ಬೆಂಗಳೂರಿನ ಮೆಜೆಸ್ಟಿಕ್ ನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ಇದೀಗ ಗುಡ್ ನ್ಯೂಸ್ ಒಂದು ಇಲ್ಲಿದೆ. ಇನ್ನುಮುಂದೆ ಲಕ್ಷುರಿ ಬಸ್ ಗಳು ಮೆಜೆಸ್ಟಿಕ್ ನಿಂದಲೇ ಮೈಸೂರಿಗೆ ಪ್ರಯಾಣಿಸಲಿವೆ. 

ಬೆಂಗಳೂರು :  ಮೆಟ್ರೋ ನಿಲ್ದಾಣ ಕಾಮಗಾರಿ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಗೊಂಡಿದ್ದ ಬೆಂಗಳೂರು- ಮೈಸೂರು ಐಷಾರಾಮಿ ಬಸ್‌ಗಳ ಸೇವೆ ಡಿ.1ರಿಂದ ಪುನಃ ಮೆಜೆಸ್ಟಿಕ್‌ನಿಂದ ಆರಂಭಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಕೆಂಪೇಗೌಡ ಬಸ್‌ ನಿಲ್ದಾಣದ ಟರ್ಮಿನಲ್‌-2ರಿಂದ ವಿವಿಧ ಐಷಾರಾಮಿ ಬಸ್‌ ಸೇವೆಗಳ ಲಭ್ಯವಾಗಲಿದೆ.

ಮೆಟ್ರೋ ನಿಲ್ದಾಣ ಕಾಮಗಾರಿ ಮುಗಿದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಬಿಎಂಆರ್‌ಸಿಎಲ್‌ ಟರ್ಮಿನಲ್‌-2ರ ಜಾಗವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಿತ್ತು. ಇದೀಗ ಆ ಟರ್ಮಿನಲ್‌ ಅಭಿವೃದ್ಧಿಪಡಿಸಿರುವ ಕೆಎಸ್ಸಾರ್ಟಿಸಿ, ಮೊದಲಿನಂತೆ ಬೆಂಗಳೂರು- ಮೈಸೂರು ನಡುವಿನ ಐಷಾರಾಮಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಮುಂದಾಗಿದೆ.

ಈ ಟರ್ಮಿನಲ್‌- 2ರಿಂದ ಐಷಾರಾಮಿ ಬಸ್‌ಗಳಾದ ಐರಾವತ, ಐರಾವತ ಕ್ಲಬ್‌ ಕ್ಲಾಸ್‌, ರಾಜಹಂಸ, ಸ್ಲೀಪರ್‌ ಬಸ್‌ಗಳು ಕಾರ್ಯಾಚರಣೆಯಾಗಲಿವೆ. ಮೆಜೆಸ್ಟಿಕ್‌ನಿಂದ ಹೊರಟು ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣದ ಮುಖಾಂತರ ಮೈಸೂರು ಕಡೆಗೆ ತೆರಳಲಿವೆ. ಉಳಿದಂತೆ ಕೆಂಪು ಬಸ್‌ಗಳ ಕಾರ್ಯಾಚರಣೆ ಸ್ಯಾಟಲೆಟ್‌ ಬಸ್‌ ನಿಲ್ದಾಣದಿಂದಲೇ ಮುಂದುವರಿಯಲಿದೆ ಎಂದು ಕೆಎಸ್ಸಾರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೆಂಪೇಗೌಡ ಬಸ್‌ ನಿಲ್ದಾಣವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡುವ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಮಾರ್ಗಗಳ ಬಸ್‌ಗಳ ನಿರ್ಗಮನ ಅಂಕಣಗಳನ್ನು ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ, ಹೊಸದುರ್ಗ ವಲಯದ ಬಸ್‌ಗಳು ಹಾಗೂ ಬೆಂಗಳೂರು-ತುಮಕೂರು ತಡೆರಹಿತ ಸಾರಿಗೆಗಳನ್ನು ಟರ್ಮಿನಲ್‌- 2ಎಗೆ ವರ್ಗಾಯಿಸಲಾಗಿದೆ. ಅನಂತಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಗೌರಿಬಿದನೂರು, ಹಿಂದೂಪುರ, ಮಂತ್ರಾಲಯ, ಪುಟ್ಟಪರ್ತಿ ವಲಯದ ಬಸ್‌ಗಳನ್ನು ಟರ್ಮಿನಲ್‌-2ಕ್ಕೆ ವರ್ಗಾಯಿಸಲಾಗಿದೆ. ಡಿ.1ರಿಂದ ಈ ಬದಲಾದ ಅಂಕಣಗಳಿಂದ ಬಸ್‌ಗಳು ಸಂಚರಿಸಲಿವೆ ಎಂದು ಹೇಳಿದರು.