'ನಾನೂ ಕಾಫಿರ' ಕೃತಿಯು ಇಸ್ಲಾಂನ ಲೋಪಗಳ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರ ನಿರ್ಭೀತ ಮಾತುಗಳನ್ನು ಧೈರ್ಯವಾಗಿ ಮುಂದಿಡುತ್ತದೆ. ಸಮಾಜದಲ್ಲಿ ಸತ್ಯವನ್ನು ಮಾತನಾಡಲು ಇರುವ ಭಯದ ವಾತಾವರಣ ಮತ್ತು ಅಂಬೇಡ್ಕರ್‌ರನ್ನು ಜಾತಿವಾದದಿಂದ ಬಿಡುಗಡೆಗೊಳಿಸುವ ಅಗತ್ಯತೆಯ ಬಗ್ಗೆ ಪುಸ್ತಕ ಲೋಕಾರ್ಪಣೆ ಚರ್ಚೆ.

- ಇಸ್ಲಾಂ ಲೋಪದ ಬಗ್ಗೆ ಅಂಬೇಡ್ಕರ್‌ ಮಾತು ಇತಿಹಾಸಕ್ಕಷ್ಟೇ ಸೀಮಿತವಾಗಿರಲಿಲ್ಲ । ನಾನೂ ಕಾಫಿರ ಕೃತಿ ಲೋಕಾರ್ಪಣೆ

Add Asianetnews Kannada as a Preferred SourcegooglePreferred

ಬೆಂಗಳೂರು (ಮಾ.6): ಸತ್ಯದ ಕುರಿತು ಮಾತನಾಡಲು ಹಿಂದೂ ಸಮಾಜ ಭಯಪಡುವ ಸಂದರ್ಭವಿದ್ದು, ಆದರೆ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಯಾವುದೇ ಅಂಜಿಕೆಯಿಲ್ಲದೆ ಇಸ್ಲಾಂ‌ ಲೋಪದ ಕುರಿತು ಮಾತನಾಡಿದ್ದರು. ಅಂಥ ನುಡಿಗಳನ್ನು ತಮ್ಮ ಕಾಫಿರ ಕೃತಿ ಅತ್ಯಂತ ಧೈರ್ಯವಾಗಿ ತೋರಿಸಿಕೊಡುತ್ತದೆ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ.ಹರೀಶ್ ಹೇಳಿದ್ದಾರೆ.

ಸ್ವರಾಷ್ಟ್ರ ಪ್ರಕಾಶನ ಬನಶಂಕರಿಯ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ಆಯೋಜಿಸಿದ್ದ ‘ನಾನೂ ಕಾಫಿರ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಕಾನ್ಸ್‌ಟಿಟ್ಯೂಷನಲಿಸಂ (ಸಾಂವಿಧಾನಿಕತೆ) ಎನ್ನುವುದು ಇಲ್ಲ. ನಮ್ಮ ಸಾವಿರಾರು ವರ್ಷಗಳ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಈಗ ಇರುವ ಸಾಧನ ಸಂವಿಧಾನ ಎಂದರು.

ಅಂಬೇಡ್ಕರ್ ಅವರು ಇಸ್ಲಾಂ ಅಪಾಯದ ಕುರಿತು ಹೇಳಿದ ಮಾತು ಇತಿಹಾಸಕ್ಕೆ ಸೀಮಿತವಾದದ್ದಲ್ಲ. ಪಹಲ್ಗಾಂ ಘಟನೆ ಮೂಲಕ ನಮ್ಮ ಮನೆ ಬಾಗಿಲಿನವರೆಗೆ ಬಂದು ನಿಂತಿದೆ ಎನ್ನುವುದನ್ನು ಈ ಪುಸ್ತಕ ತೋರಿಸುತ್ತದೆ. ಸಮಾಜದ ದೃಷ್ಟಿಯಿಂದ ಹಿಂದೆಂದಿಗಿಂತಲೂ ಇಂದು ಅಪಾಯಕಾರಿ ಸಂದರ್ಭವಿದೆ. ಇಸ್ಲಾಂ ಕುರಿತು ಅನೇಕ ಸಂಗತಿಗಳನ್ನು ಹೇಳುವ ಸಲೀಂ‌ ವಸ್ತಿಯನ್ನು ಚುಚ್ಚಿ ಕೊಲ್ಲಲು ಪ್ರಯತ್ನ ನಡೆಯುವಂತಹ ಸ್ಥಿತಿ ಈಗ ನಡೆದಿದೆ ಎಂದು ಹರೀಶ ಹೇಳಿದರು.

ಭಯ ಸೃಷ್ಟಿ ಕೆಲಸ:

ಸಮಾಜದಲ್ಲಿ ಭಯವನ್ನು ಸೃಷ್ಟಿಸುವ ಕೆಲಸ ಆಗುತ್ತಿದೆ. ವಿವೇಕಾನಂದರನ್ನು, ಅಂಬೇಡ್ಕರರನ್ನು ಸೃಷ್ಟಿಸಿದ ಹಿಂದೂ ಸಮಾಜ, ಸತ್ಯವನ್ನು ಮಾತನಾಡಲು ಭಯಪಡುವ ಸ್ಥಿತಿಯಲ್ಲಿರುವುದು ಬೇಸರದ ಸಂಗತಿ. ಅಂಬೇಡ್ಕರ್ ಅವರಂತೆಯೇ, ಇಸ್ಲಾಮಿನ ಲೋಪದ ಕುರಿತು ಬೆಳಕು ಚೆಲ್ಲುವ ಕಾರ್ಯವನ್ನು ಈ ಕೃತಿ ಮಾಡಿದೆ ಎಂದು ಹರೀಶ ಅಭಿಪ್ರಾಯಪಟ್ಟರು.

ನಾಟಕಕಾರ ಪ್ರಕಾಶ್ ಬೆಳವಾಡಿ ಮಾತನಾಡಿ, ಇನ್‌ಸೈಡರ್ ಕ್ರಿಟಿಕ್ ಎನ್ನುವುದು ಎಲ್ಲಿಂದಲೋ ಯುರೋಪಿನಿಂದ ಬಂದ ಚಿಂತನೆಯಲ್ಲ. ಭಾರತೀಯ ಸಂಸ್ಕೃತಿಯಲ್ಲೇ ಇದರ ಕುರುಹು ಇದೆ. ಅಂಬೇಡ್ಕರ್ ಅನುಯಾಯಿಗಳು ಅವರನ್ನು ಜಾತಿವಾದದಲ್ಲಿ ಬಂಧಿಸಿಟ್ಟಿದ್ದಾರೆ. ಮೊದಲು ಅಂಬೇಡ್ಕರ್‌ ಅವರನ್ನು ಬಿಡುಗಡೆಗೊಳಿಸಬೇಕು. ಜಾತಿ ವಿನಾಶದ ಹೆಸರಿನಲ್ಲಿ ಅಂಬೇಡ್ಕರ್, ಬಸವಣ್ಣನವರನ್ನು ನಾವೆಲ್ಲರೂ ಸೇರಿ ಸೋಲಿಸಿದ್ದೇವೆ. ಆರ್ಥಿಕತೆ, ಭಾಷಾವಾರು ಪ್ರಾಂತ್ಯಗಳು ಸೇರಿ ಇನ್ನಿತರ ವಿಚಾರಗಳಲ್ಲಾದರೂ ಅವರನ್ನು ಸರಿಯಾಗಿ ಅರಿಯಬೇಕಾಗಿದೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ, ಅಂಬೇಡ್ಕರ್ ಕುರಿತು ಹೇಗೆ ಮಾತನಾಡಬೇಕು, ಹೇಗೆ ಮಾತನಾಡಬಾರದು ಎಂದು ನಿರ್ದೇಶಿಸುವ ತುರ್ತುಪರಿಸ್ಥಿತಿ ಇಂದಿಗೂ ಜೀವಂತವಾಗಿದೆ. ಇಂತಹ ಸಂದರ್ಭಗಳಲ್ಲಿ ‘ನಾನೂ ಕಾಫಿರ’ ಕೃತಿಯನ್ನು ಸುಧಾಕರ ಹೊಸಳ್ಳಿ ಅವರು ಹೊರತಂದಿದ್ದಾರೆ. ಕನ್ನಡದಲ್ಲಿ ಈ ರೀತಿಯ ಕೃತಿ ಬಂದಿರುವುದು ಕನ್ನಡದ ಹೆಮ್ಮೆ. ಈ ಕೃತಿ ಹೆಚ್ಚೆಚ್ಚು ಜನರಿಗೆ ತಲುಪಬೇಕು ಎಂದರು.

ಸುಳ್ಳು ಬರೆಯುವ ಪ್ರಮಾಣ ಇಳಿಕೆ:

ಕೃತಿಯ ಲೇಖಕ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದ್ದಾರೆ ಎಂದು ಸುಳ್ಳುಗಳನ್ನು ಭಿತ್ತಿದ ಪಾಪವನ್ನು ಸಮಾಜದಲ್ಲಿ ಅನೇಕರು ಮಾಡಿದ್ದಾರೆ. ಆದರೆ, ರಾಷ್ಟ್ರೀಯವಾದಿಗಳು ಈಗ ಪುಸ್ತಕ, ಪುಟ ಸಂಖ್ಯೆ ಸಮೇತ ಬರೆಯುತ್ತಿರುವ ಸಂದರ್ಭದಲ್ಲಿ ಸುಳ್ಳನ್ನು ಬರೆಯುವ ಪ್ರಮಾಣ ಶೇ.80 ಕಡಿಮೆಯಾಗಿದೆ. ಸುಳ್ಳನ್ನು ಹರಡುವ ಗುತ್ತಿಗೆ ತೆಗೆದುಕೊಂಡವರ ವಿರುದ್ಧ ಇನ್ನುಮುಂದೆ ಸಮರ ಸಾರಲಾಗುತ್ತದೆ ಎಂದು ಹೇಳಿದರು.