಿದ್ರೆಗೆಡಿಸುವಂತೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ನಡೆಯುತ್ತಿರೋ ಮಾದಿಗರ ಹೋರಾಟ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.
ಕಳೆದ ಬಾರಿಯ ಸಿದ್ದರಾಮಯ್ಯನವರ ನೇತೃತ್ವದಲ್ಲಿನ ಬಹುಮತ ಹೊಂದಿದ್ದ ಕಾಂಗ್ರೆಸ್ ಸರ್ಕಾರ ಇದ್ದಾಗ ಮಾದಿಗರು ಭಾರೀ ಹೋರಾಟ ಮಾಡಿದ್ದರು. ಆದ್ರೂ ಸಿದ್ದರಾಮಯ್ಯ ಈ ಬಗ್ಗೆ ಸ್ಪಂದಿಸಲಿಲ್ಲ ಅನ್ನೋ ಆರೋಪ ಇದೆ. ಹೀಗಾಗಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾದಿಗರು ಪಾದಯಾತ್ರೆ ಕೈಗೊಂಡ್ರು.
ಇದರ ಫಲವಾಗಿ ಮಾದಿಗರು ಸಂಫೂರ್ಣವಾಗಿ ಕಾಂಗ್ರೆಸ್ ಪರವಾಗಿ ನಿಲ್ಲಲಿಲ್ಲ. ಇದ್ರಿಂದ ರಾಜ್ಯದಲ್ಲಿ ನಿರೀಕ್ಷಿಸಿದಷ್ಟು ಸೀಟು ಕಾಂಗ್ರೆಸ್‌ಗೆ ಸಿಗಲಿಲ್ಲ. ಆದ್ರೆ ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಎದುರಾಗಿರೋ ಬೆನ್ನಲ್ಲೆ ಮತ್ತೇ ಮಾದಿಗರ ಹೋರಾಟ ಸಮಿತಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ.
"
ಅದ್ರಲ್ಲೂ ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿರೋ ಉತ್ತರ ಕರ್ನಾಟಕದ ಬಾದಾಮಿ ಮತಕ್ಷೇತ್ರದದಿಂದಲೇ ಹೋರಾಟದ ಕಹಳೆ ಮೊಳಗಿಸಲು ಮುಂದಾಗಿದ್ದು, ಈ ಬಾರಿ ಮಾದಿಗರು ಕಾಂಗ್ರೆಸ್‌ಗೆ ಮತ ನೀಡದೇ ಬಿಜೆಪಿ, ಜೆಡಿಎಸ್ ಇಲ್ಲವೆ ಬಿಎಸ್‌ಪಿ ಯಾವುದು ಬೇಕೋ ಅದಕ್ಕೆ ಮತ ಹಾಕಿ ಅಂತ ಬಹಿರಂಗವಾಗಿಯೇ ಕರೆ ನೀಡುತ್ತಿದ್ದಾರೆ.
ಇನ್ನು ಈಗಾಗಲೇ ಸಿದ್ದರಾಮಯ್ಯ ಸ್ವಕ್ಷೇತ್ರದ ಜಿಲ್ಲೆಯಾಗಿರೋ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರಗಳ ಪೈಕಿ 6 ರಲ್ಲಿ ಬಿಜೆಪಿ ಶಾಸಕರಿದ್ದು, ಇಬ್ಬರು ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಿರುವಾಗ ಹಲವು ಜಂಜಾಟದ ಮಧ್ಯೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮುಂದಾಗಿರೋ ಸಿದ್ದರಾಮಯ್ಯಗೆ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿರೋ 1 ಲಕ್ಷ 58 ಸಾವಿರ ಮತಗಳಿರೋ ಮಾದಿಗರ ನಡೆ ಚಿಂತೆಗೀಡಾಗುವಂತೆ ಮಾಡಿದೆ.
ಸಾಲದ್ದಕ್ಕೆ ಇನ್ನು ರಾಜ್ಯಕ್ಕೆ ಹೋಲಿಸಿಕೊಂಡರೆ ಬರೋಬ್ಬರಿ 42 ಲಕ್ಷಕ್ಕೂ ಅಧಿಕ ಮಾದಿಗರ ಮತಗಳಿವೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನ ಮತ್ತೇ ಮಾದಿಗ ಮಹಾಸಭಾ ಮಾರ್ಚನೊಳಗೆ ಸದಾಶಿವ ವರದಿ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದು, ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ದ ಮತ ಹಾಕುವಂತೆ ಹೋರಾಟಕ್ಕೆ ಕರೆ ನೀಡಲು ನಿರ್ಧರಿಸಲಾಗಿದೆ.
"
ಒಟ್ಟಿನಲ್ಲಿ ಕಳೆದ ಬಾರಿಯ ವಿಧಾನಸಭಾ ಚುನವಣೆಯಲ್ಲಿ ಮಾದಿಗರ ಹೋರಾಟದ ಫಲವಾಗಿ ಪೆಟ್ಟು ತಿಂದಿರೋ ಕಾಂಗ್ರೆಸ್, ಈ ಬಾರಿ ಲೋಕಸಭಾ ಚುನಾವಣೆಗೂ ಮುನ್ನ ಮತ್ತೇ ಹೋರಾಟ ಮಾಡಲು ಮುಂದಾಗಿರೋ ಮಾದಿಗರ ಮನಸ್ಸು ಗೆಲ್ಲೋ ಪ್ರಯತ್ನ ಮಾಡುತ್ತಾ ಅಥವಾ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಿ ಲೋಕಸಭಾ ಚುನಾವಣೆಯನ್ನ ಸಲಿಸಾಗಿ ಎದುರಿಸುವಂತೆ ಮಾಡ್ತಾರಾ ಅಂತ ಕಾದು ನೋಡಬೇಕಿದೆ.